ಸರ್ಕಾರಿ ನೌಕರ ಪರೋಕ್ಷವಾಗಿ ಬೇರೊಬ್ಬರ ಮೂಲಕ ಲಂಚ ಪಡೆದರೂ ಆತ ತಪ್ಪಿತಸ್ಥನೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ನಿಯುಕ್ತರಾಗಿದ್ದ ಕೆ. ರಂಗಯ್ಯ ವಿರುದ್ಧದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.

ನ್ಯೂಡೆಲ್ಲಿ: ಸರ್ಕಾರಿ ನೌಕರನೊಬ್ಬ ತನಗಾಗಿ ಯಾವುದೇ ಅನುಚಿತ ಲಾಭ ಪಡೆಯುವ ಉದ್ದೇಶ ಹೊಂದಿಲ್ಲದಿದ್ದರೂ, ಅಧೀನ ನೌಕರ ಸೇರಿದಂತೆ ಇತರೆ ಯಾವುದೇ ವ್ಯಕ್ತಿಯ ಪರವಾಗಿಯಾದರೂ ಲಂಚಕ್ಕೆ ಬೇಡಿಕೆ ಇಟ್ಟರೆ ಅಥವಾ ಲಂಚ ಪಡೆದರೆ, ಅಂತಹ ಸರ್ಕಾರಿ ನೌಕರ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತಪ್ಪಿತಸ್ಥನೆನಿಸಿಕೊಳ್ಳುತ್ತಾನೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇಲ್ಲಿ ಅನುಚಿತ ಲಾಭ (Undue Advantage ಅಥವಾ Unjust Enrichment) ಎಂದರೆ ಯಾವುದೇ ಕಾನೂನುಬದ್ಧ ಹಕ್ಕಿಲ್ಲದೆ, ಇನ್ನೊಬ್ಬರ ಅಮಾಯಕತೆ, ಅಸಹಾಯಕತೆ ಅಥವಾ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಗಳಿಸುವ ಅಥವಾ ಪಡೆದುಕೊಳ್ಳುವ ಅಕ್ರಮ ಲಾಭ ( ಲಂಚ ರೂಪದ ಹಣ) ಅಥವಾ ಲಾಭಾಂಶವಾಗಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 7ರ ಅಡಿಯ 2(i) ವಿವರಣೆಯ ಪ್ರಕಾರ, ಸಾರ್ವಜನಿಕ ಸೇವೆಯಲ್ಲಿರುವ ಒಬ್ಬ ವ್ಯಕ್ತಿ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಅಥವಾ ಮತ್ತೊಬ್ಬ ಸಾರ್ವಜನಿಕ ಸೇವೆಯಲ್ಲಿರುವವನ ಮೇಲೆ ಪ್ರಭಾವ ಬೀರಿ ಮತ್ತೊಬ್ಬರಿಗಾಗಿ ಲಂಚವನ್ನು ಪಡೆದರೆ, ಅದು ಭ್ರಷ್ಟಾಚಾರ ಪ್ರಕರಣಗಳ ವ್ಯಾಪ್ತಿಗೆ ಒಳಪಡುತ್ತದೆ ಎಂದು ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ ಮಹತ್ವದ ಆದೇಶ ನೀಡಿದೆ.
“ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 7ರ ಅಡಿ ಅನಗತ್ಯ ಲಾಭ/ ಪ್ರಯೋಜನವನ್ನು ಪಡೆಯುವುದು ಅಪರಾಧವಾಗುತ್ತದೆ. ಅದರಂತೆ ಯಾವುದೇ ಸಾರ್ವಜನಿಕ ಸೇವಕನು ತನ್ನ ಕಾನೂನುಬದ್ಧ ಸಂಬಳದ ಹೊರತಾಗಿ, ಯಾವುದೇ ವ್ಯಕ್ತಿಯಿಂದ ಬೇರೆ ಯಾವುದೇ ರೀತಿಯ ಆರ್ಥಿಕ ಅಥವಾ ಇತರ ಅನಗತ್ಯ ಪ್ರಯೋಜನವನ್ನು (Undue Advantage) ನೇರವಾಗಿ ಅಥವಾ ಪರೋಕ್ಷವಾಗಿ ಪಡೆದರೆ, ಸ್ವೀಕರಿಸಿದರೆ ಅಥವಾ ಪಡೆಯಲು ಪ್ರಯತ್ನಿಸಿದರೆ ಅದು ಅಪರಾಧವಾಗುತ್ತದೆ.
ಕರ್ತವ್ಯ ಲೋಪ ಅಥವಾ ಅನುಚಿತ ನಿರ್ವಹಣೆ: ತನಗೆ ಅಥವಾ ಇನ್ನೊಬ್ಬ ಸಾರ್ವಜನಿಕ ಸೇವಕನಿಗೆ ಲಾಭ ಮಾಡಿಕೊಳ್ಳುವ ಉದ್ದೇಶದಿಂದ, ತನ್ನ ಸಾರ್ವಜನಿಕ ಕರ್ತವ್ಯವನ್ನು ಅಪ್ರಾಮಾಣಿಕವಾಗಿ, ಅನುಚಿತವಾಗಿ ನಿರ್ವಹಿಸಲು ಅಥವಾ ನಿರ್ವಹಿಸುವುದನ್ನು ತಪ್ಪಿಸಲು ಲಂಚದ ಬೇಡಿಕೆ ಇಡುವುದು ಶಿಕ್ಷಾರ್ಹ.
ಪ್ರಭಾವ ಬೀರುವುದು ಅಪರಾಧವೆ: ಮತ್ತೊಬ್ಬ ಸಾರ್ವಜನಿಕ ಸೇವಕನು ತನ್ನ ಕರ್ತವ್ಯವನ್ನು ಅನುಚಿತವಾಗಿ ನಿರ್ವಹಿಸುವಂತೆ ಪ್ರೇರೇಪಿಸಲು ಯಾವುದೇ ವ್ಯಕ್ತಿಯಿಂದ ಲಂಚ ಸ್ವೀಕರಿಸುವುದು ಕೂಡ ಈ ಕಾಯ್ದೆಯಡಿ ಅಪರಾಧವಾಗಿದೆ. ಇನ್ನು ಈ ಲಂಚಾರೋಪಕ್ಕೊಳಗಾಗುವ ಯಾವುದೇ ಸರ್ಕಾರಿ ನೌಕರ ಬೇರೊಬ್ಬ ವ್ಯಕ್ತಿಗಾಗಿ ಅನುಚಿತ ಲಾಭಪಡೆಯುವುದೂ ಅಪರಾಧ ಕೃತ್ಯವಾಗುತ್ತದೆ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಅಪರಾಧವನ್ನು ಸರ್ಕಾರಿ ನೌಕರನೊಬ್ಬ ನೇರವಾಗಿಯೂ ಮಾಡಬಹುದು ಅಥವಾ ಮತ್ತೊಬ್ಬ ಸರ್ಕಾರಿ ನೌಕರನ ಮೇಲೆ ಪ್ರಭಾವ ಬೀರಿಯೂ ಮಾಡಬಹುದು ಎಂದು ನ್ಯಾಯಾಲಯ ವಿವರಿಸಿದೆ. ಸರ್ಕಾರಿ ನೌಕರನೊಬ್ಬ ಹಿಂದಿನಿಂದ ಪರೋಕ್ಷವಾಗಿ ತನ್ನ ಅಧೀನ ನೌಕರನ ಮೂಲಕ ಲಂಚಕ್ಕಾಗಿ ಬೇಡಿಕೆ ಇಡುವುದೂ ಅಪರಾಧದ ವ್ಯಾಪ್ತಿಗೆ ಒಳಪಡುತ್ತದೆ ಎಂಬುದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡು ಈ ತೀರ್ಪು ನೀಡಿದೆ.
ಪ್ರಕರಣವೇನು?: ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ನಿಯುಕ್ತರಾಗಿದ್ದ ಕೆ. ರಂಗಯ್ಯ ವಿರುದ್ಧದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮೇ 26ರಂದು ಈ ತೀರ್ಪು ನೀಡಿದೆ.
ಸಬ್ ಇನ್ಸ್‌ಪೆಕ್ಟರ್ ರಂಗಯ್ಯ ನೇರವಾಗಿ ಲಂಚದ ಬೇಡಿಕೆ ಇಟ್ಟಿಲ್ಲ ಅಥವಾ ವೈಯಕ್ತಿಕವಾಗಿ ಲಂಚದ ಹಣವನ್ನು ಸ್ವೀಕರಿಸಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಕರ್ನಾಟಕ ಹೈಕೋರ್ಟ್, ಜೂನ್ 2023ರಲ್ಲಿ ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ಪರವಾಗಿ ವಕೀಲ ನಿಶಾಂತ್ ಪಾಟೀಲ್ ವಾದ ಮಂಡಿಸಿದರು.
Related









