NEWSದೇಶ-ವಿದೇಶನಮ್ಮರಾಜ್ಯರಾಜಕೀಯ

ಕೇಂದ್ರ ಬಿಜೆಪಿ ಸರ್ಕಾರದ ನಡೆ ಜನವಿರೋಧಿ ಎಂದು ಬಹಿರಂಗ ಪತ್ರ ಬರೆದ ಸಿದ್ದರಾಮಯ್ಯ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಜನಪರವಾಗಿಲ್ಲ. ಅಡುಗೆ ಅನಿಲ ದರ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಪೆಟ್ರೋಲ್, ಡೀಸೆಲ್ ದರ ಗಗನಕ್ಕೆ ಏರಿದೆ. ರೈತರು ಮತ್ತು ಜನಪರ ಸಮಸ್ಯೆಗಳಿಗೆ ಕೇಂದ್ರದಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಸಂಬಂಧ ರಾಜ್ಯದ ಜನತೆಗೆ ಬಹಿರಂಗ ಪತ್ರ ಬರೆದಿರುವ ಅವರು, ಯುಪಿಎ ಸರ್ಕಾರದ ಅಂತ್ಯದ ವೇಳೆಗೆ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ ವಿಧಿಸುತ್ತಿದ್ದ ತೆರಿಗೆ 9.21 ರೂ ಮಾತ್ರ. ಇದನ್ನು ಈಗ 32.98 ರೂ.ಗೆ ಹೆಚ್ಚಿಸಲಾಗಿದೆ. ಹಾಗೆಯೇ ಡೀಸೆಲ್ ಮೇಲೆ ಮೊದಲಿದ್ದ ತೆರಿಗೆ 3.45 ಮಾತ್ರ. ಈಗ ಇದನ್ನು 31.83 ರೂಗೆ ವೃದ್ದಿಸಲಾಗಿದೆ. ಇದು ಜನಪರ ಸರ್ಕಾರದ ನಡಾವಳಿಕೆಯಲ್ಲ ಎಂದಿದ್ದಾರೆ.

ರಾಜ್ಯದಿಂದ ಸ್ಥೂಲವಾಗಿ ನೋಡಿದರೂ ಸುಮಾರು ಎರಡೂವರೆ ಲಕ್ಷಕೋಟಿ ರೂ. ಕೇಂದ್ರಕ್ಕೆ ಹೋಗುತ್ತಿದೆ. ಅದರಲ್ಲಿ 1 ಲಕ್ಷ ಕೋಟಿ ರೂ. ಆದಾಯ ತೆರಿಗೆ, 83 ಸಾವಿರ ಕೋಟಿ ರೂ. ಜಿ.ಎಸ್.ಟಿ, 36 ಸಾವಿರ ಕೋಟಿ ರೂ. ಪೆಟ್ರೋಲ್, ಡೀಸೆಲ್ ಮೇಲಿನ ಹೆಚ್ಚುವರಿ (ಅಡಿಷನಲ್) ತೆರಿಗೆಯಾಗಿದೆ. ಯುಪಿಎ ಸರ್ಕಾರವಿದ್ದಾಗ ಕೇವಲ 3500 ಕೋಟಿ ರೂ. ಮಾತ್ರ ತೆರಿಗೆ ಸಂಗ್ರಹವಾಗುತ್ತಿತ್ತು. 17.5 ಸಾವಿರ ಕೋಟಿ ರೂ. ಕಸ್ಟಮ್ಸ್ ತೆರಿಗೆ ಮುಂತಾದವೆಲ್ಲ ಸೇರಿವೆ ಎಂದು ಹೇಳಿದ್ದಾರೆ.

ರೈತರ ವಿಚಾರಕ್ಕೆ ಬರೋಣ. ರೈತರು ಈಗ ಕೇಂದ್ರ ಜಾರಿಗೆ ತಂದಿರುವ ಮೂರೂ ಕಾಯ್ದೆಗಳು ನಮ್ಮನ್ನು ನಾಶ ಮಾಡುತ್ತವೆ ಎಂದು ಹೇಳುತ್ತಿದ್ದಾರೆ. ಅವುಗಳನ್ನು ಹಿಂಪಡೆಯಿರಿ ಎಂದು ಪ್ರತಿಭಟಿಸುತ್ತಿದ್ದಾರೆ. ಈ ಕಾಯ್ದೆಗಳು ರೈತರನ್ನು ಉದ್ಧಾರ ಮಾಡುತ್ತವೆ ಎಂದು ಕೇಂದ್ರ ಹೇಳುತ್ತಿದೆ. ತಿಳಿದವರು ಯಾವುದು ಸರಿ ಎಂದು ಯೋಚಿಸಬೇಕಲ್ಲವೆ? ಸರಿ ತಪ್ಪುಗಳ ಕುರಿತು ಜನರಿಗೆ ಹೇಳಬೇಕಲ್ಲವೆ? ಚರ್ಚೆ, ಸಂವಾದ ನಡೆಸುವವರನ್ನೇ ದೇಶದ್ರೋಹಿಗಳು ಎಂದು ಬಿಂಬಿಸಿ ಅನೇಕ ಮಾಧ್ಯಮದವರ ಮೇಲೆ ಕೇಸು ಹಾಕಿಬಿಟ್ಟರೆ ಅದನ್ನು ಪ್ರಜಾಪ್ರಭುತ್ವ ಎನ್ನಲಾದೀತೆ?

ರೈತರು ಕೇಳುತ್ತಿರುವುದು ಇಷ್ಟೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದೀರಿ. ಯಾರು ಎಲ್ಲಿ ಬೇಕಾದರೂ ಕೊಳ್ಳಬಹುದು ಮಾರಬಹುದು ಎನ್ನುತ್ತೀರಿ. ಎಪಿಎಂಸಿಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳು ತೆರಿಗೆ ಕಟ್ಟಬೇಕು. ಹೊರಗೆ ಖರೀದಿಸುವವರು ತೆರಿಗೆ ಕಟ್ಟುವಂತಿಲ್ಲ. ಹಾಗಾದಾಗ ಯಾರು ಎಪಿಎಂಸಿಗೆ ಬಂದು ಖರೀದಿಸುತ್ತಾರೆ? ಕೊಳ್ಳುವವರು ಇಲ್ಲ ಎಂದ ಮೇಲೆ ಮಾರುವವರು ತಮ್ಮ ಉತ್ಪನ್ನ ಎಲ್ಲಿ ಮಾರುವುದು?

ರೈತರು ತಮ್ಮ ಹೊಲ ಗದ್ದೆಗಳಲ್ಲೇ ಮಾರಿದರೆ ಎಷ್ಟು ಬೆಲೆಗೆ ಮಾರಿದರು ಎಂದು ನೋಡುವುದು ಹೇಗೆ? ರೈತರನ್ನು ಒಬ್ಬಂಟಿಗಳಾಗಿಸಿ ಶೋಷಣೆ ಮಾಡಿದರೆ ಅದನ್ನು ಹೇಗೆ ನಿಲ್ಲಿಸುತ್ತೀರಿ? ಉತ್ಪನ್ನಗಳ ಬೆಲೆಯನ್ನು ಹೇಗೆ ನಿರ್ಣಯಿಸುತ್ತೀರಿ? ಎಪಿಎಂಸಿಗಳಿದ್ದರೆ ರೈತರು ತಮ್ಮ ಉತ್ಪನ್ನವನ್ನು ಮಳಿಗೆಗಳಲ್ಲಿಟ್ಟು ಸಾಲ ಪಡೆಯಬಹುದು. ಈಗ ಎಪಿಎಂಸಿಗಳೆಲ್ಲ ಖಾಸಗಿಯವರ ಪಾಲಾದರೆ ರೈತರು ಬದುಕುವುದು ಹೇಗೆ?

ಎಪಿಎಂಸಿ ವ್ಯವಸ್ಥೆಯಲ್ಲಿ ಲೋಪಗಳಿಲ್ಲವೆಂತಲ್ಲ. ಅವುಗಳನ್ನು ಸರ್ಕಾರ-ರೈತರು ಒಟ್ಟಾಗಿ ಸೇರಿ ಸರಿ ಮಾಡಬೇಕಲ್ಲವೆ? ರೈತರೊಂದಿಗೆ ಚರ್ಚಿಸದೆ ಕೊರೊನಾ ಕರ್ಫ್ಯೂ ಇದ್ದಾಗ ಸುಗ್ರೀವಾಜ್ಞೆ ಮೂಲಕ ಯಾಕೆ ಹೊಸ ಕಾನೂನು ತಂದಿರಿ? ಸಂವಿಧಾನದಲ್ಲಿ ರಾಜ್ಯಗಳಿಗೆ ಇರುವ ಕೃಷಿ ಮಾರುಕಟ್ಟೆಗಳ ಮೇಲಿನ ಅಧಿಕಾರವನ್ನು ಯಾಕೆ ದಮನಿಸಿ ಒಕ್ಕೂಟ ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದೀರಿ? ಎಂದು ರೈತರು ಕೇಳುತ್ತಿದ್ದಾರೆ.

ಈ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರಿಸುತ್ತಿಲ್ಲ. ಬದಲಿಗೆ, ‘ಬೆಂಬಲ ಬೆಲೆ ರದ್ದು ಮಾಡಲಾಗುತ್ತದೆ ಎಂದು ಕೆಲವು ರೈತರು ಮತ್ತು ವಿಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಇದು ಸುಳ್ಳು ಎಂದು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹಿರಾತು ನೀಡುತ್ತಾರೆ. ಇದಕ್ಕೆ ರೈತರು ‘ಆಯಿತಪ್ಪ, ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡುವ ಕಾಯ್ದೆಯೊಂದನ್ನು ಜಾರಿಗೆ ತನ್ನಿ’ ಎಂದರೆ ಕೇಂದ್ರ ಸರ್ಕಾರ ಬಾಯಿಯನ್ನೇ ಬಿಡದೆ ಮೌನವಾಗುತ್ತದೆ.

ಪಂಜಾಬು ಮತ್ತು ಕೇರಳ ಸರ್ಕಾರಗಳು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಯಾರಾದರೂ ಕೊಂಡುಕೊಂಡರೆ ಅದು ಶಿಕ್ಷಾರ್ಹ ಅಪರಾಧ ಎಂದು ಕಾಯ್ದೆ ತಂದರೆ, ರಾಷ್ಟ್ರಪತಿಗಳು ಆ ಕಾಯ್ದೆಗೆ ಸಹಿ ಮಾಡದೆ ತಿರಸ್ಕರಿಸುತ್ತಾರೆ. ಏನಿದರ ಅರ್ಥ ಎಂದು ಪ್ರಶ್ನಿಸಿದ್ದಾರೆ.

ಮತ್ತದೇ ಗೌರವಾನ್ವಿತ ರಾಷ್ಟ್ರಪತಿಗಳ ಬಾಯಲ್ಲಿ ಈ ಮೂರೂ ಕಾಯ್ದೆಗಳು ರೈತ ಪರವಾಗಿವೆ ಎಂದು ಕೇಂದ್ರ ಸರ್ಕಾರ ಭಾಷಣ ಮಾಡಿಸುತ್ತದೆ. ಹೇಗೆ ಸಹಾಯವಾಗ್ತದೆ ಹೇಳ್ರಪ್ಪಾ ಅಂದರೆ ಮತ್ತದೇ ಮಾತು ತಿರುಚುವ ಕೆಲಸ.

ಪ್ರತಿಭಟನೆ ಮಾಡಿದರೆ ದೇಶದ್ರೋಹಿ ಎಂಬ ಕೇಸು. ಹಾಗಿದ್ದರೆ ರೈತರನ್ನು ಹೇಗೆ ರಕ್ಷಿಸಬೇಕು? ಗದುಗಿನ ಭಾರತ ಕೃತಿ ಬರೆದ ಕನ್ನಡದ ಹೆಮ್ಮೆಯ ಕವಿ ಕುಮಾರವ್ಯಾಸ ಹೇಳುತ್ತಾನೆ; ‘ಕೃಷಿಯೇ ಮೊದಲು ಸರ್ವಕ್ಕೆ.. ಕೃಷಿ ವಿಹೀನನ ದೇಶವದು ದುರ್ದೇಶ ಎನ್ನುತ್ತಾನೆ.’ ಇದು ಇವರಿಗೆ ಯಾಕೆ ಅರ್ಥವಾಗುವುದಿಲ್ಲ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು