ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಜೆಡಿಎಸ್ ನಲ್ಲಿ 6ಜನ ಆಕಾಂಕ್ಷಿಗಳಿದ್ದರೂ ರುಕ್ಮಿಣಿ ಅವರನ್ನು ಕುಮಾರಸ್ವಾಮಿ ಆಯ್ಕೆಮಾಡಿದ್ದರ ಹಿಂದೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆಗೊಳಿಸುವ ತಂತ್ರಗಾರಿಕೆ ಇದೆ ಎಂದು ಹೇಳಲಾಗುತ್ತಿದೆ.
ರುಕ್ಮಿಣಿ ಪತಿ ಮಾದೇಗೌಡ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶ್ರೀರಾಂಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಜೆಡಿಎಸ್ ಸದಸ್ಯರು.
ಶಾಸಕ ಜಿ.ಟಿ. ದೇವೇಗೌಡ ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭ ಮಾದೇಗೌಡ ಅವರಿಗೆ ಟಿಕೆಟ್ ನೀಡಲು ನಿರಾಕರಿಸಿದ್ದು. ಆ ವೇಳೆ ಕುಮಾರಸ್ವಾಮಿ ಅವರ ಬಳಿಗೆ ತೆರಳಿ ಪಕ್ಷದ ಬಿ ಫಾರಂ ಪಡೆದು, ಶಾಸಕರಿಗೆ ಮಾತುಕತೆ ನಡೆಸುವಂತೆ ಸೂಚನೆ ನೀಡುವಂತೆಯೂ ಕೋರಿಕೊಂಡಿದ್ದರು. ಅದರಂತೆ ಶಾಸಕರ ಬಲದಿಂದ ವಿಜಯಶಾಲಿ ಯಾಗಿದ್ದಾರೆ.
ಆರಂಭದಿಂದಲೂ ಮಾದೇಗೌಡ ಅವರು ಜಿ.ಟಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ. ಈಗಲೂ ನಿಕಟ ಸಂಪರ್ಕದಲ್ಲಿದ್ದಾರೆ. ಬದಲಾದ ಕಾಲಘಟ್ಟದಲ್ಲಿ, ಜಿಟಿಡಿ ಏನಾದರೂ ಜೆಡಿಎಸ್ ತೊರೆದರೆ, ಪರ್ಯಾಯ ಅಭ್ಯರ್ಥಿ ತಯಾರಿಗೆ ಕುಮಾರಸ್ವಾಮಿ ಈಗಿನಿಂದಲೇ ವೇದಿಕೆ ಸಿದ್ಧಗೊಳಿಸುತ್ತಿದ್ದಾರೆ ಎಂಬುವುದು ಜೆಡಿಎಸ್ ಮೂಲಗಳಿಂದ ಖಚಿತಪಟ್ಟಿದೆ.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರು ಮತ್ತು ಕುರುಬ ಸಮುದಾಯದವರ ಪ್ರಾಬಲ್ಯ ಹೆಚ್ಚಾಗಿರುವುದರಿಂದ ಯಾವುದೇ ಪಕ್ಷದ ಅಭ್ಯರ್ಥಿ ಗೆಲುವಿಗೆ ಈ ಎರಡು ಸಮುದಾಯದವರು ನಿರ್ಣಾಯಕ ರಾಗಿರುತ್ತಾರೆ. ಆದ್ದರಿಂದ ಕುಮಾರಸ್ವಾಮಿಯವರು ಈಗಿನಿಂದಲೇ ಇಲ್ಲಿ ನಾಯಕನೊಬ್ಬನನ್ನು ಮುನ್ನೆಲೆಗೆ ತರುವತ್ತ ದೃಷ್ಟಿ ನೆಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.