ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಸಂಕಷ್ಟದ ಮಧ್ಯೆ ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ ಸೇರಿದಂತೆ ಒಟ್ಟು 18 ಬ್ಯಾಂಕುಗಳು ಬರೋಬ್ಬರಿ 25 ಸಾವಿರ ಕೋಟಿ ರೂ. ನಷ್ಟ ಹೆಚ್ಚಿನ ಪ್ರಮಾಣದಲ್ಲಿ ವಸೂಲಾಗದ ಸಾಲವನ್ನು (ಎನ್‌ಪಿಎ) ಮನ್ನಾ ಮಾಡಿವೆ.
ದೇಶದ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳ ವಸೂಲಾಗದ ಸಾಲಗಳ ಹೊರೆ ಕಡಿಮೆ ಮಾಡಿ, ಅವುಗಳನ್ನು ಮುಳುಗದಂತೆ ರಕ್ಷಿಸುವ ಉದ್ದೇಶದಿಂದ ಕಳೆದ ಐದು ವರ್ಷಗಳಲ್ಲಿ ಸರ್ಕಾರ ಸಾಲು ಸಾಲು ಬ್ಯಾಂಕುಗಳನ್ನು ವಿಲೀನಗೊಳಿಸಿದೆ. ಅಲ್ಲದೆ ಲಕ್ಷಾಂತರ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಆದರೂ, ದೇಶದ ಬ್ಯಾಂಕುಗಳನ್ನು ನಷ್ಟದಿಂದ ಪಾರು ಮಾಡಲು ಸಾಧ್ಯವಾಗಿಲ್ಲ.
ಈ ನಡುವೆ ಕೊರೊನಾ ಸಂಕಷ್ಟದ ನೆಪಹೇಳಿ ಪ್ರಧಾನಿ ಮೋದಿಯವರ ಸರ್ಕಾರ ಒಂದೆಡೆ ವೃದ್ಧರು, ವೃದ್ಧರು, ಅಂಗವಿಕಲರು ಮತ್ತು ವಿಧವೆಯರಿಗೆ ಪಿಂಚಣಿಯಂತಹ ಕನಿಷ್ಠ ಸಾಮಾಜಿಕ ಭದ್ರತಾ ಯೋಜನೆಗಳ ಹಣವನ್ನೂ ಬಿಡುಗಡೆ ಮಾಡದೆ ತಿಂಗಳುಗಳೇ ಕಳೆದಿವೆ. ಆದರೆ ಹೀಗೆ ಒಂದು ಕಡೆ, ಪಿಂಚಣಿ ಹಣ ಬಿಡುಗಡೆ ಮಾಡಲು ಕೊರೊನಾ ಸಂಕಷ್ಟದ ನೆಪ ಹೇಳುತ್ತಿರುವಾಗಲೇ, ದೇಶದ 18 ಬೃಹತ್ ಬ್ಯಾಂಕುಗಳು ಸಾಲವನ್ನು ಮನ್ನಾ ಮಾಡಿರುವ ಅಂಶ ಬೆಳಕಿಗೆ ಬಂದಿದೆ.
ಡಿಸೆಂಬರ್ ತ್ರೈಮಾಸಿಕದಲ್ಲಿ ಎಸ್‌ಬಿಐ ಸೇರಿದಂತೆ ಒಟ್ಟು 18 ಬ್ಯಾಂಕುಗಳು 25,539 ಕೋಟಿ ರೂ. ಮೊತ್ತದ ವಸೂಲಾಗದ ಸಾಲ (ಎನ್‌ಪಿಎ) ಮನ್ನಾ ಮಾಡಿವೆ. ಆ ಮೂಲಕ ಬ್ಯಾಂಕುಗಳು ನಿರಂತರ ಏರುತ್ತಿರುವ ಎನ್‌ಪಿಎ ದರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ. ಸಾಮಾನ್ಯವಾಗಿ ಸಾಲ ಮನ್ನಾ ವಿಷಯದಲ್ಲಿ ಬ್ಯಾಂಕುಗಳು ಎರಡು ವಿಧಾನಗಳನ್ನು ಅನುಸರಿಸುತ್ತವೆ. ಸಾಲ ವಸೂಲಿ ಪ್ರಯತ್ನಗಳನ್ನು ಮುಂದುವರಿಸುತ್ತಲೇ, ಆ ಸಾಲವನ್ನು ತನ್ನ ವಸೂಲಾಗದ ಸಾಲ ಖಾತೆಗಳ ಪಟ್ಟಿಯಿಂದ ಇಡಿಯಾಗಿ ನಿರ್ದಿಷ್ಟ ಖಾತೆಯನ್ನು ತೆಗೆದುಹಾಕುವ ಮೂಲಕ ಎನ್‌ಪಿಎ ಭಾರ ಕಡಿತ ಮಾಡುವುದು ಒಂದು ಕ್ರಮವಾಗಿ ಇದ್ದರೆ; ಇನ್ನೊಂದು, ಬಾಕಿ ಇರುವ ಸಾಲದ ವಸೂಲಿ ಸಾಧ್ಯವೇ ಇಲ್ಲಾ ಎಂದು ಅಂತಿಮವಾಗಿ ನಿರ್ಧರಿಸುವುದು ಮತ್ತು ಅದನ್ನು ಶಾಶ್ವತವಾಗಿ ವಸೂಲಾಗದ ಸಾಲವೆಂದು ಪರಿಗಣಿಸಿ ಮನ್ನಾ ಎಂದು ಘೋಷಿಸುವುದು. ಈಗ ಮನ್ನಾಮಾಡಿರುವ 25 ಸಾವಿರ ಕೋಟಿ ರೂ.ಗಳಲ್ಲಿ ಈ ಎರಡೂ ಬಗೆಯ ಸಾಲಗಳು ಸೇರಿವೆ ಎಂದು ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ಹೇಳಿದೆ.
18 ಬ್ಯಾಂಕುಗಳಲ್ಲಿ ಎಸ್‌ಬಿಐ ಒಂದರಿಂದಲೇ 9,986 ಕೋಟಿ ರೂ. ಮೊತ್ತದ ಎನ್‌ಪಿಎ ಮನ್ನಾವಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 5,850 ಕೋಟಿ, ಬ್ಯಾಂಕ್ ಆಫ್ ಬರೋಡಾ 4,708 ಕೋಟಿ, ಆಕ್ಸಿಸ್ ಬ್ಯಾಂಕ್ 4,242 ಕೋಟಿ ಮತ್ತು ಐಡಿಬಿಐ 2,809 ಕೋಟಿ ಎನ್‌ಪಿಎ ಮನ್ನಾ ಮಾಡಿವೆ. ಆದರೆ, ಹೀಗೆ ಮನ್ನಾವಾಗಿರುವ ಸಾರ್ವಜನಿಕ ತೆರಿಗೆ ಹಣವನ್ನು ವಂಚಿಸಿದ ಉದ್ಯಮಿಗಳು ಮತ್ತು ಕಾರ್ಪೊರೇಟ್ ಕಂಪನಿಗಳ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.
ಏತನ್ಮಧ್ಯೆ, ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ -1 ಮತ್ತು 2 ಸರ್ಕಾರಗಳು ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ದಿವಾಳಿ ಮಾಡಿವೆ. ಕಾಂಗ್ರೆಸ್ ಅಧ್ಯಕ್ಷರು ಮತ್ತು ಅವರ ಕುಟುಂಬ ಆಪ್ತರಿಗೆಲ್ಲಾ ದೇಶದ ಬ್ಯಾಂಕುಗಳಲ್ಲಿದ್ದ ಸಾರ್ವಜನಿಕ ಹಣವನ್ನು ಮನಸೋಇಚ್ಛೆ ದಾನ ಮಾಡಿವೆ. ಒಂದು ಫೋನ್ ಕರೆಗೆ ಯಾವುದೇ ಆಧಾರವಿಲ್ಲದೆ ಸಾವಿರಾರು ಕೋಟಿ ರೂ ಸಾಲ ನೀಡಿದ ಪರಿಣಾಮ ಈಗ ದೇಶದ ಬ್ಯಾಂಕ್‌ಗಳು ಮುಳುಗುತ್ತಿವೆ ಎಂಬುದನ್ನು ಹೇಳಿಕೊಂಡೇ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಬಿಜೆಪಿ,
ಕಳೆದ ಏಳು ವರ್ಷಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆಗಳಿಗೆ ಏನು ಕ್ರಮ ಕೈಗೊಂಡಿದೆ ಎಂಬುದಕ್ಕೆ ನಿರಂತರವಾಗಿ ಏರುತ್ತಲೇ ಇರುವ ವಸೂಲಾಗದ ಸಾಲ (ಎನ್‌ಪಿಎ) ಮತ್ತು ಅದರ ಭಾರದಲ್ಲಿ ಮುಚ್ಚುತ್ತಿರುವ ಸಾಲು ಸಾಲು ಬ್ಯಾಂಕ್‌ಗಳ ಪತನವೇ ಉದಾಹರಣೆಯಾಗಿದೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಕಳೆದ ಏಳು ವರ್ಷಗಳಲ್ಲಿ ದೇಶದ 12 ಪ್ರಮುಖ ಸಾರ್ವಜನಿಕ ಬ್ಯಾಂಕುಗಳು ಮನ್ನಾ ಮಾಡಿದ ದೊಡ್ಡ ಉದ್ಯಮಿಗಳ ಒಟ್ಟು 100 ಕೋಟಿ ರೂ.ಗಿಂತ ಅಧಿಕ ಮೊತ್ತದ ಸಾಲದ ಒಟ್ಟು ಪ್ರಮಾಣ ಬರೋಬ್ಬರಿ 6.32 ಲಕ್ಷ ಕೋಟಿ ರೂ. ಅವುಗಳಲ್ಲಿ, ಕಳೆದ ನಾಲ್ಕು ವರ್ಷಗಳಲ್ಲಿ ಅತಿದೊಡ್ಡ ಸಾಲ ಮನ್ನಾ ಸುಮಾರು 5 ಲಕ್ಷ ಕೋಟಿ ರೂ. ಎಂದು ಆರ್‌ಟಿಐ ಕಾಯ್ದೆಯಡಿ ಪಡೆದ ಮಾಹಿತಿ ವಿವರಿಸುತ್ತಿದೆ. ಹೀಗೆ ಸಾರ್ವಜನಿಕ ಹಣವನ್ನು ಲೂಟಿ ಮಾಡಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮೋದಿ ಅವರ ತವರು ರಾಜ್ಯ ಗುಜರಾತ್ ಮೋಸಗಾರ ಮೆಹುಲ್ ಚೋಕ್ಸಿ, ಮತ್ತು ಆತ ಇದೇ ಸರ್ಕಾರದ ಅವಧಿಯಲ್ಲಿ ದೇಶ ಬಿಟ್ಟು ಓಡಿಹೋಗಿದ್ದಾನೆ!
ಏತನ್ಮಧ್ಯೆ, ಪ್ರಧಾನಿ ಮೋದಿಯವರ ಅತ್ಯಂತ ವಿಶ್ವಾಸಾರ್ಹ ಮಿತ್ರ ಅದಾನಿ ಸಹ ದೇಶದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ಸಾಲವನ್ನು ನೀಡದೇ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಸಂಗತಿಯನ್ನು ಆಡಳಿತ ರೂಢ ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರೇ ಕಳೆದ ತಿಂಗಳು ಬಹಿರಂಗಪಡಿಸಿದ್ದರು.
ಅವರು ಟ್ವೀಟ್ ಮಾಡುವ ಮೂಲಕ “ಚಮತ್ಕಾರಿ ಕಲಾವಿದ ಅದಾನಿ ಪ್ರಸ್ತುತ ಬ್ಯಾಂಕುಗಳಿಗೆ ಬರೋಬ್ಬರಿ 4.5 ಲಕ್ಷ ಕೋಟಿ ರೂ. ಬಾಕಿ (ಎನ್‌ಪಿಎ) ಉಳಿಸಿಕೊಂಡಿದ್ದಾರೆ. ಈ ಮಾಹಿತಿಯು ತಪ್ಪಾಗಿದ್ದರೆ ಸರಿಪಡಿಸಿ. 2016 ರಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ತನ್ನ ಆದಾಯವನ್ನು ದ್ವಿಗುಣಗೊಳಿಸುತ್ತಿರುವ ಈ ಕಲಾವಿದನಿಗೆ ಬ್ಯಾಂಕ್ ಬಾಕಿ ಪಾವತಿಸಲು ಸಮಸ್ಯೆ ಏನು? ಬಹುಶಃ ಆರು ವಿಮಾನ ನಿಲ್ದಾಣಗಳನ್ನು ಖರೀದಿಸುವಂತೆಯೇ ಕೆಲವೇ ದಿನಗಳಲ್ಲಿ ತಾನು ಬಾಕಿದಾರನಾಗಿರುವ ಬ್ಯಾಂಕುಗಳನ್ನು ಖರೀದಿಸುವ ಯೋಜನೆ ಇರಬಹುದು ಎಂದು ಕಾಲೆಳೆದಿದ್ದರು.
ಮೋದಿಯ ಇನ್ನೊಬ್ಬ ಮಿತ್ರರಾದ ಅನಿಲ್ ಅಂಬಾನಿಯ ಮೂರು ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನುಕಳೆದ ತಿಂಗಳಷ್ಟೇ ಎಸ್‌ಬಿಐ ವಂಚನೆ ಎಂದು ಖಾತೆಗಳೆಂದು ಘೋಷಿಸಿದೆ. ಅನಿಲ್ ಅಂಬಾನಿ ಕೇವಲ ಎಸ್‌ಬಿಐ ಒಂದಕ್ಕೇ ಎಸಗಿರುವ ವಂಚನೆಯ ಒಟ್ಟು ಮೊತ್ತ 50 ಸಾವಿರ ಕೋಟಿ ರೂ. ಈ ಮಾಹಿತಿಯನ್ನು ಸ್ವತಃ ಎಸ್‌ಬಿಐ, ದೆಹಲಿ ಹೈಕೋರ್ಟ್‌ಗೆ ನೀಡಿದೆ!
ಹೀಗಾಗಿ, ಬ್ಯಾಂಕಿಂಗ್ ಹಗರಣವನ್ನು ಚುನಾವಣಾ ಅಸ್ತ್ರವಾಗಿ ಬಳಸಿ ಗೆದ್ದು ಬಂದು ಅಧಿಕಾರ ಹಿಡಿದವರ ಸರ್ಕಾರದ ಚುಕ್ಕಾಣಿ ಹಿಡಿದವರ ಆಪ್ತರೇ ಲಕ್ಷಾಂತರ ಕೋಟಿ ರೂ. ಬ್ಯಾಂಕ್ ವಂಚನೆಯಲ್ಲಿ ಮುಳುಗಿರುವಾಗ ದೇಶದ ಬಡವರು, ಕೂಲಿ ಕಾರ್ಮಿಕರ ಚಿಲ್ಲರೆ ಕಾಸಿನ ಸಾಲದ ವಸೂಲಾತಿಗೆ ಕಾನೂನು ಕತ್ತಿ ಝಳಪಿಸಲಾಗುತ್ತಿದೆ.
ಕೊರೊನಾ ಸಂಕಷ್ಟದ ನಡುವೆಯೂ ಕನಿಷ್ಠ ಬಡ್ಡಿ ಮನ್ನಾವನ್ನೂ ಮಾಡದೆ, ಸಣ್ಣ ವ್ಯಾಪಾರಿಗಳು, ಉದ್ಯಮಿಗಳು ಮತ್ತು ಗೃಹ ಉದ್ಯಮಿಗಳ ಮೇಲೆ ಬಡ್ಡಿ ಮೇಳೆ ಬಡ್ಡಿ ಬರೆ ಎಳೆಯಲಾಗುತ್ತಿದೆ! ಇದು ಬಿಜೆಪಿ 2014ಕ್ಕೆ ಮುನ್ನ ನೀಡಿದ ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಸುಧಾರಣೆಯ ವರಸೆ ಅಲ್ಲವೇ!