ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ತಮ್ಮ ಆದಾಯಕ್ಕೂ ಮೀರಿ ಅಧಿಕವಾಗಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ ಅರೋಪದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಆಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಏಳು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ರಾಜ್ಯದ ಏಳು ಜಿಲ್ಲೆಗಳಲ್ಲಿ 30 ಕಡೆ ಎಸಿಬಿ ದಾಳಿ ಮಾಡಿದೆ. ಅಪಾರ ಪ್ರಮಾಣದ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಬಳ್ಳಾರಿ, ಕೋಲಾರ,ಹುಬ್ಬಳ್ಳಿ- ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಕಲಬುರಗಿಯ ವಿವಿಧೆಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ.
ಹುಬ್ಬಳ್ಳಿಯ ಸಣ್ಣ ನೀರಾವರಿ ಇಲಾಖೆ ಇಇ ದೇವರಾಜ್ ಶಿಗ್ಗಾಂವಿ ಎಂಬುವರ ಮನೆಗಳ ಮೇಲೆ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹುಬ್ಬಳ್ಳಿ ಗೋಕುಲ ರಸ್ತೆ, ವಿದ್ಯಾನಗರ, ಕೋಟಿಲಿಂಗೆಶ್ವರ ನಗರದ ಮನೆಗಳಲ್ಲಿ ಮೂರು ಎಸಿಬಿ ತಂಡಗಳು ಪರಿಶೀಲನೆ ನಡೆಸುತ್ತಿವೆ. ಮಾವನ ಬೆಂಗೇರಿ ಬಳಿಯ ಬಾಲಾಜಿ ನಗರದ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ, ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಸಹಕಾರ ಸಂಘಗಳ ಜಂಟಿ ನಿಂಬಂಧಕ ಡಿ. ಪಾಂಡುರಂಗ ಗರಗ್ ಅವರಿಗೆ ಸಂಬಂಧಿಸಿದ ವಿಜಯನಗರದ ಮನೆ, ಜಯನಗರ, ಮಲ್ಲೇಶ್ವರಂ ಕಚೇರಿ ಹಾಗೂ ಚಿತ್ರದುರ್ಗದ ಮನೆ ಸೇರಿ ಐದು ಕಡೆ ದಾಳಿ ನಡೆದಿದೆ .
ಚಿತ್ರದುರ್ಗದಲ್ಲಿ ಧಾರವಾಡ ಅರಣ್ಯ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಎಂಬುವವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಶ್ರೀನಿವಾಸ್ ಧಾರವಾಡ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಸೇರಿದ ವಿದ್ಯಾನಗರದ ಮನೆ ಹಾಗೂ ಬಸವೇಶ್ವರ ಮೆಡಿಕಲ್ ಕಾಲೇಜು ಬಳಿಯ ಮನೆ ಮೇಲೆ ದಾಳಿ ನಡೆಸಲಾಗಿದೆ. ಜೊತೆಗೆ ಚಿತ್ರದುರ್ಗ ತಾಲೂಕಿನ ಮಾರಘಟ್ಟ ಗ್ರಾಮದ ಬಳಿಯ ತೋಟದ ಮನೆ ಮೇಲೂ ದಾಳಿ ನಡೆಸಲಾಗಿದೆ.
ಕೋಲಾರದಲ್ಲಿ ಡಿಎಚ್ಓ ಡಾ. ವಿಜಯ್ ಕುಮಾರ್ ಅವರ ಮನೆ ಕಚೇರಿ ಸೇರಿ ಒಟ್ಟು 6 ಕಡೆ ಏಕಕಾಲಕ್ಕೆ ದಾಳಿ ನಡೆದಿದೆ. ಡಾ.ವಿಜಯ್ ಕುಮಾರ್ ಅವರ ಮನೆ, ಕಚೇರಿ, ಮುಳಬಾಗಿಲಿನಲ್ಲಿರುವ ಮನೆ ಹಾಗೂ ಅವರ ಖಾಸಗಿ ಆಸ್ಪತ್ರೆ ಮೇಲೆ ಎಸಿಬಿ ಅಧಿಕಾರಿಗಳು ರೇಡ್ ಮಾಡಿದ್ದಾರೆ.
ಜತೆಗೆ ಚಿಂತಾಮಣಿಯಲ್ಲಿರುವ ಮನೆ ಹಾಗೂ ಬೆಂಗಳೂರಿನ ಫ್ಲಾಟ್ ಸೇರಿ ಒಟ್ಟು ಆರು ಕಡೆ ಏಕಕಾಲದಲ್ಲಿ ಎಸಿಬಿ ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಡಾ.ವಿಜಯ್ ಕುಮಾರ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ ಕೇಳಿಬಂದ ಹಿನ್ನೆಲೆ ಎಸಿಬಿ ರೇಡ್ ನಡೆದಿದೆ ಎನ್ನಲಾಗಿದೆ.
ಈ ಮೂಲಕ ಅಧಿಕಾರಿಗಳು ಗಳಿಸಿರುವ ಅಕ್ರಮ ಆಸ್ತಿಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಮಹತ್ವದ ದಾಖಲುಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಇನ್ನು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಳೆ ದಾಳಿ ಮುಂದುವರಿದಿದ್ದು, ಈ ಅಕ್ರಮ ಆಸ್ತಿಗಳಿಕೆಯಲ್ಲಿ ಬಲಾಢ್ಯರು ಕೈ ಜೋಡಿಸಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.