ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬ್ರಿಟನ್ ದೇಶದಿಂದ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿ ಇಡೀ ವಿಶ್ವವನ್ನೇ ಬಹು ವೇಗವಾಗಿ ಆವರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನಿಂದಲೇ 10 ದಿನಗಳ ಕಾಲ, ಅಂದರೆ ಜನವರಿ 2ರವರೆಗೂ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.
ಸರ್ಕಾರ ರಾತ್ರಿ ಸಂಚಾರಕ್ಕೆ ಬ್ರೇಕ್ ಹಾಕಿ ನಿಷೇಧಾಜ್ಞೆ ಜಾರಿ ಮಾಡಿದೆ. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಇಂದು ವಿವಿಧ ಸಭೆಗಳಲ್ಲಿ ಚರ್ಚೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಈ ನಿರ್ಧಾರವನ್ನು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಮೂಲಕ ಹೊಸ ಸ್ವರೂಪದ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಕರ್ಫ್ಯೂ ಜಾರಿ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಬೆಂಗಳೂರಷ್ಟೇ ಅಲ್ಲ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.
ರಾತ್ರಿ 10 ಗಂಟೆಯ ನಂತರ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ಅಂಗಡಿ ಮುಂಗಟ್ಟುಗಳು ಬಾಗಿಲು ಬಂದ್ ಮಾಡಬೇಕು. ಅಂತಾರಾಜ್ಯ ಜನ ಸಂಚಾರವನ್ನೂ ನಿಷೇಧಿಸಲಾಗಿದೆ. ಆದರೆ, ರಾತ್ರಿಯ ಹೊತ್ತು ಔಷಧ ಅಂಗಡಿ, ಆಸ್ಪತ್ರೆ ಇತ್ಯಾದಿ ಅಗತ್ಯ ಸೇವೆಗಳಿಗೆ ಅವಕಾಶ ಇದೆ.
ಜನವರಿ 1ರಂದು ಶಾಲೆಗಳನ್ನು ಪುನಾರಂಭಿಸುವ ಸರ್ಕಾರದ ನಿರ್ಧಾರವನ್ನು ಈ ವೇಳೆ ಪರಿಷ್ಕರಿಸಲಾಗಿಲ್ಲ. ಇನ್ನೆರಡು ಮೂರು ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುವುದು. ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಬ್ರಿಟನ್ ಸೇರಿದಂತೆ ಹೊರ ದೇಶಗಳಿಂದ ಬರುವ ಜನರಿಗೆ ಕಡ್ಡಾಯವಾಗಿ ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ. ಬ್ರಿಟನ್ನಿಂದ ಕಳೆದೊಂದು ತಿಂಗಳಿಂದ ಬಂದಿರುವ ವ್ಯಕ್ತಿಗಳನ್ನ ಪತ್ತೆ ಹಚ್ಚಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಅವರ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ಗಳನ್ನೂ ಟ್ರೇಸ್ ಮಾಡಿ ಕ್ವಾರಂಟೈನ್ನಲ್ಲಿರಿಸುವ ಕಾರ್ಯ ನಡೆಯುತ್ತಿದೆ.
ಇನ್ನು, ಬೆಳಗ್ಗೆ 6ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಎಂದಿನಂತೆ ಜನಜೀವನ ನಡೆಯಲು ಅನುವು ಮಾಡಿಕೊಡಲಾಗಿದೆ. ಈಗ ಇರುವ ಕೋವಿಡ್ ಮುನ್ನೆಚ್ಚರಿಕೆ ಮಾರ್ಗಸೂಚಿಗಳ ಪ್ರಕಾರ ಸಭೆ ಸಮಾರಂಭಗಳನ್ನ ನಡೆಸಲು ಅವಕಾಶ ಇದೆ. ರಾತ್ರಿ 10 ಗಂಟೆಯ ನಂತರವಷ್ಟೇ ಕರ್ಫ್ಯೂ ಜಾರಿಯಲ್ಲಿರಲಿದೆ.
ನೈಟ್ ಕರ್ಫ್ಯೂ ಜಾರಿಯಾಗುವುದರೊಂದಿಗೆ ಈ ಬಾರಿಯ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ. ಡಿ. 31ರಂದು ರಾತ್ರಿಯಿಡೀ ನಡೆಯುತ್ತಿದ್ದ ಹೊಸ ವರ್ಷಾಚರಣೆಗೆ ಈ ಬಾರಿ ಅವಕಾಶ ನೀಡುವುದು ಅನುಮಾನವಾಗಿದೆ.