ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಕೃಷಿ ಸೆಸ್ ಹೆಸರಿನಲ್ಲಿ ಪಟ್ರೋಲ್ ಪ್ರತಿ ಲೀಟರ್ಗೆ 2.5 ರೂ ಹಾಗೂ ಡೀಸೆಲ್ ಪ್ರತಿ ಲೀಟರ್ಗೆ 4 ರೂ. ತೆರಿಗೆಯನ್ನು ಏರಿಸಲಾಗಿದೆ. ಆದರೆ, ಇದರಿಂದ ಗ್ರಾಹಕರ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇಂದು ಮಹತ್ವದ ಕೇಂದ್ರ ಬಜೆಟ್ ಅನ್ನು ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ನಂತರ ಸುದ್ದಿಗೋಷ್ಠಿ ನಡೆಸಿ, ಕೇಂದ್ರ ಬಜೆಟ್ 2021 ರಲ್ಲಿ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸಾಕಷ್ಟು ಹಣವನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಕೊರೊನಾ ನಂತರದ ಮೊದಲ ಬಜೆಟ್ ಎಂಬ ಕಾರಣಕ್ಕೆ ಈ ವರ್ಷದ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ, ಈ ಬಾರಿಯೂ ಬಜೆಟ್ನಲ್ಲಿ ತೈಲ ಮತ್ತು ಮದ್ಯದ ಮೇಲಿನ ತೆರಿಗೆಯಲ್ಲಿ ಭಾರಿ ಏರಿಕೆ ಮಾಡಲಾಗಿದೆ. ಅದರಲ್ಲೂ ತೈಲ ಬೆಲೆ ದಿಢೀರ್ ಏರಿಕೆಯ ವಿರುದ್ಧ ಜನಸಾಮಾನ್ಯರು ಕೆಂಡಾಮಂಡಲರಾಗಿದ್ದಾರೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಹೇರಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೂಲ ಅಬಕಾರಿ ಸುಂಕ (ಬಿಇಡಿ) ಮತ್ತು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್ಎಇಡಿ) ದರಗಳನ್ನು ಕಡಿಮೆ ಮಾಡಲಾಗುವುದು. ಇದರಿಂದ ಒಟ್ಟಾರೆಯಾಗಿ ಗ್ರಾಹಕರಿಗೆ ಯಾವುದೇ ಹೊರೆಯಾಗುವುದಿಲ್ಲಎಂದು ವಿವರಿಸಿದರು.
ಬ್ರ್ಯಾಂಡ್ ಮಾಡಲಾಗದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ಗೆ ಕ್ರಮವಾಗಿ 1.4 ಮತ್ತು 1.8 ರೂ ಮೂಲ ಅಬಕಾರಿ ಸುಂಕ ಇದ್ದರೆ, ಬ್ರ್ಯಾಂಡ್ ಪೆಟ್ರೋಲ್ ಮತ್ತು ಡೀಸೆಲ್ಗಳ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಲೀಟರ್ಗೆ ಕ್ರಮವಾಗಿ 11 ಮತ್ತು 8 ರೂ. ಇದೆ. ಹೀಗಾಗಿ ಈ ಸುಂಕವನ್ನು ಕಡಿತಗೊಳಿಸುವ ಮೂಲಕ ಬೆಲೆಯಲ್ಲಿ ಸಮನ್ವಯ ಸಾಧಿಸಲಾಗುವುದು ಎಂದು ತಿಳಿಸಿದ್ದಾರೆ.
ಕೃಷಿ ಸೆಸ್ ಅನ್ನು ಮದ್ಯದ ಮೇಲೆ ಶೇ.100 , ಚಿನ್ನ ಮತ್ತು ಬೆಳ್ಳಿ ಬಾರ್‌ಗಳ ಮೇಲೆ ಶೇ.2.5, ಕಚ್ಚಾ ತಾಳೆ ಎಣ್ಣೆಯ ಮೇಲೆ ಶೇ.17.5, ಕಚ್ಚಾ ಸೋಯಾಬೀನ್, ಸೂರ್ಯಕಾಂತಿ ಎಣ್ಣೆಯ ಮೇಲೆ ಶೇ.20, ಸೇಬಿನ ಮೇಲೆ ಶೇ.35 ಮತ್ತು ಬಟಾಣಿ ಮೇಲೆ ಶೇ.40 ರಷ್ಟು ಸೇರಿದಂತೆ ಹಲವಾರು ಸರಕುಗಳ ಮೇಲೆ ಹೆಚ್ಚುವರಿ ಸೆಸ್ ವಿಧಿಸಲಾಗಿದೆ. ಆದಾಗ್ಯೂ, ಹೊಸ ಸೆಸ್ ಹೊರತಾಗಿಯೂ ಇವುಗಳ ಬೆಲೆಗಳು ಬದಲಾಗದೆ ಉಳಿಯಲಿದೆ ಎನ್ನಲಾಗುತ್ತಿದೆ.
ರಾಜ್ಯಗಳ ಆದಾಯಕ್ಕೆ ಕೇಂದ್ರದ ಕತ್ತರಿ
ಪೆಟ್ರೋಲ್ ಮತ್ತು ಡೀಸೆಲ್ಗೆ ಕೇಂದ್ರದ ಜತೆಗೆ ರಾಜ್ಯ ಸರ್ಕಾರಗಳು ಸಹ ಪ್ರತ್ಯೇಕ ತೆರಿಗೆ ವಿಧಿಸಿ ವಸೂಲಿ ಮಾಡುತ್ತವೆ. ರಾಜ್ಯಗಳ ಆದಾಯದ ಮೂಲವೇ ಈ ತೆರಿಗೆ. ತೈಲ ಮಾತ್ರವಲ್ಲದೆ ಮಧ್ಯ ಸೇರಿದಂತೆ ಕೃಷಿ ಉತ್ಪಾದನೆಯ ಅನೇಕ ವಾಣಿಜ್ಯ ಬೆಳೆಗಳ ಉತ್ಪಾದನೆಯಿಂದ ಕೇಂದ್ರದಷ್ಟೇ ರಾಜ್ಯಕ್ಕೂ ಸಮಪಾಲು ತೆರಿಗೆ ಲಭ್ಯವಾಗುತ್ತದೆ.
ಆದರೆ, ಕೇಂದ್ರ ಸರ್ಕಾರ ಇದೀಗ ಹಣ ಕ್ರೋಡೀಕರಣ ಮಾಡುವ ಸಲುವಾಗಿ ತೈಲ, ಮಧ್ಯ ಸೇರಿದಂತೆ ಅನೇಕ ವಸ್ತುಗಳ ಮೇಲೆ “ಕೇಂದ್ರದ ಸೆಸ್” ವಿಧಿಸಿ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗುವುದು ಎಂದು ಹೇಳಿದೆ. ಅಸಲಿಗೆ ವಿಶೇಷ ಮತ್ತು ಹೆಚ್ಚುವರಿ ಅಬಕಾರಿ ಸುಂಕಗಳು ರಾಜ್ಯಗಳ ಪಾಲಾಗಲಿರುವ ತೆರಿಗೆ ರೂಪದ ಹಣ. ಆದರೆ, ಸೆಸ್ ನೇರವಾಗಿ ಕೇಂದ್ರದ ಖಾತೆಗೆ ಜಮೆಯಾಗುವ ಹಣ.
ಈಗಾಗಲೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಪಾಲಿನ ಜಿಎಸ್ಟಿ ಹಣದ ಬಾಕಿ ಸಂದಾಯವಾಗಿಲ್ಲ. ಅಲ್ಲದೆ, ಜಿಎಸ್ಟಿ ಮೂಲಕ ರಾಜ್ಯದ ಆರ್ಥಿಕ ಸ್ವಾತಂತ್ರ್ಯದ ಮೇಲೆ ಕೇಂದ್ರ ಹಸ್ತಾಕ್ಷೇಪ ಮಾಡಿದೆ ಎಂಬ ಆರೋಪವಿದೆ. ಈ ನಡುವೆ ವಿಶೇಷ ಅಬಕಾರಿ ಸುಂಕವನ್ನು ಕೇಂದ್ರ ಕಡಿತಗೊಳಿಸಿರುವುದು ರಾಜ್ಯಗಳ ಪಾಲಿಗೆ ಮತ್ತೂ ಶಾಪವಾಗಲಿದೆ ಎನ್ನಲಾಗುತ್ತಿದೆ.
ಹೀಗಾಗಿ ಕೇಂದ್ರ ಸರ್ಕಾರ ತೈಲ, ಮಧ್ಯ ಮತ್ತು ಇತರೆ ವಸ್ತುಗಳ ಮೇಲಿನ ಹೆಚ್ಚುವರಿ ಮತ್ತು ವಿಶೇಷ ಅಬಕಾರಿ ಸುಂಕವನ್ನು ಕಡಿತಗೊಳಿಸಿ “ಕೇಂದ್ರದ ಸೆಸ್” ವಿಧಿಸಿದರೆ, ರಾಜ್ಯಗಳ ಆದಾಯಕ್ಕೆ ತೀವ್ರ ಪೆಟ್ಟು ಬೀಳುತ್ತದೆ.