ವಿಜಯಪಥ ಸಿನಿಸುದ್ದಿ
ಮೈಸೂರು: ಸಿನಿಮಾ ವಿಚಾರವಾಗಿ ಜಾತಿ, ಧರ್ಮಗಳ ರಾಜಕೀಯ ಬೆರೆಸಬಾರದು ಎಂದು ನವರಸ ನಾಯಕ ಜಗ್ಗೇಶ್ ಅವರಿಗೆ ಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್ ಕಿವಿಮಾತು ಹೇಳಿದ್ದಾರೆ.
ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ವಾರ್ ಕುರಿತಂತೆ ಮೈಸೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಅವರು, ಜಗ್ಗೇಶ್ ಹಿರಿಯ ನಟರಾಗಿ ಜಾತಿ, ಧರ್ಮಗಳ ರಾಜಕಾರಣವನ್ನು ಸಿನಿಮಾದ ಮಧ್ಯೆ ತರಬಾರದಿತ್ತು ಎಂದು ಅಭಿಪ್ರಾಯ ಪಟ್ಟರು.
ಇನ್ನು ಈ ಪ್ರಕರಣ ಸಂಬಂಧ ದರ್ಶನ್ ಕೂಡ ಸ್ಪಷ್ಟನೆ ನೀಡಬೇಕಿತ್ತು. ನಾನು ಈ ಬಗ್ಗೆ ದರ್ಶನ್ ಸಂಪರ್ಕಿಸಿದಾಗ, ಸದ್ಯದಲ್ಲೇ ಮಾತನಾಡುವುದಾಗಿ ಹೇಳಿದ್ದಾರೆ ಎಂದು ಸಂದೇಶ್ ನಾಗರಾಜ್ ತಿಳಿಸಿದರು.
ಎರಡು ದಿನದಲ್ಲಿ ಒಂದೇ ವೇದಿಕೆಯಲ್ಲಿ ಜಗ್ಗೇಶ್ ಮತ್ತು ದರ್ಶನ್ ಇಬ್ಬರನ್ನು ಒಂದುಗೂಡಿಸಿ ಮಾಧ್ಯಮ ಗೋಷ್ಠಿ ನಡೆಸುತ್ತೇನೆ ಎಂದು ಸಂದೇಶ್ ನಾಗರಾಜ್ ಹೇಳಿದರು.
ಈ ನಡುವೆ ಜಗ್ಗೆ ಅವರು ತಿ.ನರಸೀಪುರ ತಾಲೂಕಿನ ಅತ್ತಹಳ್ಳಿಯಲ್ಲಿ ದಿಡೀರ್ ಸುದ್ದಿಗೋಷ್ಠಿ ಕರೆದು ದರ್ಶನ್ ಈ ಬಗ್ಗೆ ನನ್ನೊಂದಿಗೆ ಮಾತನಾಡಿದ್ದರೆ, ಇಲ್ಲ ಒಂದು ಫೋನ್ ಕರೆ ಮಾಡಿದ್ದರೆ ನಾನು ಅವರ ದೊಡ್ಡತನವನ್ನು ಮೆಚ್ಚಿಕೊಳ್ಳುತ್ತಿದ್ದೆ. ಆದರೆ ಅವರು ನನಗೆ ಯಾವುದೇ ಕರೆ ಮಾಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಜತೆಗೆ ಬೆಂಗಳೂರಿನಿಂದ ನನ್ನನ್ನು 15-20 ಜನರಿದ್ದ ಯುವಕರ ತಂಡ ಹಿಂಬಾಲಿಸಿಕೊಂಡು ಬಂದಿತ್ತು. ಅವರು ರಾಮನಗರದಲ್ಲೇ ನನ್ನನ್ನು ತಡೆಯಲು ಯತ್ನಿಸಿದರು> ಅಲ್ಲೇ ನಾನು ಇಳಿದಿದ್ದರೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸವಾರರಿಗೆ ತೊಂದರೆ ಆಗುತ್ತದೆ ಎಂದು ಇಳಿಯಲಿಲ್ಲ ಎಂದು ಹೇಳಿದರು.
ಆ ಯುವಕರ ಗುಂಪು ನಾನು ಶೂಟಿಂಗ್ ನಡೆಸುತ್ತಿರುವ ಅತ್ತಹಳ್ಳಿಗೆ ಬಂದು ಇಲ್ಲಿ ಈ ರೀತಿಯಾಗಿ ಲೈವ್‌ನಲ್ಲೇ ಮಾತನಾಡಿದ್ದಾರೆ. ಇದರ ಹಿಂದೆ ದೊಡ್ಡ ಕುತಂತ್ರವೇ ಇದೆ ಎಂದು ಹೇಳಿದ್ದು, ನಾನು ನಿರಂತರವಾಗಿ ಪೊಲೀಸರ ಸಂಪರ್ಕದಲ್ಲಿ ಇದ್ದೇನೆ ಎಂದು ತಿಳಿಸಿದರು.