ವಿಜಯಪಥ ಸಮಗ್ರ ಸುದ್ದಿ
ಉಡುಪಿ: ಎರಡು ದಿನಗಳ ಉಡುಪಿ ಭೇಟಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಕೊಡಿಯಲ್ಲಿ ಮೀನುಗಾರಿಕೆ ಬಂದರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
180.8 ಕೋಟಿ ರೂ. ಯೋಜನೆಯ ಹೆಜಮಾಡಿ ಸರ್ವಋತು ಮೀನುಗಾರಿಕಾ ಬಂದರು ಕಾಮಗಾರಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು. ಇಲ್ಲಿ ಮೀನುಗಾರಿಕೆ ಇಲಾಖೆ ಅಧೀನದಲ್ಲಿರುವ ಸುಮಾರು 70 ಎಕರೆ ಭೂಮಿಯಲ್ಲಿ ಮೀನುಗಾರಿಕೆ ಬಂದರಿಗಾಗಿ ಸುಸಜ್ಜಿತ ಮೀನುಗಾರಿಕಾ ಜಟ್ಟಿ, ಬ್ರೇಕ್ ವಾಟರ್ ಸೌಲಭ್ಯ, ಬೋಟ್ ರಿಪೇರಿ ಶೆಡ್, ಹರಾಜು ಮಳಿಗೆ, ವರ್ಕ್ ಮನ್ ಶೆಡ್, ಕಚೇರಿಗಳು ಸೇರಿ ಸುಸಜ್ಜಿತ ಬಂದರು ನಿರ್ಮಾಣವಾಗಲಿದೆ.
ಈ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ರವರು ಇಂದು ಮೀನುಗಾರರಿಗೆ ಸಂಕಷ್ಟ ಪರಿಹಾರ, ಮತ್ಸ್ಯಾಶ್ರಯ ಯೋಜನೆ ಹಾಗೂ ಭಾಗ್ಯಲಕ್ಷ್ಮಿ ಯೋಜನೆಯಡಿ ಚೆಕ್ ವಿತರಿಸಿದರು.
ಈ ಎಲ್ಲಾ ಕಾರ್ಯಕ್ರಮದ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜಕೀಯ ಮರೆತು ಧಾರ್ಮಿಕ ಪ್ರವಾಸಕ್ಕಾಗಿ ಬಂದಿದ್ದೇನೆ. ಕರಂಬಳ್ಳಿ ವೆಂಕಟರಮಣ ದೇವಾಲಯ, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದೇನೆ. ಇದಲ್ಲದೆ ಉಚ್ಚಿಲದ ಮಹಾಲಕ್ಷ್ಮಿ ದೇವಾಲಯಕ್ಕೂ ಭೇಟಿ ನೀಡಲಿದ್ದೇನೆ. ಇದೀಗ ಆನೆಗುಡ್ಡೆಯ ಶ್ರೀ ವಿನಾಯಕ ದೇವಾಲಯಕ್ಕೆ ತೆರಳುತ್ತಿದ್ದೇನೆ ಎಂದು ತಿಳಿಸಿದರು.
ಮೀನುಗಾರರ ಸಮಸ್ಯೆ ಅರಿತು ಅವರಿಗೆ ಸೂಕ್ತ ಪರಿಹಾರ ಸೂಚಿಸುತ್ತೇನೆ ಎಂದ ಅವರು, ಗೋಹತ್ಯೆ ನಿಷೇಧ ಖಾನೂನು ಜಾರಿ ಮಾಡಿರುವುದು ಎಲ್ಲರಿಗೂ ಸಮಾಧಾನ ತಂದಿದೆ. ಸ್ವಾತಂತ್ರ ಸಿಕ್ಕ ಕೂಡಲೇ ಗೋಹತ್ಯೆ ನಿಷೇಧ ಆಗಬೇಕೆನ್ನುವುದು ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಅದು ಮುಂದೂಡುತ್ತಾ ಬಂದಿತ್ತು.ಆದರೆ ನಾವಿಂದು ಈ ಕಾನೂನನ್ನು ತಕ್ಷಣಕ್ಕೆ ಜಾರಿಗೊಳಿಸಿದ್ದೇವೆ ಎಂದು ಹೇಳಿದರು.
ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಲಾಲಾಜಿ ಆರ್.ಮೆಂಡನ್, ಸಂಸದೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.
ಉಚ್ಚಿಲ ಮಹಾಲಕ್ಷ್ಮಿ ದೇವಾಲಯ ಭೇಟಿ: ಇದಕ್ಕೂ ಮುನ್ನ ಬೆಳಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಕಾಪು ತಾಲೂಕಿನ ಉಚ್ಚಿಲ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.