ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಶಂಕುಸ್ಥಾಪಿಸಿದ ಭದ್ರಾವತಿಯ ಆರ್‌ಎಎಫ್ ಘಟಕದ ಅಡಿಗಲ್ಲಿನಲ್ಲಿ ಹಿಂದಿ, ಆಂಗ್ಲ ಭಾಷೆ ಮಾತ್ರ ಬಳಸಿ ಕನ್ನಡವನ್ನು ನಿರ್ಲಕ್ಷ್ಯಿಸಿ ಕನ್ನಡಕ್ಕೆ ಅವಮಾನ ಮಾಡಲಾಗಿದೆ. ಇನ್ನು 15 ದಿನಗಳ ಒಳಗೆ ಸರ್ಕಾರವೇ ಮುಂದೆ ನಿಂತು ಕನ್ನಡದ ಅಡಿಗಲ್ಲು ಸ್ಥಾಪಿಸದಿದ್ದರೆ ಆಮ್ ಆದ್ಮಿ ಪಕ್ಷ ಮುಂದೆ ನಿಂತು ಫಲಕ ಸ್ಥಾಪಿಸುತ್ತದೆ ಎಂದು ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಭಾಷೆಗೆ ಹಾಗೂ ಕನ್ನಡಿಗರಿಗೆ ಅವಮಾನ ಮಾಡಿರುವುದು ತರವಲ್ಲ, ಪದೇಪದೆ ನಮ್ಮ ಒಕ್ಕೂಟ ವ್ಯವಸ್ಥೆಗೆ ಮತ್ತು ಭಾಷಾ ಸಮಾನತೆಗೆ ಕೇಂದ್ರ ಸರ್ಕಾರ ಧಕ್ಕೆ ಉಂಟುಮಾಡುತ್ತಲೇ ಇದೆ. ಇನ್ನು ಶಂಕುಸ್ಥಾಪನೆ ವೇಳೆ ಕನ್ನಡದ ಅಡಿಗಲ್ಲು ಹಾಕದೇ ಇರುವುದನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.
ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಒಕ್ಕೂಟ ವ್ಯವಸ್ಥೆ ಹಾಗೂ ಈ ನೆಲದ ಭಾಷೆಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಸುಮಾರು 15 ಭಾಷೆಗಳ ಅಕಾಡೆಮಿ ಸ್ಥಾಪಿಸಿದೆ ಹಾಗೂ ದೆಹಲಿ ಕನ್ನಡ ಶಾಲೆಯನ್ನು ಇತ್ತೀಚೆಗೆ ಅಭಿವೃದ್ಧಿ ಪಡಿಸಿದೆ. ಯಾವುದೇ ಸರ್ಕಾರದ ಪ್ರಮುಖ ಲಕ್ಷಣ ಭಾಷೆಗಳನ್ನು ಗೌರವಿಸುವುದು, ಆದರೆ ಬಿಜೆಪಿ ಅವಲಕ್ಷಣದ ರಾಜಕೀಯ ಮಾಡುತ್ತಿದೆ ಎಂದು ಹೇಳಿದರು.
ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿರುವ ಶಿವಮೊಗ್ಗ ಜಿಲ್ಲೆಯಲ್ಲೇ ಕನ್ನಡ ಭಾಷೆ ಬಳಸದೆ ಇರುವುದು ಅಪರಾಧ ಎಂದು ಅಭಿಪ್ರಾಯಪಟ್ಟರು.
ಕನ್ನಡದೇ ನೆಲದಲ್ಲಿ ಹಿಂದಿ ಹೇರಿಕೆ ಮಾಡಿ ಕನ್ನಡಕ್ಕೆ ಅವಮಾನ ಎಸಗಿರುವ ಭಾರತೀಯ ಜನತಾ ಪಕ್ಷದ ಈ ಸರ್ವಾಧಿಕಾರಿ ನಡೆಯನ್ನು ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ ಎಂದರು.
ಗೃಹ ಸಚಿವ ಅಮಿತ್ ಷಾ ಅವರು ಎಲ್ಲೇ ಹೋದರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಇವರೇನು ಎಲ್ಲಾ ಕಾನೂನುಗಳಿಗೆ ಅತೀತರೇ ಎಂದು ಪ್ರಶ್ನಿಸಿದರು.
ತಲೆಕೆಟ್ಟ ಹೇಳಿಕೆ ನೀಡಿದ್ದಾರೆ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು “ಕರ್ನಾಟಕ ಆಕ್ರಮಿತ ಪ್ರದೇಶ” ಎಂದು ತಲೆಕೆಟ್ಟ ಹೇಳಿಕೆ ನೀಡಿ, ಶಾಂತಿಯಿಂದ ಇರುವ ಕನ್ನಡಿಗರು ಹಾಗೂ ಮರಾಠಿಗರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.
ಅಚಾನಕ್ ಆಗಿ ಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿಕೊಂಡಿರುವ ಉದ್ಧವ್ ಠಾಕ್ರೆ ಅವರೇ ದೆಹಲಿ ಮಾದರಿಯಲ್ಲಿ ನಿಮ್ಮ ಮಹಾರಾಷ್ಟ್ರ ಅಭಿವೃದ್ಧಿ ಮಾಡಿ, ಕರ್ನಾಟಕಕ್ಕಿಂತ ಹಿಂದುಳಿದಿರುವ ನೀವು ನಿಮ್ಮ ರಾಜ್ಯದ ಅಭಿವೃದ್ಧಿ ಕಡೆ ಮೊದಲು ಗಮನಕೊಡಿ ಎಂದು ಕಿಡಿಕಾರಿದರು.