ಹೈದರಾಬಾದ್: ತೆಲುಗಿನ ಕಿರುತೆರೆ ನಟಿ ಶ್ರಾವಣಿ ಕೊಂಡಪಲ್ಲಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಟಿ ಶ್ರಾವಣಿ ಅವರು ಹೈದರಾಬಾದ್ನ ಮಧುರನಗರದಲ್ಲಿರುವ ತಮ್ಮ ಮನೆಯ ಬಾತ್ರೂಂನ ಸೀಲಿಂಗ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ ಸಾವಿಗೆ ನಿರ್ದಿಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಒಸ್ಮಾನಿಯಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.
ಈ ಮಧ್ಯೆ ನಟಿ ಶ್ರಾವಣಿ ಗೆಳೆಯ ದೇವರಾಜ್ ರೆಡ್ಡಿ ಎಂಬಾತ ಕಿರುಕುಳ ನೀಡುತ್ತಿದ್ದರಿಂದ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಶ್ರಾವಣಿಯ ಪಾಲಕರು ಆರೋಪಿಸಿದ್ದಾರೆ. ಸದ್ಯ ದೇವರಾಜ್ ವಿರುದ್ಧ ಎಸ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಂಧ್ರಪ್ರದೇಶದ ಕಾಕಿನಾಡ ಮೂಲದ ದೇವರಾಜ್ ಶ್ರಾವಣಿಗೆ ಕೆಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಎಂದು ನಟಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಶ್ರಾವಣಿ ಕಳೆದ 8 ವರ್ಷಗಳಿಂದ ತೆಲುಗು ಟಿವಿ ಉದ್ಯಮದಲ್ಲಿ ಸಕ್ರಿಯರಾಗಿದ್ದರು. ಜನಪ್ರಿಯ ತೆಲುಗು ಧಾರಾವಾಹಿಗಳಾದ ಮನಸು ಮಮತಾ ಮತ್ತು ಮೌನರಾಗಂನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು .