ಬೆಂಗಳೂರು: ಮೈತ್ರಿ ಸರ್ಕಾರದ 14 ತಿಂಗಳ ಅವಧಿಯಲ್ಲಿ ಹಲವು ಚಿತ್ರಹಿಂಸೆಗಳ ನಡುವೆಯೂ ರಾಜ್ಯದ ರೈತರ ಸಾಲಮನ್ನಾ ಸೇರಿ ಹಲವು ಕೊಡುಗೆಗಳನ್ನು ನೀಡಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಕುಣಿಲಾಗದವರು ನೆಲ ಡೊಂಕು ಅಂತ ಹೇಳ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಎಚ್‍ಡಿಕೆ, 14 ತಿಂಗಳ ಮೈತ್ರಿ ಸರ್ಕಾರದಲ್ಲಿ ಚಿತ್ರಹಿಂಸೆಗಳ ನಡುವೆಯೂ ರಾಜ್ಯದ ಜನರಿಗೆ ಹಲವು ಕೊಡುಗೆಗಳನ್ನು ನೀಡಿದ್ದೇನೆ. ರಾಜ್ಯ ರೈತರ ಸಾಲಮನ್ನಾದಂತಹ ದಾಖಲೆಯ ಯೋಜನೆಯನ್ನು ಜಾರಿ ಮಾಡಿದ್ದೇನೆ ಎಂದು ತಿಳಿಸಿದರು.
ಇನ್ನು ಈಗ ಪ್ರಧಾನಿ ಮೋದಿ ಅವರು ಹೇಳುತ್ತೀರುವ ಆತ್ಮ ನಿರ್ಭರ ಭಾರತ ಕಾರ್ಯಕ್ರಮದ ಹಿನ್ನೆಲೆಯ ದೂರ ದೃಷ್ಟಿಯೊಂದಿಗೆ 9 ಕೈಗಾರಿಕಾ ಕ್ಲಸ್ಟರ್ ಪ್ರಾರಂಭ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಆದ್ದರಿಂದ ನನಗೆ ಕುಣಿಯಲು ಬರುತ್ತೆ. ಇವರಿಂದ ಅದನ್ನು ನಾನು ಹೇಳಿಸಿಕೊಳ್ಳ ಬೇಕಿಲ್ಲ. ಜನರೇ ಎಲ್ಲವನ್ನು ತೀರ್ಮಾನ ಮಾಡುತ್ತಾರೆ ಎಂದರು.
ಕುಮಾರಸ್ವಾಮಿಗೆ ಡಿಕೆಶಿ ಮಿತ್ರ ದ್ರೋಹ ಮಾಡಿದ್ದಾರೆಂಬ ಡಿಸಿಎಂ ಅಶ್ವಥ್ ನಾರಾಯಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಚ್‍ಡಿಕೆ, ಈಗ ಕೆಲವು ನಾಟಕಗಳ ಮೂಲಕ ಜನರಿಂದ ನನ್ನನ್ನು ದೂರ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಆದರೆ ಅಂತಹ ನಾಯಕರ ನಡವಳಿಕೆ ಏನೆಂದು ಜನರಿಗೆ ಗೊತ್ತಾಗುತ್ತಿದೆ. ಈಗ ಒಂದೊಂದೇ ಸತ್ಯ ಹೊರಗೆ ಬರುತ್ತಿದೆ. ಮೈತ್ರಿ ಸರ್ಕಾರ ಅಸ್ಥಿರ ಗೊಳಿಸುವ ಸಂದರ್ಭದಲ್ಲಿ ನಡೆದ ವಾಸ್ತವ ಸ್ಥಿತಿಗಳನ್ನು ಬಿಜೆಪಿ ನಾಯಕರೇ ಇದೀಗ ಜನರಿಗೆ ತಿಳಿಸುತ್ತಿದ್ದಾರೆ. ಈಗಲಾದ್ರು ಜನರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಯತ್ನಾಳ್ ಹೇಳಿಕೆಗೂ ನನಗೂ ಸಂಬಂಧವಿಲ್ಲ. ಇದು ಅವರ ಪಕ್ಷದ ಆಂತರಿಕ ಸಮಸ್ಯೆಗಳು. ಅದನ್ನು ಅವರೇ ಸರಿಪಡಿಸಿಕೊಳ್ಳಬೇಕು ಎಂದು ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಹೇಳಿಕೆ ವಿಚಾರವಾಗಿ ಎಚ್‍ಡಿಕೆ ಪ್ರತಿಕ್ರಿಯಿಸಿದರು.
ಆರ್ ಆರ್ ನಗರ ಹಾಗೂ ಶಿರಾ ಕ್ಷೇತ್ರದ ಉಪ ಚುನಾವಣೆಯಗಳನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಎರಡು ಕ್ಷೇತ್ರಗಳಲ್ಲೂ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಹೋರಾಟ ಮಾಡುತ್ತೇವೆ. ಬುಧವಾರದಿಂದ ಮೂರು ದಿನಗಳ ಕಾಲ ಪ್ರಚಾರ ಮಾಡುತ್ತೇವೆ. ಶಿರಾದಲ್ಲೇ ಉಳಿದು ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳುತ್ತೇನೆ ಎಂದರು.
Super statement