ವಿಜಯಪಥ ಸಮಗ್ರ ಸುದ್ದಿ
ಜೇವರ್ಗಿ: ಇಂದಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆ ಬೇಕಾಗಿದೆ ಅದಕ್ಕಾಗಿ ಶಿಕ್ಷಕರು ಆಧುನಿಕ ಶಿಕ್ಷಣದ ತಂತ್ರಜ್ಞಾನ ಬಳಕೆಗೆ ಒತ್ತು ನೀಡಲು ಬೆಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಆರ್.ನಾಗರಾಜಯ್ಯ ಕರೆ ನೀಡಿದರು.
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಬೂತಪೂರ ಕಲ್ಯಾಣ ಮಂಟಪದಲ್ಲಿ ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜೇವರ್ಗಿಯ ಧರಂಸಿಂಗ್ ಫೌಂಡೇಷನ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 2020-21ನೇ ಸಾಲಿನ ಅಕ್ಷರ ಆವಿಷ್ಕಾರ ಮಿಷನ್ – 100 ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಮಕ್ಕಳ ಭವಿಷ್ಯ ಶಿಕ್ಷಕರಾದ ನಿಮ್ಮ ಕೈಯಲ್ಲಿದೆ. ಹೀಗಾಗಿ ಅವರನ್ನು ದೇಶಕ್ಕೆ ಸತ್ಪ್ರಜೆಯಾಗಿ ರೂಪಿಸಿ ದೇಶದ ಸಂಪತ್ತಾಗಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ವಿಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಶಾಸಕ ಅಜಯಸಿಂಗ, ನಮ್ಮ ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಧರಂಸಿಂಗ್ ಫೌಂಡೇಷನ್ ವತಿಯಿಂದ ಹೆಚ್ಚಿನ ಒತ್ತು ನೀಡಲಾಗುವುದು. ಜತೆಗೆ ತಾಲೂಕಿನ ಶಾಲೆಗಳ ಅಭಿವೃದ್ಧಿಗೆ ಬದ್ಧನಾಗಿದ್ದೇನೆಂದು ಹೇಳಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಚಂದಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ದೇವಕ್ಕಿ ಚನ್ನಮಲ್ಲಯ್ಯ ಹಿರೇಮಠ, ಯಡ್ರಾಮಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಜೊತೆಪ್ಪಗೋಳ, ತಹಸೀಲ್ದಾರ್ ಸಿದ್ದರಾಯ ಬೋಸಗಿ, ಯಡ್ರಾಮಿ ತಹಸೀಲ್ದಾರ್ ಶಂಕರಗೌಡ ಪಾಟೀಲ, ಇಒ ವಿಲಾಸರಾಜ, ಬಿಇಒ ವೆಂಕಯ್ಯ ಇನಾಮದಾರ, ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಜಶೇಖರ ಸೀರಿ, ಸುನೀಲ, ಹಳ್ಳಿ ರವಿ, ಕೋಳಕೂರ ವಿಜಯಕುಮಾರ ಪಾಟೀಲ, ಕಲ್ಲಹಂಗರಗಾ ಉಪಸ್ಥಿತರಿದ್ದರು.