ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಅಂತಾರಾಜ್ಯ ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಮಾಡಿರುವ ಅನ್ಯಾಯವನ್ನು ರಾಜ್ಯ ಸರ್ಕಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಒತ್ತಾಯಿಸಿದ್ದಾರೆ.
ಹೆಚ್ಚುವರಿ 45 ಟಿಎಂಸಿ ಕಾವೇರಿ ನದಿ ನೀರನ್ನುಬೆಳಸಿ ತನ್ನ ಉದ್ದೇಶಿತ ಯೋಜನೆಗಳನ್ನು ಮುಂದುವರಿಸುವುದಕ್ಕೆ ಮುಂದಾಗಿರುವ ತಮಿಳುನಾಡಿಗೆ ಕಡಿವಾಣ ಹಾಕಬೇಕು. ಕರ್ನಾಟಕ ಈ ವಿವಾದವನ್ನು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಹೋರಾಟ ನಡೆಸಲು ಮುಂದಾಗಿದೆ. ಆದರೆ ಈ ಬಗ್ಗೆ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು. ಉದಾಸೀನ ಭಾವನೆ ಹೊಂದಬಾರದು ಎಂದು ಸಲಹೆ ನೀಡಿದ್ದಾರೆ.
ನಾವು ಸುಪ್ರೀಂಕೋರ್ಟ್ ಗೆ ಹೋಗಿ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕು ಮತ್ತು ಕರ್ನಾಟಕಕ್ಕೆ ಆಗಿರುವ ಅನ್ಯಾಯ ಕುರಿತು ಪ್ರಧಾನಮಂತ್ರಿಗಳಿಗೆ ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಡಬೇಕು ಎಂದು ದೇವೇಗೌಡರು ತಿಳಿಸಿದ್ದಾರೆ.
ಇನ್ನು ತಮಿಳುನಾಡಿನ ಉದ್ದೇಶಿತ ಯೋಜನೆ ಬಗ್ಗೆ ಮಾತನಾಡಲು ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋದರೆ ಹೆಚ್ಚು ಪ್ರಯೋಜನವಾಗದು ಎಂದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ರಾಜ್ಯ ಸರಕಾರ ಮೋದಿಯವರಿಗೆ ಮನದಟ್ಟು ಮಾಡಿಕೊಡಬೇಕು ಎಂದು ಆಗ್ರಹಿಸಿದರು.