ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಖಾಸಗಿ ವಾಹಿನಿಯೊಂದು ನಡೆಸುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸಿರುವ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ವಿಶೇಷ ಆಹ್ವಾನ ನೀಡಿದರೆ 3-4 ದಿನಗಳ ಮಟ್ಟಿಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದಾರೆ.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋದರೆ ರಾಜಕಾರಣದಲ್ಲಿ ಕಿಡಿ ಒತ್ತುವಂತೆ ಮಾಡುತ್ತೇನೆ. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಮಾಡಿದರೆ ಖಂಡಿತ ಹೋಗುತ್ತೇನೆ ಎಂದರು.
ಕಾರ್ಯಕ್ರಮದ ನಿರೂಪಕರು 6ನೇ ಸೀಸನ್ ಕರೆದಿದ್ದರು ಆಗ ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಭಾಗವಹಿಸಲು ಆಗಿರಲಿಲ್ಲ. ಈಗ ಸಿದ್ದನಿದ್ದೇನೆ. ರಾಜಕಾರಣ ಬಗ್ಗೆ ಶಿಕ್ಷಣ ನೀಡುತ್ತೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಪ್ತರು ಸಲಹೆ ನೀಡಿದ್ದಾರೆ ಎಂದರು.
ಬಿಗ್ ಬಾಸ್ ಕಾರ್ಯಕ್ರಮ ವೇದಿಕೆಯನ್ನು ಕ್ರಿಯಾಶೀಲವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ ಅವರು, ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ಅದರಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ ಹೀಗಾಗಿ ಹೆಚ್ಚು ದಿನಗಳನ್ನು ಬಿಗ್ ಬಾಸ್ ನಲ್ಲಿ ಕಲಿಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಧರ್ಮೇಗೌಡ ಅವರ ನಿಧನದಿಂದ ಖಾಲಿ ಇರುವ ಸ್ಥಾನಕ್ಕೆ ನನಗೆ ಅವಕಾಶ ನೀಡುವಂತೆ ಕೋರಿಕೆ ಸಲ್ಲಿಸಿದ್ದೇನೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೂ ತಂದಿದ್ದೇನೆ. ಸುಪ್ರೀಂಕೋರ್ಟ್ನ ಶಾಪವಿಮೋಚನೆ ಆಗಲು ಅವಕಾಶ ನೀಡಬೇಕು. ಚುನಾವಣೆ ಮೂಲಕ ಆಯ್ಕೆಗೆ ಇದೊಂದು ಅವಕಾಶವಿದೆ ಎಂದರು.
ಸರ್ಕಾರದಲ್ಲಿ ಯಾವುದೇ ಜವಾಬ್ದಾರಿಯನ್ನು ನೀಡಿದರೂ ಸಮರ್ಥವಾಗಿ ನಿಭಾಯಿಸಬಲ್ಲ ನನಗೆ ಕನಿಷ್ಠ ಮೂರು ವರ್ಷ ಅವಕಾಶ ನೀಡಬೇಕು. ಆಗಿರುವ ವ್ಯತ್ಯಾಸವನ್ನು ಸರಿಪಡಿಸಬೇಕು ಎಂದು ಬಿಎಸ್ವೈ ಅವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.