ಬೆಂಗಳೂರು: ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹಟ್ನಾ, ಗೊಲ್ಲರಹಟ್ಟಿ ಸುತ್ತಮುತ್ತಲ ಗ್ರಾಮಗಳ ರೈತರ ಜಮೀನು ಸ್ವಾಧೀನ ಸಂಬಂಧ ಉಂಟಾಗಿದ್ದ ಸಮಸ್ಯೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಕೆಐಎಡಿಬಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಐದುನೂರು ಎಕರೆ ಒಣಭೂಮಿ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ರೈತರಿಗೆ ಅನ್ಯಾಯವಾಗದಂತೆ ಸೂಕ್ತ ಪರಿಹಾರ ನೀಡಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಏಳುನೂರಕ್ಕೂ ಹೆಚ್ಚು ಎಕರೆ ನೀರಾವರಿ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಮುಂದಾಗಿದ್ದು ಅದನ್ನು ಕೈಬಿಡುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ರೈತರಿಗೆ ಅನ್ಯಾಯವಾಗದ ರೀತಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.