NEWSನಮ್ಮಜಿಲ್ಲೆಬೆಂಗಳೂರು

ಸುಲಭ ಆನ್‌ಲೈನ್ ಪ್ರಕ್ರಿಯೆಯಿಂದ ತ್ವರಿತವಾಗಿ ಇ-ಖಾತಾ ಕಚೇರಿಗಳಿಗೆ ಭೇಟಿ ಅಗತ್ಯವಿಲ್ಲ: ಮುನೀಶ್ ಮೌದ್ಗಿಲ್

ವಿಜಯಪಥ ಸಮಗ್ರ ಸುದ್ದಿ
  • ಟೌನ್ ಹಾಲ್‌ನಲ್ಲಿ ಬೆಂಗಳೂರು ಸ್ಥಳೀಯ ಖಾಸಗಿ ಉದ್ಯಮಿಗಳಿಗೆ ಇ-ಖಾತಾ ಸೇವೆಗಳ ಕುರಿತು ಓರಿಯೆಂಟೇಶನ್

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ವಿತರಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಸರಳವಾದ ಆನ್‌ಲೈನ್ ಪ್ರಕ್ರಿಯೆಯ ಮೂಲಕ ಇ-ಖಾತಾ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರಿಂದ ನಾಗರಿಕರು ಯಾವುದೇ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ನಗರದ ಸರ್. ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದಲ್ಲಿ ಆಯೋಜಿಸಿದ್ದ ಸ್ಥಳೀಯ ಖಾಸಗಿ ಉದ್ಯಮಿಗಳ(Local Private Entrepreneurs-LPEs) ಮೂಲಕ ಇ-ಖಾತಾ ಸೇವೆಗಳ ಕುರಿತ ಓರಿಯೆಂಟೇಶನ್ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇ-ಖಾತಾ ಅರ್ಜಿಗಳನ್ನು ಆನ್‌ಲೈನ್ ಮೂಲಕ ತಪ್ಪಿಲ್ಲದಂತೆ ಸಲ್ಲಿಸಲು ಹಾಗೂ ನಾಗರಿಕರಿಗೆ ಡಿಜಿಟಲ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಾಯ ಮಾಡುವಂತೆ ಉದ್ಯಮಿಗಳಿಗೆ ಸೂಚಿಸಿದರು. ನಾಗರಿಕರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರ ಅರ್ಜಿಗಳು ನಿಖರವಾಗಿ ಸಲ್ಲಿಕೆಯಾಗುವಂತೆ ಸಹಕರಿಸುವುದು ನಿಮ್ಮ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಮನವರಿಕೆ ಮಾಡಿದರು.

ಕಚೇರಿಗಳಿಗೆ ಭೇಟಿ ಅಥವಾ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ: ಇ-ಖಾತಾ ಸಂಬಂಧಿತ ವಿಷಯಗಳಿಗೆ ನಾಗರಿಕರು ಅಥವಾ ಎಲ್‌ಪಿಇಗಳು ಯಾವುದೇ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಅಥವಾ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸುವ ಅಗತ್ಯವಿಲ್ಲ. ಇ-ಖಾತಾ ವಿತರಣೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯುವುದರಿಂದ ಮಧ್ಯವರ್ತಿಗಳೊಂದಿಗೆ ಸಂಪರ್ಕ ಸಾಧಿಸುವುದನ್ನು ತಪ್ಪಿಸಿಕೊಳ್ಳುವಂತೆ ಸೂಚಿಸಲಾಯಿತು. ಸರಾಸರಿಯಾಗಿ 3 ರಿಂದ 4 ದಿನಗಳೊಳಗೆ ನಾಗರಿಕರ ಇ-ಖಾತಾ ಅರ್ಜಿಗಳನ್ನು ಅನುಮೋದಿಸಲಾಗುತ್ತಿದೆ ಎಂದು ತಿಳಿಸಿದರು.

ಕಾಲಮಿತಿಯಲ್ಲಿ ಪರಿಶೀಲನೆ ಮತ್ತು ಸ್ವಯಂ ಅನುಮೋದನೆ: ಪ್ರಸ್ತುತ ಸುಮಾರು ಶೇ.99 ರಷ್ಟು ಇ-ಖಾತಾ ಅರ್ಜಿಗಳನ್ನು ಪರಿಶೀಲಿಸಿ ಕಾಲಮಿತಿಯೊಳಗಾಗಿ ಅನುಮೋದಿಸಲಾಗುತ್ತಿದೆ. ಅಂತಿಮ ಇ-ಖಾತಾ ಅರ್ಜಿಯನ್ನು 5 ಕೆಲಸದ ದಿನಗಳೊಳಗೆ ಪರಿಶೀಲಿಸದಿದ್ದರೆ, ವ್ಯವಸ್ಥೆಯೇ ಸ್ವಯಂಚಾಲಿತವಾಗಿ ಅನುಮೋದನೆ ಪ್ರಕ್ರಿಯೆಯನ್ನು ಪ್ರಾರಂಭಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ನಾಗರಿಕರ ಅರ್ಜಿಗಳನ್ನು ಯಾರೂ ತಡೆಹಿಡಿಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಅಹವಾಲು ನಿವಾರಣಾ ವ್ಯವಸ್ಥೆ: ಇ-ಖಾತಾ ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದ ಅಹವಾಲುಗಳನ್ನು ಸಲ್ಲಿಸಲು ನಾಗರಿಕರು ಹಾಗೂ ಸ್ಥಳೀಯ ಖಾಸಗಿ ಉದ್ಯಮಿಗಳಿಗಾಗಿ ವಿಶೇಷ ಪೋರ್ಟಲ್ ಅನ್ನು ರಚಿಸಲಾಗಿದೆ. ಈ ಕುರಿತು https://support.bbmpgov.in/ehelpline/](https://support.bbmpgov.in/ehelpline/ ಲಿಂಕ್ ಮೂಲಕ ಅಹವಾಲುಗಳನ್ನು ಸಲ್ಲಿಸಬಹುದು. ವೈಯಕ್ತಿಕ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳಿದ್ದಲ್ಲಿ 9480683695 ಅಧಿಕೃತ ವಾಟ್ಸಾಪ್ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ಅದೇ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಇ-ಖಾತಾ ಸೇವೆಗಳ ಕುರಿತು ಪ್ರಾತ್ಯಕ್ಷಿಕೆ: ಕಾರ್ಯಕ್ರಮದ ವೇಳೆ ಇ-ಖಾತಾ ಸೇವೆಗಳು, ಆನ್‌ಲೈನ್ ಅರ್ಜಿ ಸಲ್ಲಿಕೆ ವಿಧಾನ ಹಾಗೂ ಡಿಜಿಟಲ್ ವರ್ಕ್-ಫ್ಲೋ ಕುರಿತು ಸ್ಥಳೀಯ ಖಾಸಗಿ ಉದ್ಯಮಿಗಳಿಗೆ ವಿವರವಾದ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು. ಇದರಿಂದ ವ್ಯವಸ್ಥೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ಹಾಗೂ ನಾಗರಿಕರಿಗೆ ಉತ್ತಮ ಸಹಾಯ ಒದಗಿಸಲು ನೆರವಾಗಲಿದೆ.

ಎಲ್‌ಪಿಇಗಳಿಂದ ಪ್ರಶ್ನೋತ್ತರ ಹಾಗೂ ಸಲಹೆಗಳು: ಕಾರ್ಯಕ್ರಮದಲ್ಲಿ ಪ್ರಶ್ನೋತ್ತರ ಸಂವಾದವೂ ನಡೆಯಿತು. ಈ ವೇಳೆ ಸ್ಥಳೀಯ ಖಾಸಗಿ ಉದ್ಯಮಿಗಳು ಇ-ಖಾತಾ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು. ಅವರಿಂದ ಬಂದ ಸಲಹೆಗಳನ್ನು ದಾಖಲಿಸಿಕೊಂಡು, ಅವುಗಳನ್ನು ಪರಿಶೀಲಿಸುವಂತೆ ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಯಿತು.

ಪ್ರತಿ ತಿಂಗಳು ಸಮನ್ವಯ ಸಭೆ: ಇದೇ ವೇಳೆ ಸ್ಥಳೀಯ ಖಾಸಗಿ ಉದ್ಯಮಿಗಳೊಂದಿಗೆ ಪ್ರತಿ ತಿಂಗಳು ಸಮನ್ವಯ ಸಭೆಗಳನ್ನು ನಡೆಸಿ ಅಹವಾಲುಗಳು ಮತ್ತು ಕಾರ್ಯನಿರ್ವಹಣೆಯ ಸವಾಲುಗಳನ್ನು ಪರಿಹರಿಸಲಾಗುವುದು. ಜೊತೆಗೆ ತಿರಸ್ಕೃತಗೊಂಡ ಇ-ಖಾತಾ ಅರ್ಜಿಗಳನ್ನು ಪರಿಶೀಲಿಸಲು ‘ರಿಜೆಕ್ಷನ್ ಆಡಿಟ್ ತಂಡ’ವನ್ನು ರಚಿಸಲಾಗಿದ್ದು, ತಪ್ಪಾಗಿ ತಿರಸ್ಕೃತಗೊಂಡಿದ್ದರೆ ಪರಿಶೀಲಿಸಿ ಅನುಮೋದನೆ ನೀಡಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಹಿತಿ ತಂತಜ್ಞಾನ(ಇ-ಆಸ್ತಿ)ದ ಉಪ ಆಯುಕ್ತ ಮದನ್ ಮೋಹನ್ ಸಿ., ಕಂದಾಯ ವಿಭಾಗದ ಜಂಟಿ ಆಯುಕ್ತರಾದ ಲಕ್ಷ್ಮೀದೇವಿ, ಕಂದಾಯ ಅಧಿಕಾರಿಗಳು ಮತ್ತು ಸ್ಥಳೀಯ ಖಾಸಗಿ ಉದ್ಯಮಿಗಳು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!
Latest news
BMTC: ಜೂನ್‌ 18ರೊಳಗೆ ನಿವೃತ್ತ ನೌಕರರು ಏ-2018 ರಿಂದ ಜು-2018ರವರೆಗಿನ ತುಟ್ಟಿಭತ್ಯೆ ಪಡೆಯಲು ಬ್ಯಾಂಕ್‌ ಖಾತೆ ವಿವರ ... ಕುಡಿಯುವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ: ಸಚಿವ ಖಂಡ್ರೆ ಎಚ್ಚರಿಕೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೊಂದೇ ಆಯುಧ: ನ್ಯಾ. ಶ್ರೀಶೈಲ್ ಭೀಮಸೇನ ಬಾಗಡಿ ನ್ಯಾಯಾಲಯದ ಆದೇಶ ಪಾಲಿಸದ KKRTC: ಮೃತರ ಕುಟುಂಬಕ್ಕೆ 36 ಲಕ್ಷ ರೂ. ಪರಿಹಾರ ನೀಡದಕ್ಕೆ ಔರಾದ್ ಘಟಕದ 2ಬಸ್‌ಗಳ ಜಪ್ತಿ ಸರ್ಕಾರದಿಂದ ಹೊರಬಿತ್ತು ಮಹತ್ವದ ಆದೇಶ: ಇನ್ನುಮುಂದೆ ಸರ್ಕಾರಿ ಪುರುಷ ನೌಕರರು ಪಡೆಯಬಹುದು 6ತಿಂಗಳ ಶಿಶುಪಾಲನಾ ರಜೆ KSRTC: ಇಂದಿನಿಂದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಣೆಗೆ ಸರ್ಕಾರದ ಆದೇಶ ಬಿಡದಿ ಟೌನ್ ಶಿಪ್‌: ರೈತರ ವಿರೋಧದ ನಡುವೆಯೂ ಎಕರೆಗೆ 2.14 ಕೋಟಿ ರೂ. ದರ ನಿಗದಿ- ಭೂಸ್ವಾಧೀನಕ್ಕೆ ಮುಂದಾದ ಸರ್ಕಾರ ಕರೆಂಟ್‌ ಬಿಲ್‌: ವಿದ್ಯುತ್ ವಿತರಣಾ ಕಂಪನಿಗಳ ಅನ್ಯಾಯದ ಬಿಲ್ಲಿಂಗ್ ಪದ್ಧತಿಗೆ ಬ್ರೇಕ್‌- KERC ಆದೇಶ ಪಾಲನೆಗೆ ಗ್ರಾಹಕರ... ಗೃಹಲಕ್ಷ್ಮಿಯೋಜನೆಗೆ ಮತ್ತೆ ಹೊಸದಾಗಿ ಅರ್ಜಿ ಸ್ವೀಕರಿಸುವ ಚಿಂತನೆಯಲ್ಲಿ ಸರ್ಕಾರ! ಮೂರು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ‘ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಿಸಲು ಸರ್ಕಾರ ನಿರ್ಧಾರ: ಸಾರಿಗೆ ಸಚಿವ ಬೈರತಿ ...