ಹಣ ದುರುಪಯೋಗ, ಕರ್ತವ್ಯ ಲೋಪ ಎಸಗಿದ ಆರೋಪ ಸಾಬೀತು: ಮಹೇಶ್ ಜೋಶಿ ಕಸಾಪ ಆಜೀವ ಸದಸ್ಯತ್ವ ರದ್ದು
ಜೋಶಿ ಅವರ ವಿರುದ್ಧ ಅಪಾದನೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ, ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ-1960ರ ಕಲಂ 25ರ ಅಡಿಯಲ್ಲಿ ವಿಚಾರಣೆ ನಡೆಸಿತ್ತು. ಈ ವಿಚಾರಣೆಯಲ್ಲಿ ಆಪಾದನೆಗಳು ಸಾಬೀತಾಗಿರುವ ಕಾರಣ ಅವರ ಸದಸ್ಯತ್ವನ್ನು ವಜಾ ಮಾಡಲಾಗಿದೆ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ಹಣ ದುರುಪಯೋಗ ಮತ್ತು ಕರ್ತವ್ಯ ಲೋಪ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಮಹೇಶ್ ಜೋಶಿ ಅವರ ಕಸಾಪದ ಆಜೀವ ಸದಸ್ಯತ್ವನ್ನು ವಜಾಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ಗೆ ಅರುಹಿದೆ.
ಕಸಾಪ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ 2025ರ ಜೂನ್ 26 ಹಾಗೂ 30ರಂದು ಸಹಕಾರ ಸಂಘಗಳ ನೋಂದಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಬೇಕು ಎಂಬುದೂ ಸೇರಿದಂತೆ ಮಹೇಶ್ ಜೋಶಿ ಸಲ್ಲಿಸಿರುವ ಮೂರು ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, ಹೈಕೋರ್ಟ್‌ನ ರಿಟ್ ಅರ್ಜಿ ಸಂಖ್ಯೆ 6086/2026ರಲ್ಲಿನ ಅಂತಿಮ ಆದೇಶಕ್ಕೆ ಒಳಪಟ್ಟಂತೆ, ತಕ್ಷಣದಿಂದ ಜಾರಿಗೆ ಬರುವಂತೆ ಮಹೇಶ್ ಜೋಶಿ ಅವರನ್ನು ಸದಸ್ಯತ್ವದಿಂದ ವಜಾಗೊಳಿಸಿ ಆಡಳಿತಾಧಿಕಾರಿ ಆದೇಶಿಸಿದ್ದಾರೆ. ಈ ಕುರಿತಂತೆ ಸಂಬಂಧಿಸಿದವರಿಗೆ ಸಂವಹನ ಮಾಡಲಾಗಿದೆ ಎಂದು ಕೋರ್ಟ್‌ಗೆ ವಿವರಿಸಿದರು.
ಜೋಶಿ ಅವರ ವಿರುದ್ಧ ಅಪಾದನೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ, ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ-1960ರ ಕಲಂ 25ರ ಅಡಿಯಲ್ಲಿ ವಿಚಾರಣೆ ನಡೆಸಿತ್ತು. ಈ ವಿಚಾರಣೆಯಲ್ಲಿ ಆಪಾದನೆಗಳು ಸಾಬೀತಾಗಿರುವ ಕಾರಣ ಅವರ ಸದಸ್ಯತ್ವನ್ನು ವಜಾ ಮಾಡಲಾಗಿದೆ ಎಂದರು.
Related









