NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಒಕ್ಕೂಟದಿಂದ ಶಿವರಾತ್ರಿ ಬಳಿಕ ಅಮರಣಾಂತ ಉಪವಾಸ ಸತ್ಯಾಗ್ರಹ- ನಾಳಿದ್ದು ಜಂಟಿಯಿಂದ ಬೆಂ.ಚಲೋ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೇರಿದಂತೆ ನಾಲ್ಕೂ ನಿಗಮಗಳ ನೌಕರರ ಬೇಡಿಕೆ ಈಡೇರಿಸದೇ ಇರುವುದನ್ನು ಖಂಡಿಸಿ ಜ.29ರಂದು ಅಂದರೆ ನಾಳಿದ್ದು ಬೆಂಗಳೂರು ಚಲೋ ಅನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹಮ್ಮಿಕೊಂಡಿದೆ.

2020 ಜನವರಿ 1ರಿಂದ ಅನ್ವಯವಾಗುವಂತೆ ಬಾಕಿ ಇರುವ 38 ತಿಂಗಳ ಹಿಂಬಾಕಿ ನೀಡಿಲ್ಲ. 2024ರ ಜನವರಿ 1ರಿಂದ ವೇತನ ಪರಿಷ್ಕರಣೆ ಆಗಬೇಕು. ಈ ಬಗ್ಗೆ ಹಲವು ಬಾರಿ ಸರ್ಕಾರದೊಂದಿಗೆ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಕ್ರಿಯಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಜ.25ರೊಳಗೆ ಶೇ.17ರಷ್ಟು ವೇತನ ಹೆಚ್ಚಳ ಆಗಬಹುದು ಎನ್ನಲಾಗಿತ್ತು. ಆದರೆ, ಈ ಶೇ.17ರಷ್ಟು ವೇತನ ಹೆಚ್ಚಳಕ್ಕೆ ನೌಕರರು ಒಪ್ಪುವುದಿಲ್ಲ ಎಂಬ ಬಗ್ಗೆ ಸರ್ಕಾಕ್ಕೂ ಮನವರಿಕೆ ಆಗಿದೆ. ಹಾಗಾಗಿ ಈ ಬಗ್ಗೆ ಘೋಷಣೆ ಮಾಡದೆ ಯಥಾಸ್ಥಿತಿ ಮುಂದುವರಿಯಲಿ ಎಂದು ಸರ್ಕಾರ ಯಾವುದೇ ನಿಲುವನ್ನು ತೆಗೆದುಕೊಳ್ಳದೆ ತಟಸ್ಥವಾಗಿದೆ.

ಜ.16ರಂದು ಸಾರಿಗೆ ಸಚಿವರೊಂದಿಗೆ ಸಭೆ ಕರೆಯಲಿಲ್ಲ: ಇನ್ನು ಇದೇ ಜ.14ರ ಬುಧವಾರ ನಾಲ್ಕೂ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಸಭೆ ಸಾರಿಗೆ ಸಚಿವರೊಂದಿಗೆ ನಡೆದಿದೆ. ಈ ಸಭೆ ಬಳಿಕ ನಿಮ್ಮನ್ನು ಜ.16ರಂದು ಸಾರಿಗೆ ಸಚಿವರೊಂದಿಗೆ ಸಭೆ ಕರೆಯಲಾಗುವುದು ಎಂದು ಕೆಎಸ್‌ಆರ್‌ಟಿಸಿ ಎಂಡಿ ಅಕ್ರಮ್‌ ಪಾಷ ಜಂಟಿ ಕ್ರಿಯಾ ಸಮಿತಿಯವರಿಗೆ ತಿಳಿಸಿದ್ದರು ಎನ್ನಲಾಗಿದೆ.

ಈ ಸಂಬಂಧ ಜ.14ರಂದು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಕೂಡ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿದ್ದಾರೆ. ಆದರೆ, ಇದೇ ವೇಳೆಗೆ ಕೆಎಸ್‌ಆರ್‌ಟಿಸಿ ಎಂಡಿ ಅವರು ಶುಕ್ರವಾರ ನಿಮ್ಮನ್ನು ಕರೆಯಲಾಗುವುದು ಎಂದು ತಿಳಿಸಿದ್ದರು. ಆದರೆ, ಜ.14ರಂದು ಸಾರಿಗೆ ಸಚಿವರೊಂದಿಗೆ ಎಂಡಿಗಳ ಸಭೆ ನಡೆದ ಬಳಿಕ ನಮ್ಮ ಸಭೆ ಕರೆದಿಲ್ಲದಿರುವುದು ಏಕೆ ಎಂದು ಎಂಡಿ ಅವರಲ್ಲಿ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಕೇಳಿದ್ದಾರೆ. ಇದಕ್ಕೆ ಸಮಂಜಸವಾದ ಉತ್ತರ ಎಂಡಿ ಅವರಿಂದ ಬಾರದಿರುವುದಕ್ಕೆ ಆಕ್ರೋಶಗೊಂಡಿದ್ದು, ಇದೇ 29ರಂದು ಬೆಂಗಳೂರು ಚಲೋ ನಡೆಸಲು ನಿರ್ಧರಿಸಿದ್ದಾರೆ.

ಸಂಕ್ರಾಂತಿ ಮುಗಿದರು ಇಲ್ಲ ಯಾವುದೇ ನಿರ್ಧಾರ: ಇನ್ನು ಈಗಾಗಲೇ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೌಕರರ ಬೇಡಿಕೆ ಈಡೇರಿಸದೇ ಇರುವುದನ್ನು ಖಂಡಿಸಿ ಕರಪತ್ರಗಳನ್ನು ಹಂಚಿ ಹೋರಾಟಕ್ಕೆ ಕರೆ ನೀಡಿದ್ದು, ದಿಢೀರ್‌ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಕೆ ನೀಡಿತ್ತು. ಆದರೆ, ಸರ್ಕಾರ ಇಲ್ಲ ನಾವು ಸಂಕ್ರಾಂತಿ ವೇಳೆ ಒಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಮಯ ಕೇಳಿತ್ತು.

ಆದರೆ ಜ.15ರೊಳಗೆ ಮತ್ತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಜನವರಿ 25ರೊಳಗೆ ಏನಾದರೂ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳಿಗೆ ಸರ್ಕಾರದಿಂದ ಯಾವುದೇ ಉತ್ತರ ಬಾರದಿರುವುದರಿಂದ ಸಿಟ್ಟಿಗೆದ್ದಿದ್ದು, ಶತಾಯಗತಾಯ ಈ ಬಾರಿ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಲೇಬೇಕು ಇಲ್ಲದಿದ್ದರೆ ಹೋರಾಟದ ಮೂಲಕವೇ ಪಡೆಯಬೇಕು ಎಂಬ ದೃಢ ನಿರ್ಧಾರಕ್ಕೆ ಬಂದಿದ್ದಾರೆ.

ಶಿವರಾತ್ರಿ  ಬಳಿಕ ಉಪವಾಸ ಸತ್ಯಾಗ್ರಹ: ಇನ್ನು ಇತ್ತ ಜ.29ರಂದು ಏನಾಗುತ್ತದೆ ಎಂದು ಕಾದು ನೋಡುತ್ತಿರುವ ಸಾರಿಗೆ ನೌಕರರ ಒಕ್ಕೂಟ ಈಗಾಗಲೇ ಶಿವರಾತ್ರಿ ಮುಗಿದ ಬಳಿಕ ಉಪವಾಸ ಸತ್ಯಾಗ್ರಹ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ವಿಭಾಗದ ಪ್ರಚಾರ ಸಮಿತಿ ಉಪಾಧ್ಯಕ್ಷ ಪ್ರೊ.ಕೆ.ಈ.ರಾಧಾಕೃಷ್ಣ ಅವರು ಕೂಡ ಉಪವಾಸ ಸತ್ಯಾಗ್ರಹ ಕೂರುವುದಾಗಿದೆ ತಿಳಿಸಿದ್ದಾರೆ.

ಅಲ್ಲದೆ ನೌಕರರ ಹೊಟ್ಟೆ ತುಂಬಬೇಕಲ್ಲ ಅದಕ್ಕೆ ತಾವು ಕೊಟ್ಟ ಭರವಸೆ ಈಡೇರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರನ್ನು ಒತ್ತಾಯಿಸಿದ್ದಾರೆ.

ಒಟ್ಟಾರೆ ಈ ಬಾರಿ ಸರಿ ಸಮಾನ ವೇತನ ಆಗಲೇಬೇಕು ಎಂದು ಸಾರಿಗೆ ನೌಕರರ ಒಕ್ಕೂಟ ಹಠ ಮಾಡುತ್ತಿದ್ದರೆ ಇತ್ತ ಇಲ್ಲ ಕಾರ್ಮಿಕ ಕಾಯ್ದೆಯಡಿ ವೇತನ ಒಪ್ಪಂದ ಆಗಬೇಕು ಎಂದು ಜಂಟಿ ಕ್ರಿಯಾ ಸಮಿತಿ ಹೇಳುತ್ತಿದೆ. ಈ ನಡುವೆ ವೇತನ ಒಪ್ಪಂದಕ್ಕೆ ಆಗ್ರಹಿಸಿ ಜ.29ರಂದು ಜಂಟಿ ಕ್ರಿಯಾ ಸಮಿತಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದೆ.

ಇತ್ತ ಒಕ್ಕೂಟ ಜ.29ರವರೆಗೂ ಕಾದು ನೋಡಿ ಬಳಿಕ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಸಿದ್ದವಾಗಿದ್ದು ಈಗಾಗಲೇ ಎಂದಿನಿಂದ ಉಪವಾಸ ಆರಂಭಿಸಬೇಕು ಎಂಬುದರ ದಿನಾಂಕವನ್ನು ನಿಗದಿಮಾಡಿಕೊಂಡು ಸಜ್ಜಾಗಿದೆ ಎಂಬ ಮಾಹಿತಿ ವಿಜಯಪಥಕ್ಕೆ ಲಭ್ಯವಾಗಿದೆ.

Megha
the authorMegha

Leave a Reply

error: Content is protected !!