NEWSನಮ್ಮರಾಜ್ಯ

ಕರೆಂಟ್‌ ಬಿಲ್‌: ವಿದ್ಯುತ್ ವಿತರಣಾ ಕಂಪನಿಗಳ ಅನ್ಯಾಯದ ಬಿಲ್ಲಿಂಗ್ ಪದ್ಧತಿಗೆ ಬ್ರೇಕ್‌- KERC ಆದೇಶ ಪಾಲನೆಗೆ ಗ್ರಾಹಕರು ಖುಷ್‌

ಬಿಲ್ ಉತ್ಪಾದನೆ ಮತ್ತು ವಿತರಣೆಯಲ್ಲಿನ ವಿಳಂಬದಿಂದಾಗಿ ವಿದ್ಯುತ್ ಬಿಲ್‌ಗಳ ಪಾವತಿ ಸಮಯ ಕಡಿಮೆಯಾದ ಬಗ್ಗೆ ಗ್ರಾಹಕರಿಂದ ಆಯೋಗವು ಹಲವಾರು ದೂರುಗಳನ್ನು ಸ್ವೀಕರಿಸಿತ್ತು. ಬಳಿಕ ಬಿಲ್‌ ಕೊಡುವ ದಿನಾಂಕದಿಂದ 15 ದಿನಗಳವರೆಗೆ ಗ್ರಾಹಕರು ಬಿಲ್‌ ಕಟ್ಟಬೇಕು ಮತ್ತು ರಜಾ ದಿನಗಳು ಬಂದರೆ ಅದು ಮುಂದಕ್ಕೆ ಹೋಗಬೇಕು ಎಂದು ಆದೇಶದಲ್ಲಿ ಹೇಳಿತ್ತು. ಅದು ಇದೇ ಜೂನ್‌ನಿಂದ ಪಾಲನೆಯಾಗುತ್ತಿದ್ದು, ಪ್ರತಿಯೊಬ್ಬರೂ ಇದನ್ನು ನಿಮ್ಮ ಮನೆಯ ವಿದ್ಯುತ್‌ ಬಿಲ್‌ನ ಕೆಳಭಾಗದಲ್ಲಿ ಚೆಕ್‌ ಮಾಡಬಹುದಾಗಿದೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಗ್ರಾಹಕರ ವಿದ್ಯುತ್ ಬಿಲ್‌ಗಳಿಗೆ 15 ದಿನಗಳ ಕನಿಷ್ಠ ಪಾವತಿ ಅವಧಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿದ್ದು, ಆ ಆದೇಶ ಜೂನ್‌ ತಿಂಗಳಿಂದ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ.

ಇದು ಪಾಲನೆಯಾಗುತ್ತಿರುವುದನ್ನು ಪ್ರತಿಯೊಬ್ಬರು ಖಚಿತಪಡಿಸಿಕೊಳ್ಳಲು ತಮ್ಮ ಕರೆಂಟ್‌ ಬಿಲ್‌ನ ಕೆಳಗಡೆ ಇರುವ ದಿನಾಂಕ ಮತ್ತು ಎಷ್ಟು ಗಂಟೆಗೆ ಬಿಲ್‌ ಕೊಡಲಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತಿದ್ದು, ಅದನ್ನು ಪರಿಶೀಲನೆ ಮಾಡಬಹುದಾಗಿದೆ.

ಹೌದು! ರಾಜ್ಯದಲ್ಲಿ ವಿದ್ಯುತ್ ವಿತರಣಾ ಕಂಪನಿಗಳು ಅನುಸರಿಸುತ್ತಿರುವ ಅನ್ಯಾಯದ ಬಿಲ್ಲಿಂಗ್ ಪದ್ಧತಿಗಳಿಂದ ವಿದ್ಯುತ್ ಪಡೆಯುತ್ತಿರುವ ಪ್ರತಿಯೊಬ್ಬ ಗ್ರಾಹಕರನ್ನೂ ರಕ್ಷಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಈ ಒಂದು ಪ್ರಮುಖ ಆದೇಶವನ್ನು ಹೊರಡಿಸಿದೆ.

ಮೇ 21.2026ರಂದು ಹೊರಡಿಸಲಾದ ಈ ಆದೇಶವನ್ನು ಅಧ್ಯಕ್ಷ ಪಿ.ರವಿ ಕುಮಾರ್ ಮತ್ತು ಸದಸ್ಯರಾದ ಎಚ್‌.ಕೆ.ಜಗದೀಶ್ ಮತ್ತು ಜಾವೈದ್ ಅಖ್ತರ್ ಅವರನ್ನೊಳಗೊಂಡ ಆಯೋಗದ ಪೀಠವು ಅಂಗೀಕರಿಸಿದೆ. ಬಿಲ್ ಉತ್ಪಾದನೆ ಮತ್ತು ವಿತರಣೆಯಲ್ಲಿನ ವಿಳಂಬದಿಂದಾಗಿ ವಿದ್ಯುತ್ ಬಿಲ್‌ಗಳ ಪಾವತಿ ಸಮಯ ಕಡಿಮೆಯಾದ ಬಗ್ಗೆ ಗ್ರಾಹಕರಿಂದ ಆಯೋಗವು ಹಲವಾರು ದೂರುಗಳನ್ನು ಸ್ವೀಕರಿಸಿದ ನಂತರ ಈ ನಿರ್ಧಾರ ತೆಗೆದುಕೊಂಡಿದೆ.

ಕರ್ನಾಟಕ ವಿದ್ಯುತ್ ಸರಬರಾಜು ಸಂಹಿತೆ, 2004ರ ಪ್ರಕಾರ, ವಿತರಣಾ ಪರವಾನಗಿದಾರರು ಗ್ರಾಹಕರಿಗೆ ಬಿಲ್ ದಿನಾಂಕದಿಂದ ಕನಿಷ್ಠ ಹದಿನೈದು ದಿನಗಳ ಕಾಲಾವಕಾಶವನ್ನು ನೀಡಬೇಕಾಗುತ್ತದೆ. ಪಾವತಿಯ ಅಂತಿಮ ದಿನಾಂಕವು ಸಾರ್ವಜನಿಕ ರಜಾದಿನಗಳಲ್ಲಿ ಬಂದರೆ, ಗಡುವನ್ನು ಸ್ವಯಂಚಾಲಿತವಾಗಿ ಮುಂದಿನ ಕೆಲಸದ ದಿನಕ್ಕೆ ವಿಸ್ತರಿಸಬೇಕು ಎಂದು ನಿಯಮಗಳು ಹೇಳುತ್ತವೆ. ಆದಾಗ್ಯೂ, ಅನೇಕ ವಿತರಣಾ ಕಂಪನಿಗಳು ಈ ನಿಬಂಧನೆಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಆಯೋಗವು ಗಮನಿಸಿದೆ.

ಆಯೋಗದ ಸಂಶೋಧನೆಗಳ ಪ್ರಕಾರ, ವಿದ್ಯುತ್ ಬಿಲ್‌ಗಳನ್ನು ಹೆಚ್ಚಾಗಿ ನಿಗದಿತ ಬಿಲ್ ದಿನಾಂಕದ ನಂತರ ಬಂದು ಬಿಲ್‌ ರೀಡ್‌ ಮಾಡಿ ಗ್ರಾಹಕರಿಗೆ ಮೇ ಕೊನೆಯವರೆಗೂ ಕೊಡಲಾಗುತ್ತಿತ್ತು. ಆದರೆ, ಜೂನ್‌ ತಿಂಗಳಿಂದ ಅದಕ್ಕೆ ಬ್ರೇಕ್‌ ಬಿದ್ದಿದ್ದು, ಅವರು ಬಿಲ್‌ ರೀಡ್‌ ಮಾಡಿ ಕೊಡುವುದು ವಿಳಂಬವಾದರೂ ಗ್ರಾಹಕರಿಗೆ ಬಿಲ್ ನೀಡಿದ ನಿಜವಾದ ದಿನಾಂಕದ ಬದಲು ಮೂಲ ನಿಗದಿತ ಬಿಲ್ ದಿನಾಂಕದಿಂದಲೇ ಪಾವತಿಗೆ ಅಂತಿಮ ದಿನಾಂಕವನ್ನು ಲೆಕ್ಕಹಾಕುವುದಕ್ಕೆ ಕೊನೆಮೊಳೆ ಹೊಡೆಯಲಾಗಿದೆ.

ಈ ಪರಿಣಾಮವಾಗಿ, ಈ ಹಿಂದೆ ಇದ್ದ ಗ್ರಾಹಕರು ತಮ್ಮ ವಿದ್ಯುತ್ ಬಿಲ್‌ಗಳನ್ನು ಪಾವತಿಸಲು 15ದಿನಗಳ ಬದಲಿಗೆ ಇನ್ನು ಕಡಿಮೆ ದಿನಗಳಲ್ಲೇ ವಿದ್ಯುತ್‌ ಪಾವತಿಸಬೇಕಿದ್ದ, ಹಾಗೂ ಇದರಿಂದ ಆಗುತ್ತಿದ್ದ ಅನಾನುಕೂಲತೆ, ಗೊಂದಲ ಮತ್ತು ಅನಗತ್ಯ ಆರ್ಥಿಕ ಒತ್ತಡ ದೂರವಾದಂತಾಗಿದೆ.

ಇನ್ನು ಹಿಂದಿನ ಪದ್ಧತಿಯಿಂದ ಗ್ರಾಹಕ ರಕ್ಷಣೆ ಮಾಡುವ ಮನೋಭಾವದಿಂದ ನಾಗರಿಕರಿಗೆ ಸಕಾಲಿಕ ಪಾವತಿಗಳನ್ನು ಮಾಡಲು ನ್ಯಾಯಯುತ ಮತ್ತು ಸಮಂಜಸವಾದ ಅವಕಾಶವನ್ನು ನೀಡಲಾಗಿದೆ. ಇದಕ್ಕೆ KERC ಆಯೋಗವು ವಿದ್ಯುತ್ ಸರಬರಾಜು ಸಂಹಿತೆಯ ಷರತ್ತು 11ರ ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಿದ್ದು ಮತ್ತು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವಿದ್ಯುತ್ ವಿತರಣಾ ಪರವಾನಗಿದಾರರಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ.

ಈ ಹೊಸ ನಿರ್ದೇಶನಗಳ ಅಡಿಯಲ್ಲಿ, ಪರವಾನಗಿದಾರರು ಕೊಡುವ ಪ್ರತಿಯೊಂದು ವಿದ್ಯುತ್ ಬಿಲ್‌ನಲ್ಲಿ ಸಿಸ್ಟಮ್-ರಚಿತ ಮುದ್ರಣ ಅಥವಾ ಸಮಯದ ಮುದ್ರೆಯ ಮೂಲಕ ವಿತರಣೆಯ ನಿಖರವಾದ ದಿನಾಂಕ ಮತ್ತು ಸಮಯವನ್ನು ಸ್ಪಷ್ಟವಾಗಿ ನಮೂದಿಸಬೇಕು. ಪಾವತಿ ಬಾಕಿ ದಿನಾಂಕವನ್ನು ಈಗ ಬಿಲ್ ವಿತರಣೆಯಾದ ದಿನದಿಂದ 15 ದಿನಗಳವರೆಗೆ ಅದು ಇರಬೇಕು. ಅದನ್ನು ಬಿಟ್ಟು ಮೂಲತಃ ಯೋಜಿಸಲಾದ ಬಿಲ್ಲಿಂಗ್ ದಿನಾಂಕದಿಂದ ಅಲ್ಲ ಎಂದು ಆಯೋಗವು ನಿರ್ದೇಶಿಸನ ನೀಡಿದ್ದು ಈ ನಿರ್ದೇಶನ ಜೂನ್‌ ತಿಂಗಳಿನಿಂದ ಪಾಲನೆಯಾಗುತ್ತಿದೆ.

ಬಿಲ್ಲಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಂಡಿದ್ದು, ಅನುಮೋದಿತ ಬಿಲ್ಲಿಂಗ್ ಚಕ್ರವನ್ನು ತಡವಾಗಿ ಅಥವಾ ಮೀರಿ ಬಿಲ್‌ಗಳನ್ನು ನೀಡಿದ ಸಂದರ್ಭಗಳಲ್ಲಿ, ಗ್ರಾಹಕರು ಯಾವ ದಿನಾಂಕದಂದು ಬಿಲ್ ಪಡೆಯುತ್ತಾರೋ ಆ ದಿನಾಂಕದಿಂದ ಪಾವತಿ ಮಾಡಲು ಕನಿಷ್ಠ ಹದಿನೈದು ದಿನಗಳವರೆಗೂ ಬಿಲ್‌ ಪಾವತಿಗೆ ಅವಕಾಶ ನೀಡುವ ಬಗ್ಗೆ ಸ್ಪಷ್ಟವಾಗಿ ಆದೇಶವಿದೆ.

ಇನ್ನು ಈ ಆದೇಶ ಜೂನ್ 1.2026 ರಂದು ಅಥವಾ ನಂತರ ನೀಡಲಾಗುತ್ತಿರುವ ಪ್ರತಿಯೊಂದು ವಿದ್ಯುತ್ ಬಿಲ್‌ಗೆ ಎಲ್ಲ ವಿತರಣಾ ಪರವಾನಗಿದಾರರು ಈ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಈ ನಿಯಮಗಳ ಯಾವುದೇ ಉಲ್ಲಂಘನೆ ಆದರೂ ಕೂಡ 2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 142ರ ಅಡಿಯಲ್ಲಿ ಕಠಿಣ ಕಾನೂನು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಆಯೋಗವು ಎಚ್ಚರಿಕೆ ನೀಡಿದೆ.

ಅಲ್ಲದೆ ಈ ನಿಯಮಗಳನ್ನು ಉಲ್ಲಂಘಿಸುವುದು ಕಂಡುಬಂದರೆ ವಿತರಣಾ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದಾಗಿದೆ ಎಂದು ಆದೇಶದಲ್ಲಿ ಕೆಇಆರ್‌ಸಿ ಸ್ಪಷ್ಟವಾಗಿ ಹೇಳಿದೆ. ಕರ್ನಾಟಕದ ವಿದ್ಯುತ್ ಕ್ಷೇತ್ರದಲ್ಲಿ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಗ್ರಾಹಕರ ಹಕ್ಕುಗಳನ್ನು ಸುಧಾರಿಸಲು ಆಯೋಗವು ಇತ್ತೀಚಿನ ಈ ನಿರ್ದೇಶನವನ್ನು ಒಂದು ಪ್ರಮುಖ ಹೆಜ್ಜೆಯಾಗಿ ಪರಿಗಣಿಸಿ ಇಲ್ಲಿ ಗ್ರಾಹಕರನ್ನು ರಕ್ಷಿಸುವುದಕ್ಕೆ ಈ ಆದೇಶವನ್ನು ಮಾಡಿದ್ದು ಸದ್ಯಕ್ಕೆ ಪ್ರಸ್ತುತ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ.

Megha
the authorMegha

Leave a Reply

error: Content is protected !!
Latest news
ಕರೆಂಟ್‌ ಬಿಲ್‌: ವಿದ್ಯುತ್ ವಿತರಣಾ ಕಂಪನಿಗಳ ಅನ್ಯಾಯದ ಬಿಲ್ಲಿಂಗ್ ಪದ್ಧತಿಗೆ ಬ್ರೇಕ್‌- KERC ಆದೇಶ ಪಾಲನೆಗೆ ಗ್ರಾಹಕರ... ಗೃಹಲಕ್ಷ್ಮಿಯೋಜನೆಗೆ ಮತ್ತೆ ಹೊಸದಾಗಿ ಅರ್ಜಿ ಸ್ವೀಕರಿಸುವ ಚಿಂತನೆಯಲ್ಲಿ ಸರ್ಕಾರ! ಮೂರು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ‘ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಿಸಲು ಸರ್ಕಾರ ನಿರ್ಧಾರ: ಸಾರಿಗೆ ಸಚಿವ ಬೈರತಿ ... ಹಣ ದುರುಪಯೋಗ, ಕರ್ತವ್ಯ ಲೋಪ ಎಸಗಿದ ಆರೋಪ ಸಾಬೀತು: ಮಹೇಶ್ ಜೋಶಿ ಕಸಾಪ ಆಜೀವ ಸದಸ್ಯತ್ವ ರದ್ದು ಮುಖ್ಯ ಶಿಕ್ಷಕರ ಕಿರುಕುಳಕ್ಕೆ ಬೇಸತು 10ನೇ ತರಗತಿ ವಿದ್ಯಾರ್ಥಿ ಶಾಲಾ ಕಟ್ಟಡದಿಂದ ಜಿಗಿದು ಆತ್ಮಹತ್ಯೆ KSRTC ಎಂಡಿ ಅಕ್ರಮ್‌ಪಾಷ ವರ್ಗಾವಣೆ ಪ್ರಭಾರ ಎಂಡಿಯಾಗಿ ಡಾ.ಆರ್‌. ಸೆಲ್ವಮಣಿ ನೇಮಕ ಮಾಡಿ ಸರ್ಕಾರದ ಆದೇಶ 4.30 ಲಕ್ಷ ಮೃತಪಟ್ಟ, ಅನರ್ಹರ ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಟ್ಟ ಸರ್ಕಾರ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಗೋಕುಲದ ಅಧ್ಯಕ್ಷ ಲಯನ್ ಅರವಿಂದ ಕೆ.ಆರ್.ಮಾರುಕಟ್ಟೇಲಿ ಅಗ್ನಿ ಅವಘಡ ತಡೆಗೆ ಫೈರ್ ಆಡಿಟ್: ಮುಖ್ಯ ಆಯುಕ್ತ ಮಹೇಶ್ವರ್ ರಾವ್ KSRTC ಫ್ರೀ ಬಸ್‌ಪಾಸ್‌ ಈ ತಿಂಗಳು ಸಿಗುವುದು ಡೌಟ್‌- ನಿತ್ಯ ಹಣಕೊಟ್ಟು ಓಡಾಡುತ್ತಿರುವ ವಿದ್ಯಾರ್ಥಿಗಳ ಗೋಳು ಕೇಳುವವರು...