ವಿಜಯಪಥ ಸಮಗ್ರ ಸುದ್ದಿ
ಉಡುಪಿ: ಯಾರು ಯಾರನ್ನೋ ಟಾರ್ಗೆಟ್ ಮಾಡುತ್ತಿಲ್ಲ. ಕಾಂಗ್ರೆಸ್ನಲ್ಲಿ ಯಾರನ್ನು ಕಟ್ಟಿ ಹಾಕುವ ಅವಕಾಶ ಇಲ್ಲ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಮೂರು ದಿನಗಳಿಂದ ಏನು ಪ್ರತಿಕ್ರಿಯೆ ಕೊಡದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿನ್ನೆ ಮೌನ ಮುರಿದಿದ್ದಾರೆ.
ಜಿಲ್ಲೆಯ ಬೈಂದೂರು ನೂತನ ಬಸ್ ನಿಲ್ದಾಣದ ಬಳಿ ಶನಿವಾರ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ವಿರೋಧಿಸಿ ಕಾಂಗ್ರೆಸ್ ಹೆಜಮಾಡಿಯಿಂದ ಆರಂಭಿಸಿದ್ದ ಜನಧ್ವನಿ ಪಾದಯಾತ್ರೆ ಸಮಾರೋಪಕ್ಕೆ ಆಗಮಿಸಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕಾಂಗ್ರೆಸ್ ಪಕ್ಷ ಯಾರನ್ನು ಟಾರ್ಗೆಟ್ ಮಾಡುವುದಿಲ್ಲ. ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪ ಸುಳ್ಳು ಎಂದು ಹೇಳಿದರು.
ನಾವು ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಉಳಿಸಿಕೊಳ್ಳಬೇಕು ಎಂದು ಪ್ರಯತ್ನ ಮಾಡಿದೆವು. ಪಾಲಿಕೆ ಸದಸ್ಯರು ಒಳಗಡೆ ಬೇರೆ ತೀರ್ಮಾನ ಮಾಡಿದ್ದಾರೆ. ಯಾರ ಹೆಸರಿಗೂ ಗೌರವಕ್ಕೂ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತೇನೆ. ಯಾರನ್ನು ಕಟ್ಟಿ ಹಾಕುವುದಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದರು.
ನಾಳೆ (ಮಾ.1) ಡಿಕೆಶಿ ತನ್ವಿರ್ ಸೇಠ್ ಮಾತುಕತೆ
ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ನಮ್ಮ ನಾಯಕರ ಬಗ್ಗೆ ಯಾರು ಅವಹೇಳನಕಾರಿ ಹೇಳಿಕೆ ಕೊಡುವಂತಿಲ್ಲ. ಈ ಬಗ್ಗೆ ಪಕ್ಷದ ನಿಲುವು ಸ್ಪಷ್ಟವಾಗಿದೆ. ಸೋಮವಾರ (ಮಾ.1) ತನ್ವಿರ್ ಸೇಠ್ ಅವರನ್ನು ಬೆಂಗಳೂರಿಗೆ ಬರಲು ಹೇಳಿದ್ದೇನೆ. ಮೇಯರ್ ಚುನಾವಣೆ ವೇಳೆ ಏನಾಯಿತು ಎಂಬ ಬಗ್ಗೆ ವಿವರ ಪಡೆಯುತ್ತೇನೆ ಎಂದು ಮೈಸೂರಿನಲ್ಲಿ ನಡೆದ ಎಲ್ಲ ವಿಷಯವೂ ಗೊತ್ತಿದ್ದರೂ ಕೂಡ ಡಿಕೆಶಿ ಅರ್ಧಸತ್ಯ ಮಾತ್ರ ಬಿಚ್ಚಿಟ್ಟರು.
ಇನ್ನು ಮೈಸೂರು ಮಹಾನಗರ ಪಾಲಿಕೆ ಮೇಯರ್ ಗಾದಿ ಜೆಡಿಎಸ್‌ಗೆ ಹೋಗಿದ್ದರಿಂದ ರಾಜ್ಯ ಕಾಂಗ್ರೆಸ್ ನಲ್ಲಿ ತಲ್ಲಣ ಸೃಷ್ಟಿಸಿದ್ದು, ಕಾಂಗ್ರೆಸ್ ಬೆಂಬಲದಿಂದ ಜೆಡಿಎಸ್ ಪಾಲಿಕೆ ಗದ್ದುಗೆ ಏರಿದ್ದಕ್ಕೆ ತವರು ಜಿಲ್ಲೆಯಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯಗೆ ಮುಖಭಂಗವಾಗಿದೆ. ಇದರಿಂದ ವೈರಾಗ್ಯದ ಮಾತುಗಳನ್ನು ಸಿದ್ದರಾಮಯ್ಯ ಅವರು ತಮ್ಮ ಅತ್ಯಾಪ್ತರೊಂದಿಗೆ ಆಡಿದ್ದು, ಈ ರಾಜಕೀಯ ಸಾಕು ಎನಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.