NEWSನಮ್ಮಜಿಲ್ಲೆನಮ್ಮರಾಜ್ಯ

ಸೆ.7ರಂದು EPS ಪಿಂಚಣಿದಾರರ 92ನೇ ಮಾಸಿಕ ಸಭೆ- ಹೈಕೋರ್ಟ್‌ ಮದುರೈ ಪೀಠ ಸೆ.2ರಂದು ಕೊಟ್ಟ ತೀರ್ಪಿನ ಚರ್ಚೆ: ನಂಜುಂಡೇಗೌಡ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇಪಿಎಸ್-95 ಪಿಂಚಣಿದಾರರ 92ನೇ ಮಾಸಿಕ ಸಭೆ ಸೆಪ್ಟೆಂಬರ್ 7ರ ಭಾನುವಾರ ಲಾಲ್ ಬಾಗ್ ಆವರಣದಲ್ಲಿ ಜರುಗಲಿದೆ ಎಂದು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.

ಇನ್ನು ಈ ಇಪಿಎಸ್-95 ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘ ಸ್ಥಾಪನೆಯಾಗಿ ಏಳೆಂಟು ವರ್ಷಗಳು ಕಳೆದಿವೆ. ಕಾರ್ಯಕರ್ತರ ಪರಿಶ್ರಮದಿಂದಾಗಿ ಸಂಘವು ಬೃಹದಾಕಾರವಾಗಿ ಬೆಳೆದಿದ್ದು, ಸುಮಾರು ಮೂರೂವರೆ ಸಾವಿರ ಸದಸ್ಯರನ್ನು ಹೊಂದಿದೆ. ಈ ಮೂಲಕ ನಿರಂತರವಾಗಿ ಇಪಿಎಸ್ ನಿವೃತ್ತದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸಂಘವು ಹಮ್ಮಿಕೊಂಡಿದ್ದು, ಅವುಗಳ ವಿವರ ತಮಗೂ ತಿಳಿದಿದೆ.

1) ವಿಜಯನಗರದ ಕಾರ್ಡ್ ರೋಡ್ ಅಸೋಸಿಯೇಷನ್‌ನಲ್ಲಿ ಆರು ಚಿಂತನಾಮಂತನ ಕಾರ್ಯಕ್ರಮಗಳು. 2) ವಿಜಯನಗರದ ಆದಿಚುಂಚನಗಿರಿ ಒಕ್ಕಲಿಗ ಸಮುದಾಯ ಭವನದಲ್ಲಿ ಎರಡು ಬಾರಿ ಹಿರಿಯ ವಕೀಲರಿಂದ ಇಪಿಎಸ್‌ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಗೋಷ್ಠಿ. 3) ಬೆಂಗಳೂರು ನಗರದ ಮೌರ್ಯವೃತ್ತ ಹಾಗೂ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಇಪಿಎಸ್ ನಿವೃತ್ತರ ಪ್ರತಿಭಟನಾ ಸಮಾವೇಶಗಳು. 4) ಲಾಲ್ ಬಾಗ್ ಆವರಣದಲ್ಲಿ 91ಬಾರಿ ನಡೆಸಿರುವ ಯಶಸ್ವಿ ಮಾಸಿಕ ಸಭೆಗಳು. 5) ನಗರದ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ನಡೆಸಿರುವ 29 ಪ್ರತಿಭಟನಾ ಸಭೆಗಳು. ಇದಕ್ಕೆಲ್ಲಾ ಜನಶಕ್ತಿಯೇ ಕಾರಣ ಹೊರತು, ಬೇರೆ……. ಯಾವ ಶಕ್ತಿಯು ಇಲ್ಲ.

ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಹೆಸರಿನಲ್ಲಿ ಏನೋ ಕಂಪನವಿದೆ. ಈ ನಾಡಿನ ಜನರ ಮನೆಯ ಬಾಗಿಲಿಗೆ ಬಸ್ ಸೇವೆ ನೀಡಿದ ಕೀರ್ತಿ ಸಂಸ್ಥೆಯ ಎಲ್ಲ ಸಿಬ್ಬಂದಿಗಳಿಗೂ ಸಲ್ಲುತ್ತದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆ ತನ್ನ ಕೀರ್ತಿಗಳಿಸಿದೆ. ಆದರೆ ಸಂಸ್ಥೆಯ ನೌಕರರು ಅಂದಿನಿಂದ ಇಂದಿಗೂ ತಮ್ಮ ಬದುಕಿಗಾಗಿ ಹೋರಾಟ ಮಾಡಬೇಕಾಗಿರುವುದು ವಿಪರ್ಯಾಸ.

ಈ ಎಲ್ಲರ ನಡುವೆಯೂ ಭರವಸೆ ಎಂಬುದು ಬದುಕಿನ ಜೀವ ಜಲ, ಅದನ್ನು ಎಂದಿಗೂ ಬತ್ತಲು ಬಿಡಬಾರದು. ಸಂಘರ್ಷವಿಲ್ಲದೆ ಏನನ್ನು ಪಡೆಯಲು ಸಾಧ್ಯವಿಲ್ಲ ಎಂಬುದು ತಮಗೂ ತಿಳಿದಿದೆ. ಅದರಂತೆ ಈ ಲಾಲ್ ಬಾಗ್‌ಗೂ ಇಪಿಎಸ್ ಪಿಂಚಣಿದಾರರಿಗೂ ಅವಿನವಬಾವ ಸಂಬಂಧ. ಏನೇ ಆಗಲಿ ದಶಕದಿಂದ ನಡೆದ ನಮ್ಮ ಹೋರಾಟ ವ್ಯರ್ಥವಾಗಲು ಬಿಡಬಾರದು ಎಂದು ನಂಜುಂಡೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ರಿಟ್ ಅರ್ಜಿ ಸಂಖ್ಯೆ 29573-29964/2024 ಮದರಾಸು ಉಚ್ಚ ನ್ಯಾಯಾಲಯದ, ಮದುರೈ ಪೀಠವು, ಬಿಎಚ್ಇಎಲ್ ನಿವೃತ್ತ ನೌಕರರು ಇಪಿಎಫ್ಒ ವಿರುದ್ಧ ದಾಖಲು ಮಾಡಿದ್ದ ಪ್ರಕರಣಗಳಲ್ಲಿ, ವಿನಯ್ತಿ ಸಂಸ್ಥೆ (ಈ ತೀರ್ಪು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನೌಕರರಿಗೂ ಅನ್ವಯವಾಗುತ್ತದೆ) ಇದೇ ಸೆಪ್ಟಂಬರ್ 02, 2025 ರಂದು ಮಹತ್ವದ ತೀರ್ಪು ನೀಡಿದ್ದು, ಅಧಿಕಾರಿಗಳು ಹೊರಡಿಸಿದ್ದ ಸುತ್ತೋಲೆ ದಿನಾಂಕ 18/01/2025 ಅನ್ನು ರದ್ದುಪಡಿಸಿ, ನಿವೃತ್ತರ ಬಾಕಿ ದೇಣಿಗೆಯನ್ನು ಪಡೆದು (2014ರ ನಂತರ ನಿವೃತ್ತರಾದವರು) ಹೆಚ್ಚುವರಿ ಪಿಂಚಣಿ ನೀಡಬೇಕೆಂದು ಆದೇಶ ನೀಡಿದೆ.

Advertisement

ಈ ತೀರ್ಪು ಇಪಿಎಸ್ ನಿವೃತ್ತರಲ್ಲಿ ಕೊಂಚ ನಿರಾಳತೆ ಮೂಡಿಸಿದೆ. ಕೇರಳ ರಾಜ್ಯದ ಉಚ್ಚ ನ್ಯಾಯಾಲಯದ ತಿರುಚಿ ಪೀಠವು ಸಹ ಇಂತಹದೇ ಪ್ರಕರಣದಲ್ಲಿ ಅಂದರೆ, 2014 ಕ್ಕೂ ಮುಂಚಿತವಾಗಿ ನಿವೃತ್ತರಾದ ನೌಕರರಿಗೆ ಸಂಬಂಧಿಸಿದಂತೆ ತೀರ್ಪು ನೀಡುವ ಸಂಭವವಿದ್ದು, ಈ ಎಲ್ಲ ಅಂಶಗಳ ಬಗ್ಗೆ ಸೂಕ್ತ ದಾಖಲಾತಿಗಳೊಂದಿಗೆ ಈ ಮಾಸಿಕ ಸಭೆಯಲ್ಲಿ ಚರ್ಚಿಸಲಾಗುವುದು.

78 ಲಕ್ಷ ನಿವೃತ್ತರ ಬದುಕು ಇಂದಿಗೂ ಅತಂತ್ರ ಸ್ಥಿತಿಯಲ್ಲಿದ್ದು, ಇದಕ್ಕೆ ಯಾರು ಕಾರಣ? ಎಂದು ಹೇಳಬೇಕಾಗಿಲ್ಲ, ಇಪಿಎಫ್ಒ ಅಧಿಕಾರಿಗಳ ಧೋರಣೆ, ಅಸಹಕಾರ, ನಿರ್ಲಜ್ಜ ನಡೆ, ಇಪಿಎಸ್ ನಿವೃತ್ತರನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಏನೇ ಆಗಲಿ ನಾವೆಲ್ಲರೂ ಒಂದೇ, ಒಗ್ಗಟ್ಟಾಗಿ ನಮ್ಮ ಗುರಿ ಮುಟ್ಟಲು, ಇದೇ ತಿಂಗಳು ನಗರದ ಫ್ರೀಡಂ ಪಾರ್ಕ್ ನಲ್ಲಿ ಇಪಿಎಸ್ ನಿವೃತ್ತರ ಬೃಹತ್ ಪ್ರತಿಭಟನಾ ಕಾರ್ಯಕ್ರಮದ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಅವರು ಈ ಮಾಸಿಕ ಸಭೆಯಲ್ಲಿ ನಿವೃತ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಮ್ಮ ಸಂಘದ ಎಲ್ಲ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟಿನ ಪದಾಧಿಕಾರಿಗಳು, ಸದಸ್ಯರು ಹಾಗೂ ಇತರೆ ಕಾರ್ಖಾನೆ ಹಾಗೂ ಕಂಪನಿಗಳ ನಿವೃತ್ತರು, ಭಾಗವಹಿಸಲಿದ್ದು, ಮುಖಂಡರು ಇತ್ತೀಚಿನ ಎಲ್ಲ ಬೆಳವಣಿಗೆಗಳು ಹಾಗೂ ಮುಂದಿನ ಹೋರಾಟದ ರೂಪರೇಷೆಯ ಬಗ್ಗೆ ಪ್ರಸ್ತಾಪಿಸಲಿದ್ದಾರೆ.

ಹೀಗಾಗಿ ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್‌ಬಾಗ್ ಹೂದೋಟದಲ್ಲಿ ವಾಯು ವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಭೇಟಿ, ವಿಚಾರ ವಿನಿಮಯ ಹಾಗೂ ಈ ಎಲ್ಲ ಅಂಶಗಳ ಬಗ್ಗೆ ಚರ್ಚಿಸಲು ಎಲ್ಲ ನಿವೃತ್ತ ನೌಕರರು ಸೆ.7ರ ಭಾನುವಾರ ಬೆಳಗ್ಗೆ 8ಗಂಟೆಗೆ ಆಗಮಿಸಬೇಕು ಎಂದು ಕಾರ್ಯಕಾರಿ ಸಮಿತಿ ಪರವಾಗಿ ನಂಜುಂಡೇಗೌಡ ವಿನಂತಿಸಿದ್ದಾರೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!