CRIMENEWSಬೆಂಗಳೂರು

GBA East ತ್ಯಾಜ್ಯ ವಿಲೇವಾರಿ ಅಕ್ರಮ: 6 ವಾಹನಗಳ ವಶ- FIR ದಾಖಲು

ವಾಣಿಜ್ಯ ಮತ್ತು ವಸತಿ ಸಮುಚ್ಚಯಗಳಿಂದ ಬಲ್ಕ್ ವೇಸ್ಟ್ ಸಂಗ್ರಹಿಸಿ ವಿಲೇವಾರಿ ಮಾಡಲು ಇಕೋ ಸ್ಪೀಯರ್ ವೆಸ್ಟ್ ಸೆಲ್ಯೂಷನ್ ಕಂಪನಿಗೆ ಕಾರ್ಯದೇಶ ನೀಡಿದ್ದು, ನೌಶಾದ್ ಮತ್ತು ಇತರರ ತಂಡ ಕಂಪನಿ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಬಳಸಿಕೊಂಡು ವಿವಿಧ ಪ್ರದೇಶಗಳಿಂದ ಅನಧಿಕೃತವಾಗಿ ಬಲ್ಕ್ ತ್ಯಾಜ್ಯವನ್ನು ಸಂಗ್ರಹಿಸಿದೆ. 

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆಯ ಮಹದೇವಪುರ ವಲಯದ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಘನತ್ಯಾಜ್ಯವನ್ನು ಸಾಗಿಸಿ ಖಾಲಿ ಜಾಗಗಳಲ್ಲಿ ಸುರಿಯುತ್ತಿದ್ದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ 6 ವಾಹನಗಳನ್ನು ವಶಪಡಿಸಿಕೊಂಡು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.

ಪೂರ್ವ ನಗರ ಪಾಲಿಕೆಯ ವಿವಿಧ ಪ್ರದೇಶಗಳ ವಾಣಿಜ್ಯ ಮತ್ತು ವಸತಿ ಸಮುಚ್ಚಯಗಳಿಂದ ಬಲ್ಕ್ ವೇಸ್ಟ್ ಸಂಗ್ರಹಿಸಿ ವಿಲೇವಾರಿ ಮಾಡಲು ಇಕೋ ಸ್ಪೀಯರ್ ವೆಸ್ಟ್ ಸೆಲ್ಯೂಷನ್ ಕಂಪನಿಗೆ ಕಾರ್ಯದೇಶ ನೀಡಿದ್ದು, ನೌಶಾದ್ ಮತ್ತು ಇತರರ ತಂಡ ಕಂಪನಿ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಬಳಸಿಕೊಂಡು ವಿವಿಧ ಪ್ರದೇಶಗಳಿಂದ ಅನಧಿಕೃತವಾಗಿ ಬಲ್ಕ್ ತ್ಯಾಜ್ಯವನ್ನು ಸಂಗ್ರಹಿಸಿದೆ.

ಅಲ್ಲದೆ ಸಂಗ್ರಹಿಸಿದ ಕಸವನ್ನು ಕಾಡುಗೋಡಿ ವ್ಯಾಪ್ತಿಯ ಸಿದ್ದಾರ್ಥ ಲೇಔಟ್ ಸಮೀಪದ ಸರ್ವೇ ನಂ.130, 131 ಹಾಗೂ 142ಕ್ಕೆ ಹೊಂದಿಕೊಂಡಿರುವ ದಕ್ಷಿಣ ಪಿನಾಕಿನಿ ನದಿಗೆ ಸುರಿಯಲಾಗುತ್ತಿದೆ ಎಂಬ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಅಧಿಕಾರಿಗಳು ನಿರಂತರ ನಿಗಾವಹಿಸಿ ಕಾರ್ಯಾಚರಣೆ ಕೈಗೊಂಡಿದ್ದರು ಎಂದು ಆಯುಕ್ತರು ಮಾಹಿತಿ ನೀಡಿದರು.

6-ವಾಹನಗಳ ವಶ: ಸಾರ್ವಜನಿಕ ದೂರಿನ ಆಧಾರದ ಮೇರೆಗೆ ಇದೇ ಮೇ 29ರಂದು ನಗರ ಪಾಲಿಕೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯಲು ಸ್ಥಳಕ್ಕೆ ಆಗಮಿಸಿದ್ದ ತ್ಯಾಜ್ಯ ತುಂಬಿರುವ 5 ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು, ವಾಹನ ಚಾಲಕರು ಸ್ಥಳದಿಂದ ಪರಾರಿಯಾಗಿದ್ದಾರೆ ಹಾಗೂ ಇದೇ ಸ್ಥಳದಲ್ಲಿ ಮೇ 30ರಂದು ಮತ್ತೊಂದು ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.

ಕಾಡುಗೋಡಿ ಠಾಣೆಯಲ್ಲಿ ಎಫ್‌ಐಆರ್: ನಗರ ಪಾಲಿಕೆಯ ಸಹಾಯಕ ಪ್ರಧಾನ ವ್ಯವಸ್ಥಾಪಕರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ವಾಹನಗಳ ಮಾಲೀಕರು, ಚಾಲಕರು, ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ತ್ಯಾಜ್ಯ ಸುರಿಯಲು ಅವಕಾಶ ನೀಡಿದ ಭೂ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲು ಕಾಡುಗೋಡಿ ಆರಕ್ಷಕ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಅಕ್ರಮ ತ್ಯಾಜ್ಯ ವಿಲೇವಾರಿ-ಎಚ್ಚರಿಕೆ: ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತ ಡಿ.ಎಸ್. ರಮೇಶ್, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯುವ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಗರದ ಸ್ವಚ್ಛತೆ, ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಗೆ ಧಕ್ಕೆಯುಂಟುಮಾಡುವ ಇಂತಹ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ತ್ಯಾಜ್ಯವನ್ನು ಅನಧಿಕೃತ ಸ್ಥಳಗಳಲ್ಲಿ ಸುರಿಯುವುದು, ಖಾಲಿ ಜಾಗಗಳನ್ನು ಕಸದ ತೊಟ್ಟಿಗಳಾಗಿ ಬಳಸುವುದು ಹಾಗೂ ಅಕ್ರಮ ಸಾಗಣೆ ನಡೆಸುವವರ ವಿರುದ್ಧ ದಂಡಾತ್ಮಕ ಹಾಗೂ ಕ್ರಿಮಿನಲ್ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

ಸಾರ್ವಜನಿಕರ ಸಹಕಾರ ಬೇಕು: ನಗರವನ್ನು ಸ್ವಚ್ಛ ಹಾಗೂ ಆರೋಗ್ಯಯುತವಾಗಿಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದ ಆಯುಕ್ತರು, ಈ ರೀತಿ ತ್ಯಾಜ್ಯ ಸುರಿಯುವ ವಾಹನಗಳು ಅಥವಾ ವ್ಯಕ್ತಿಗಳ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣವೇ ನಗರ ಪಾಲಿಕೆಗೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದರು.

ಕಾರ್ಯಾಚರಣೆಯಲ್ಲಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ಸಹಾಯ ಪ್ರಧಾನ ವ್ಯವಸ್ಥಾಪಕರು, ಮಾರ್ಷಲ್ ಸೂಪರ್ವೈಸರ್, ವಾರ್ಡ್ ಮಾರ್ಷಲ್, ಆರೋಗ್ಯ ಪರಿವೀಕ್ಷಕರು ಹಾಗೂ ಇನ್ನಿತರೆ ಸಿಬ್ಬಂದಿಗಳು ಇದ್ದರು.

Deva
the authorDeva

Leave a Reply

error: Content is protected !!
Latest news
ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ BMTC: 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದ... ಕನಿಷ್ಠ ವಿದ್ಯಾರ್ಹತೆ SSLC ಪಾಸ್‌: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ