ಬೆಂಗಳೂರು: ಕಳೆದ ಡಿಸೆಂಬರ್ 10 ರಿಂದ ಡಿ.14ರವೆಗೆ ನಾಲ್ಕು ದಿನಗಳು ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿದ್ದರು. ಆ ವೇಳೆ ಕೊಟ್ಟ ಮಾತನ್ನು ಸರ್ಕಾರ ಈಡೇರಿಸಿಲ್ಲ ಜತೆಗೆ ಡಿಸೆಂಬರ್ ವೇತನ ಇನ್ನೂ ಕೈ ಸೇರಿಲ್ಲ ಹೀಗಾಗಿ ಮತ್ತೆ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲು ನೌಕರರು ಮುಂದಾಗಿದ್ದಾರೆ.
ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಲಿಖಿತವಾಗಿ ಅನುಮತಿಸಿದ ಹಿನ್ನೆಲೆಯಲ್ಲಿ ಕೆಳದ ಡಿಸೆಂಬರ್ 14ರಂದು ಮುಷ್ಕರ ಹಿಂಪಡೆದಿರುವುದಾಗಿ ನೌಕರರ ಸಮ್ಮುಖದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅಂದು ಘೋಷಿಸಿದ್ದರು.
ಆದರೆ, ತಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಮತ್ತೆ ಉದಾಸೀನ ಮನೋಭಾವನೆ ಹೊಂದಿರುವುದರಿಂದ ಮತ್ತೆ ಮುಷ್ಕರ ನಡೆಸುವ ಸಂಬಂಧ ಇಂದು ಸಭೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಕಳೆದ ಬಾರಿ ಮುಷ್ಕರದ ವೇಳೆ ತಮ್ಮ 10 ಬೇಡಿಕೆಗಳ ಪೈಕಿ ಸರ್ಕಾರ 9 ಬೇಡಿಕೆಗಳನ್ನು ಪರಿಷ್ಕರಿಸಿದೆ. ಆದರೆ ನಮ್ಮ ಪ್ರಮುಖ ಬೇಡಿಕೆಯಾಗಿದ್ದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಬೇಡಿಕೆ ಮಾತ್ರ ಘೋಷಣೆಯಾಗಿಲ್ಲ. ಇನ್ನು 6ನೇ ವೇತನ ಆಯೋಗದ ಜಾರಿ 2020ರ ಜನವರಿಯಿಂದ ಅನ್ವಯವಾಗಲಿದ್ದು ಮಾರ್ಚ್ 2021ರಿಂದ ವೇತನಕ್ಕೆ ಸೆರಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ಆ ಯಾವ ಬೇಡಿಕೆಗಳು ಇನ್ನು ಈಡೇರಿಲ್ಲ.
ಜತೆಗೆ ನೌಕರರಿಗೆ ನಿತ್ಯ ಕಿರುಕುಳಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ಈ ಕಿರುಕುಳ ತಪ್ಪಿಸುವಲ್ಲಿ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಮತ್ತು ಸಾರಿಗೆ ಸಚಿವರು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.
ಮುಷ್ಕರದ ವೇಳೆಯೇ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗದಿದ್ದರೆ ಮತ್ತೆ ಮೂರು ತಿಂಗಳ ಬಳಿಕ ಪ್ರತಿಭಟನೆ ಮಾಡುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದರು. ಅಂದು ನೀಡಿದ್ದ ಎಚ್ಚರಿಕೆಗೆ ಬಗ್ಗದ ಸರ್ಕಾರ ತನ್ನ ಮೊಂಡುತನವನ್ನು ಮುಂದುವರಿಸಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಮಾಡಲು ಮುಂದಾಗುತ್ತಿದೆ ಎಂದು ನೌಕರರು ಹೇಳುತ್ತಿದ್ದಾರೆ.
ಸಾರಿಗೆ ನೌಕರರ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ಇನ್ನೂ ಮುಂದಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರ ಬೇಡಿಕೆ ಈಡೇರಿಸುವಲ್ಲಿ ವಿಫಲವಾದರೆ ಮತ್ತೆ ಹೋರಾಟ ಅನಿವಾರ್ಯವಾಗಲಿದೆ.
l ಕೋಡಿಹಳ್ಳಿ ಚಂದ್ರಶೇಖರ್
ನೌಕರರ ಒಕ್ಕೂಟದ ಉಪಾಧ್ಯಕ್ಷ