ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ
ಇನ್ನು ಪ್ರಮುಖವಾಗಿ ಈ ಮಾರ್ಗಸೂಚಿಗಳು ಕೇವಲ ಹೈಕೋರ್ಟ್‌ಗಳಿಗೆ ಮಾತ್ರವಲ್ಲದೆ, ದೇಶದ ಎಲ್ಲ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೂ ಅನ್ವಯಿಸುತ್ತವೆ. ಜಾಮೀನು ಮಂಜೂರಾದ ನಂತರ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆಯೇ ಇಲ್ಲವೇ ಎಂಬುದನ್ನು ವಿಚಾರಣಾ ನ್ಯಾಯಾಲಯಗಳು ಹೈಕೋರ್ಟ್‌ಗೆ ವರದಿ ಮಾಡಬೇಕಿರುವುದು ಕಡ್ಡಾಯ ಎಂದು ತಿಳಿಸಿದೆ.

ನ್ಯೂಡೆಲ್ಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಳಂಬ ನೀತಿಗೆ ಕಡಿವಾಣ ಹಾಕಲು ಸುಪ್ರೀಂ ಕೋರ್ಟ್ ಐತಿಹಾಸಿಕ ಆದೇಶವೊಂದನ್ನು ಹೊರಡಿಸಿದ್ದು, ವಾದ-ಪ್ರತಿವಾದ ಮುಗಿದು ಆದೇಶ ಕಾಯ್ದಿರಿಸಿದ 3 ತಿಂಗಳ ಒಳಗಾಗಿ ಎಲ್ಲ ಕೋರ್ಟ್‌ಗಳು ಅಂತಿಮ ತೀರ್ಪನ್ನು ಪ್ರಕಟಿಸಲೇಬೇಕು ಎಂದು ಕಡ್ಡಾಯಗೊಳಿಸಿ ಸುಪ್ರೀಂ ಕೋರ್ಟ್ ಐತಿಹಾಸಿಕ ಆದೇಶ ಹೊರಡಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಈ ನಿರ್ದೇಶನ ನೀಡಿದ್ದು, ತೀರ್ಪು ನೀಡಲು ವಿಳಂಬ ಮಾಡುವುದರಿಂದ ಕಕ್ಷಿದಾರರಿಗೆ ತುಂಬಲಾರದ ನಷ್ಟ ಉಂಟಾಗುತ್ತದೆ ಮತ್ತು ನ್ಯಾಯಾಂಗದ ಮೇಲಿನ ಜನರ ನಂಬಿಕೆ ಕಡಿಮೆಯಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದೆ.
ಸುಪ್ರೀಂ ಆದೇಶವೇನು?: 3 ತಿಂಗಳೊಳಗೆ ತೀರ್ಪು ಬರದಿದ್ದರೆ, ವಿಷಯವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಬೇಕು. ಅವರು ಗರಿಷ್ಠ 2 ವಾರಗಳ ಹೆಚ್ಚುವರಿ ಕಾಲಾವಕಾಶ ನೀಡಬಹುದು. ಹೆಚ್ಚುವರಿ ಸಮಯದಲ್ಲೂ ತೀರ್ಪು ಬರದಿದ್ದರೆ, ಕಕ್ಷಿದಾರರು ಆ ಪ್ರಕರಣವನ್ನು ಮತ್ತೊಂದು ಹೊಸ ಪೀಠಕ್ಕೆ ವರ್ಗಾಯಿಸಿ ಮರು-ವಿಚಾರಣೆ ನಡೆಸುವಂತೆ ಅರ್ಜಿ ಸಲ್ಲಿಸಬಹುದು ಎಂದು ನಿರ್ದೇಶನ ನೀಡಿದೆ.
ಇನ್ನು ಜಾಮೀನು ಅರ್ಜಿಗಳ ವಿಚಾರಣೆ ನಡೆದ ಅದೇ ದಿನ ಅಥವಾ ಮರುದಿನವೇ ತೀರ್ಪು ಪ್ರಕಟಿಸಿ, ತಮ್ಮ ಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಜಾಮೀನು ಮಂಜೂರಾದ ತಕ್ಷಣ, ಕೈದಿಗಳನ್ನು ಅಂದೇ ಅಥವಾ ಮರುದಿನವೇ ಜೈಲಿನಿಂದ ಬಿಡುಗಡೆ ಮಾಡಲು ಆದೇಶದ ಪ್ರತಿಯನ್ನು ತಕ್ಷಣವೇ ಜೈಲು ಅಧಿಕಾರಿಗಳಿಗೆ ತಲುಪಿಸಬೇಕು ಎಂದು ಸೂಚಿಸಿದೆ.
ಅಲ್ಲದೆ ಪ್ರಕರಣದ ತೀರ್ಪನ್ನು ಯಾವಾಗ ಕಾಯ್ದಿರಿಸಲಾಗಿದೆ ಮತ್ತು ಯಾವಾಗ ಅಪ್‌ಲೋಡ್ ಮಾಡಲಾಗಿದೆ ಎಂಬ ಸ್ಥಿತಿಯನ್ನೂ ಆನ್‌ಲೈನ್‌ನಲ್ಲಿ ಸ್ಪಷ್ಟವಾಗಿ ತೋರಿಸಬೇಕು. ಬಾಕಿ ಉಳಿದಿರುವ ಕಾಯ್ದಿರಿಸಿದ ತೀರ್ಪುಗಳ ಬಗ್ಗೆ ಪ್ರತಿ ತಿಂಗಳು ನ್ಯಾಯಾಧೀಶರು/ ಸಿಬ್ಬಂದಿಗೆ ಆಟೋಮ್ಯಾಟಿಕ್ ಅಲರ್ಟ್ ಹೋಗುವಂತೆ ಹೈಕೋರ್ಟ್‌ಗಳು ತಮ್ಮ ವೆಬ್‌ಸೈಟ್‌ಗಳನ್ನು ಮಾರ್ಪಡಿಸಬೇಕು.
ನ್ಯಾಯಾಧೀಶರು ಕೇವಲ ‘ಅರ್ಜಿ ವಜಾ ಮಾಡಲಾಗಿದೆ’ ಅಥವಾ ‘ಅಂಗೀಕರಿಸಲಾಗಿದೆ’ ಎಂದು ಅಂತಿಮ ನಿರ್ಧಾರ ಪ್ರಕಟಿಸಿ, ಅದಕ್ಕೆ ಕಾರಣಗಳನ್ನು ನೀಡದೆ ತೀರ್ಪನ್ನು ಬಾಕಿ ಇಡುವ ಪದ್ಧತಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದ್ದು, ಯಾವುದೇ ಆದೇಶ ನೀಡಿದರೂ ಅದಕ್ಕೆ ಸೂಕ್ತ ಕಾನೂನಾತ್ಮಕ ಕಾರಣಗಳನ್ನು ಕಡ್ಡಾಯವಾಗಿ ದಾಖಲಿಸಬೇಕು ಎಂದು ಸೂಚನೆ ನೀಡಿದೆ.
ಇನ್ನು ಪ್ರಮುಖವಾಗಿ ಈ ಮಾರ್ಗಸೂಚಿಗಳು ಕೇವಲ ಹೈಕೋರ್ಟ್‌ಗಳಿಗೆ ಮಾತ್ರವಲ್ಲದೆ, ದೇಶದ ಎಲ್ಲ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೂ ಅನ್ವಯಿಸುತ್ತವೆ. ಜಾಮೀನು ಮಂಜೂರಾದ ನಂತರ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆಯೇ ಇಲ್ಲವೇ ಎಂಬುದನ್ನು ವಿಚಾರಣಾ ನ್ಯಾಯಾಲಯಗಳು ಹೈಕೋರ್ಟ್‌ಗೆ ವರದಿ ಮಾಡಬೇಕಿರುವುದು ಕಡ್ಡಾಯ ಎಂದು ತಿಳಿಸಿದೆ.
ಆದೇಶ ಮಾಡುವುದಕ್ಕೆ ಕಾರಣವೇನು?: ಜಾರ್ಖಂಡ್ ಹೈಕೋರ್ಟ್‌ನಲ್ಲಿ 56ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳ ವಾದ-ಪ್ರತಿವಾದಗಳನ್ನು 2022 ರಿಂದ 2024 ರ ಅವಧಿಯಲ್ಲೇ ಆಲಿಸಿ ಮುಗಿಸಲಾಗಿತ್ತು. ಆದರೆ, ವಾದ ಪ್ರತಿವಾದ ಮುಗಿದು 2 -3 ವರ್ಷಗಳೇ ಕಳೆದಿದ್ದರೂ ನ್ಯಾಯಾಧೀಶರು ಅಂತಿಮ ತೀರ್ಪನ್ನು ನೀಡದೆ ಕಾಯ್ದಿರಿಸಿದ್ದರು. ಇದೇ ರೀತಿ ಅಲಹಾಬಾದ್ ಹೈಕೋರ್ಟ್‌ನ ಒಂದು ಪ್ರಕರಣದಲ್ಲಿ 2021ರಲ್ಲೇ ವಾದ ಮುಗಿದಿದ್ದರೂ 2026 ರವರೆಗೂ ತೀರ್ಪನ್ನೇ ಪ್ರಕಟಿಸಿರಲಿಲ್ಲ. ಹೈಕೋರ್ಟ್‌ನ ರಿಜಿಸ್ಟ್ರಾರ್ ನೀಡಿದ ವರದಿ ಹಿನ್ನೆಲೆಯಲ್ಲಿ ಆಘಾತ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಈಗ ಐತಿಹಾಸಿಕ ನಿರ್ದೇಶನ ನೀಡಿದೆ.
ಇದರಿಂದ ವರ್ಷಾನುಗಟ್ಟಲೆ ಆದೇಶ ಇಂದು ಈ ಬಾರಿ ಆಗಬಹುದು ಇಲ್ಲ ಮುಂದಿನ ಬಾರಿಗೆ ಆಗೇ ಬಿಡುತ್ತದೆ ಎಂದು ಕೋರ್ಟ್‌ಗೆ ಬಂದು ನ್ಯಾಯವಾದಿಗಳಿಗೆ ಅವರ ಫೀ ಕೋಟ್ಟು ಕಾಯುವುದು ತಪ್ಪುತ್ತದೆ. ಅಲ್ಲದೆ ಇಲ್ಲಿ ನ್ಯಾಯವಾದಿಗಳಿಗೂ ಇದು ಒಂದು ರೀತಿಯ ವರದಾನವಾಗಲಿದೆ. ಕಾರಣ ವಕೀಲರು ತಮ್ಮ ಕಕ್ಷಿದಾರರಿಗೆ ಈ ಬಾರಿ ಆದೇಶವಾಗಿಲ್ಲ ಬರುವ ಸಾರಿ ಆಗುತ್ತದೆ ಹೋಗಿ ಎಂದು ಪದೇಪದೇ ಹೇಳಿ ಮುಜುಗರಕ್ಕೆ ಒಳಗಾಗುವುದರಿಂದ ಪಾರಾಗಲಿದ್ದಾರೆ ಎಂದು ಹಿರಿಯ ವಕೀಲರು ಅಭಿಪ್ರಾಯಪಟ್ಟಿದ್ದಾರೆ.
Related









