ವಿಜಯಪಥ ಸಮಗ್ರ ಸುದ್ದಿ
ಮಂಡ್ಯ: ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಯುವ ರೈತರಿಗೆ ಹೆಣ್ಣುಕೊಡುತ್ತಿಲ್ಲ. ಇನ್ನು ಎಲ್ಲೋ ಒಂದು ಕಡೆ ಸಿಟಿಯಲ್ಲಿ ಕೆಲಸದಲ್ಲಿದ್ದಾನೆ ಎಂದರೆ ಅಂಥವರಿಗೆ ಹೆಣ್ಣುಕೊಡುತ್ತಾರೆ. ಹೀಗಾದರೆ ರೈತರಾದ ನಾವು ಎಲ್ಲಿಗೆ ಹೋಗಬೇಕು. ಈ ಸಮಸ್ಯೆಯನ್ನು ಪರಿಹರಿಸಲು ನೀವು ಏನಾದರೂ ಒಂದು ಹೊಸ ಯೋಜನೆಯನ್ನು ತನ್ನಿ ಎಂದು ಸಚಿವ ಯೋಗೇಶ್ವರ್ ಅವರಿಗೆ ಮಂಡ್ಯದ ಯುವ ರೈತನೊಬ್ಬ ಮನವಿ ಮಾಡಿದ್ದಾನೆ.
ರೈತ ದೇಶದ ಬೆನ್ನೆಲುಬು, ರೈತನಿಲ್ಲದ ದೇಶವಿಲ್ಲ, ರೈತ ಇಡೀ ದೇಶಕ್ಕೆ ಅನ್ನ ನೀಡುವ ಅನ್ನದಾತ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ. ಆದರೆ ವಾಸ್ತವದಲ್ಲಿ ರೈತನಿಗೆ ಹೆಣ್ಣು ಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ 28 ವರ್ಷದ ರೈತ ಪ್ರವೀಣ್ ಎಂಬುವರು ರೈತನೆಂಬ ಕಾರಣಕ್ಕೆ ತನಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಯೋಗೇಶ್ವರ್ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾನೆ.
ನಾನು ಮದುವೆಯಾಗಲು ಯಾರೂ ಕೂಡ ಹೆಣ್ಣು ಕೊಡುತ್ತಿಲ್ಲ. ರೈತನೆಂಬ ಕಾರಣಕ್ಕಾಗಿ ಈ ರೀತಿಯ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ಪರಿಹರಿಸಲು ಒಂದು ಯೋಜನೆ ರೂಪಿಸಿ ಸರ್ ಎಂದು ಕೇಳಿಕೊಂಡಿದ್ದಾನೆ.
ಸರ್ ನಾನೊಬ್ಬ 28 ವರ್ಷದ ಯುವಕ, ನಾನು ರೇಷ್ಮೆ ಕೃಷಿ ಮಾಡುತ್ತಿದ್ದೇನೆ. ಅದರಿಂದ ಒಳ್ಳೆಯ ಸಂಪಾದನೆಯನ್ನೂ ಕೂಡ ಮಾಡುತ್ತಿದ್ದೇನೆ. ಆದರೆ ನಾನು ಮದುವೆಯಾಗಲು ಹುಡುಗಿ ಕೇಳಲು ಹೋದರೆ, ನನಗೆ ಹುಡುಗಿ ಕೊಡುತ್ತಿಲ್ಲ. ನಾವು ರೈತರಿಗೆ ಕೊಡಲ್ಲ. ಸಿಟಿಯಲ್ಲಿ ಇದ್ದವರಿಗೆ ಕೊಡುತ್ತೇವೆ ಎಂದು ಪೋಷಕರು ಹೇಳುತ್ತಿದ್ದಾರೆ. ಇದು ನನ್ನ ಸಮಸ್ಯೆ ಮಾತ್ರವಲ್ಲ, ಇಡೀ ರೈತ ಯುವಕರ ಸಮಸ್ಯೆಯಾಗಿದ್ದು, ಈ ಸಮಸ್ಯೆಯನ್ನು ಪಡಿಹರಿಸುವ ಸಲುವಾಗಿ ಒಂದು ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ನಿಮ್ಮಲ್ಲಿ ಮವಿ ಮಾಡುತ್ತೇನೆ ಎಂದು ಕೇಳಿಕೊಂಡಿದ್ದಾನೆ.
ಅಂತರ್‌ಜಾತಿ ಮದುವೆಯಾದವರಿಗೆ 3 ಲಕ್ಷರೂ. ಕೊಡ್ತೀರಾ, ಹಾಗೆಯೇ ರೈತನನ್ನು ಮದುವೆಯಾದ್ರೆ ರೈತರಿಗೆ ಜನಿಸುವ ಮಕ್ಕಳಿಗೆ ಮಗುವಿಗೆ ವಿಮೆಯಾಗಲಿ ಅಥವಾ ಪ್ರೋತ್ಸಾಹ ಧನವನ್ನಾಗಲಿ ನೀಡುವಂತಹ ಕಾಯ್ದೆಯನ್ನು ಜಾರಿಗೊಳಿಸಿ. ಈ ಕುರಿತು ಸಿಎಂ ಸರ್ ಜೊತೆ ಚರ್ಚಿಸಿ ಎಂದು ರೈತ ಪ್ರವೀಣ್ ಮನವಿ ಮಾಡಿಕೊಂಡಿದ್ದು, ಈ ವೇಳೆ ಪ್ರತಿಕ್ರಿಯಿಸಿದ ಯೋಗೇಶ್ವರ್ ಅಣ್ಣ ನೀನು ಹೇಳುತ್ತಿರುವುದು ಸರಿ ಇದೆ. ಇದು ಗಂಭೀರ ಸಮಸ್ಯೆಯಾಗಿದ್ದು, ಈ ಕುರಿತು ಯೋಚನೆ ಮಾಡೋಣ ಎಂದಿದ್ದಾರೆ.
ಇನ್ನು ಈ ವಿಚಾರವಾಗಿ ಯುವ ರೈತರು ಪ್ರವೀಣ್ ಕೇಳಿರುವ ಯೋಜನೆ ಮತ್ತು ಕಾಯ್ದೆ ಸರಿಯಾಗಿ ಇದೆ ಈ ಬಗ್ಗೆ ರೈತ ಪರ ಕಾಳಜಿ ಇರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಒಂದು ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು. ಈ ಮೂಲಕ ಯುವ ರೈತರಿಗೆ ಒಳ್ಳೆಯದು ಮಾಡಬೇಕು ಎಂದು ಮನವಿ ಮಾಡುತ್ತಿದ್ದಾರೆ.