ಮಂಡ್ಯ: ಅತಿಯಾದ ಗೆಳೆತನ ಒಳ್ಳೇದಲ್ಲ ಎಂದು ವೃತ್ತಿಯಲ್ಲಿ ವೈದ್ಯಳಾಗಿರುವ ಪತ್ನಿಗೆ ಬುದ್ಧಿಮಾತು ಹೇಳಿದ್ದಕ್ಕೆ ಪತಿ ಮನೆಗೆ ಹೋಗಿ ಗಲಾಟೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಜಿಲ್ಲೆಯ ಕಲ್ಲಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಗುರುವಾರ ಪತಿ ವೆಂಕಟೇಶ್ ಮನೆಗೆ ಪತ್ನಿ ಲಕ್ಷ್ಮಿ ಇತರ ಮೂವರಾದ ಹರೀಶ, ಪೃಥ್ವಿ ಹಾಗೂ ಸೆಲ್ವಿ ಜತೆ ಬಂದಿದ್ದಾರೆ. ಈ ವೇಳೆ ನಾಲ್ವರು ಅವಾಚ್ಯವಾಗಿ ನಿಂದಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿದ್ದಾರೆ ದಯಮಾಡಿ ನನಗೆ ರಕ್ಷಣೆ ಕೊಡಿ ಎಂದು ವೆಂಕಟೇಶ್ ಎಂಬುವರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹತ್ತು ವರ್ಷಗಳ ಹಿಂದೆ ನಾನು ಡಾ.ಲಕ್ಷ್ಮಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದೆ. ಲಕ್ಷ್ಮಿಯು ಮಂಡ್ಯ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾವು 2019ರ ವರೆಗೂ ಬಹಳ ಅನೋನ್ಯವಾಗಿದ್ದೆವು. ನಮಗೆ 10 ವರ್ಷದ ಮಗ ಸಹ ಇದ್ದಾನೆ ಎಂದು ಹೇಳಿದ್ದಾರೆ.
ಈ ನಡುವೆ 2019ರ ನಂತರದಲ್ಲಿ ಹರೀಶ್ ಎಂಬಾತ ನನ್ನ ಹೆಂಡತಿಗೆ ಪರಿಚಯವಾಗಿದ್ದು, ಆತ ನಿತ್ಯ ಮನೆಗೆ ಬರುತ್ತಿದ್ದ. ನಾನು ಪತ್ನಿಯನ್ನು ಕೇಳಿದಾಗ ಸ್ನೇಹಿತ ಎಂದಿದ್ದರು. ನಂತರ ಅವರಿಬ್ಬರ ಒಡನಾಟ ನೋಡಿ, ಇದೆಲ್ಲ ಸರಿಯಿಲ್ಲ. ಅವರ ಜೊತೆ ಓಡಾಡಬೇಡ ಮತ್ತು ಆತ ನಮ್ಮ ಮನೆಗೆ ಬರುವುದು ಬೇಡ ಎಂದು ಬುದ್ಧಿಮಾತು ಹೇಳಿದೆ. ಇದರಿಂದ ಕೋಪಗೊಂಡು ಗುರುವಾರ ರಾತ್ರಿ ನಾಲ್ವರು ಮನೆಗೆ ಏಕಾಏಕಿ ನುಗ್ಗಿ ನಮ್ಮ ತಂದೆ ಮೇಲೆ ಹಲ್ಲೆ ಮಾಡಿ ನನಗೆ ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನನ್ನ ಪತ್ನಿ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದು, ನಾನು ಹರೀಶ್‌ನನ್ನೇ ಮದುವೆಯಾಗುತ್ತೇನೆ. ನೀನು ನನಗೆ ಡೈವರ್ಸ್ ಕೊಡಬೇಕು ಎಂದಿದ್ದಾಳೆ. ಇದಲ್ಲದೆ ಹರೀಶ್ ಸಹ ನಿನ್ನನ್ನು ಮೂರು ವರ್ಷ ಜೈಲಿಗೆ ಕಳುಹಿಸುತ್ತೀನಿ ನೋಡುತ್ತಿರು ಎಂದು ಬೆದರಿಕೆ ಹಾಕಿದ್ದಾನೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಆದರೆ, ಡಾ.ಲಕ್ಷ್ಮಿ ಲಕ್ಷ್ಮಿಗೆ 10 ವರ್ಷದ ಮಗನಿದ್ದರೂ ಗೆಳೆಯನ ಸಹವಾಸ ಮಾಡಿ ತನ್ನ ಸಂಸಾರವನ್ನು ತಾನೆ ಹಾಳುಮಾಡಿಕೊಳ್ಳುತ್ತಿರುವುದಕ್ಕೆ ಪತಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಅಕ್ಕಪಕ್ಕದ ಮನೆಯವರು ಇವರ ನಡೆಯಿಂದ ಬೇಸರವ್ಯಕ್ತಪಡಿಸಿದ್ದಾರೆ. ಇದು ಇವರಿಗೆ ಈಗ ಬೇಕಿದೆಯೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಮಗನ ಭವಿಷ್ಯವನ್ನು ರೂಪಿಸುವತ್ತ ಡಾ.ಲಕ್ಷ್ಮಿ ಮನಸ್ಸು ಮಾಡಬೇಕು ಎಂದು ಸಂಬಂಧಿಕರು ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ.