ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಇಂದಿನಿಂದ ರಾಜಧಾನಿ ಬೆಂಗಳೂರಿನಲ್ಲಿ 3 ದಿನಗಳ ಕಾಲ ಏರ್ ಶೋ ನಡೆಯುತ್ತಿದ್ದು, ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಏರ್ ಶೋ ಇದಾಗಿದೆ.
ಇದು ಅನೇಕ ಅವಕಾಶಗಳಿಗೆ ಏರೋ ಇಂಡಿಯಾ-2021 ವೇದಿಕೆ ಒದಗಿಸುತ್ತಿದೆ. ಏರ್ ಎಲ್ಸಿಎಚ್ಗಳ ಹಾರಾಟದಿಂದ ಏರೋ ಇಂಡಿಯಾ ಆಕ್ರೋಬ್ಯಾಟ್ಸ್ ಆರಂಭವಾಗಿದೆ. ಧನುಶ್ ಫಾರ್ಮೇಶನ್- ಮೂರು ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ ಗಳ ಹಾರಾಟ ನಡೆದಿದೆ. ಹಾಕ್, ಸಿತಾರಾ ಮತ್ತು ಟಾನಿಯರ್ 22A ಹೆಲಿಕಾಪ್ಟರ್, ಆತ್ಮನಿರ್ಭರ್ ಫಾರ್ಮೇಶನ್ ಹಾರಾಟ ಮಾಡಿವೆ. ತೇಜಸ್ ಯುದ್ಧ ವಿಮಾನದ ಮುಂದಾಳತ್ವದಲ್ಲಿ 5 ವಿಮಾನಗಳು ಬಾನಂಗಳದಲ್ಲಿ ಹಾರಾಟ ನಡೆಸಿವೆ.
ಈ 5 ಕೂಡ ದೇಸೀ ತಯಾರಿಕಾ ವಿಮಾನಗಳಾಗಿವೆ. ರ್ಯಾಡಾರ್ ಹೊತ್ತ ವಿಮಾನ ನೇತ್ರ ಹಾರಾಟ ನಡೆಸಿದೆ. ವಿಜಯ್ ಫಾರ್ಮೇಶನ್ ಹಾರಾಟ ನಡೆಸಿದೆ. ಅಕ್ಕಪಕ್ಕದಲ್ಲಿ 2 ಸುಖೋಯ್ ಯುದ್ಧವಿಮಾನಗಳು, ಎರಡು ತೇಜಸ್ ವಿಮಾನಗಳ ಆರ್ಭಟ ಜೋರಾಗಿತ್ತು.
ಇದರ ಜತೆಗೆ 3 ರಫೇಲ್ ವಿಮಾನಗಳ ಹಾರಾಟವೂ ನಡೆದಿದೆ. ಗರುಡ್ ಫಾರ್ಮೇಶನ್, ಜಾಗ್ವಾರ್, ಹಾಕ್ ಮತ್ತು ಸುಖೋಯ್, ತ್ರಿಶೂಲ್ ಫಾರ್ಮೇಶನ್, ಸುಖೋಯ್ ಯುದ್ಧವಿಮಾನಗಳು ಯಲಹಂಕದ ವಾಯುನೆಲೆಯ ಬಾನಿನಲ್ಲಿ ಹಾರಾಟ ನಡೆಸಿವೆ.
ಇಂದಿನ ಏರ್ ಶೋನಲ್ಲಿ ಎಲ್ಸಿಎಚ್ ಹಾರಾಟ ನಡೆಸಿದ್ದು, ಇದನ್ನು ಯುದ್ಧದಲ್ಲಿ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಹೆಚ್ಚು ಬಳಿಕೆ ಮಾಡಲಾಗುತ್ತದೆ. ಸಿಯಾಚಿನ್ನಲ್ಲಿ ಹಾರಾಟ ಮಾಡಬಲ್ಲ ಏಕೈಕ ಎಲ್ಸಿಎಚ್ ಇದಾಗಿದೆ.
ಎಚ್ಎಎಲ್ನಲ್ಲಿ ತಯಾರಾದ ಇಂಜಿನ್ ಹೊಂದಿರುವ ಎಲ್ಸಿಎಚ್ ಮುಂದೆ ಎಷ್ಟು ವೇಗದಲ್ಲಿ ಸಾಗುತ್ತದೋ ಹಿಮ್ಮುಖದಲ್ಲೂ ಅಷ್ಟೇ ವೇಗವಾಗಿ ಹಾರಬಲ್ಲ ಶಕ್ತಿಯನ್ನು ಹೊಂದಿದೆ. ಇದು ವಿಶ್ವದ ಅತಿ ಲಘು ವಿಮಾನವಾಗಿದ್ದು, ಎಂತಹ ಪ್ರದೇಶದಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ.
ಸೂರ್ಯ ಕಿರಣ್ ಹಾರಾಟ ಪ್ರೇಕ್ಷಕರ ಮತ್ತು ಗಣ್ಯರ ಗಮನ ಸೆಳೆದಿದ್ದು, 9 ವಿಮಾನಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು. ಏಷ್ಯಾದ ಏಕೈಕ 9 ವಿಮಾನಗಳ ತಂಡವೆಂಬ ಹೆಗ್ಗಳಿಕೆ ಸೂರ್ಯಕಿರಣ್ದಾಗಿದೆ.
ಪ್ರತಿನಿತ್ಯ 2 ಬಾರಿ ಏರ್ ಡಿಸ್ಪ್ಲೇ ನಡೆಯಲಿದೆ. 42 ವಿಮಾನಗಳು ದಿನಕ್ಕೆ ಎರಡು ಬಾರಿ ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನಡೆಸಲಿವೆ. ಭಾರತ ಸೇರಿದಂತೆ ವಿವಿಧ ದೇಶಗಳ 63 ವಿಮಾನಗಳ ಪ್ರದರ್ಶನಗೊಳ್ಳಲಿವೆ.