ಏ.7ರಂದು ಸಾರಿಗೆ ನೌಕರರ ಮುಷ್ಕರದ ನೆಪವೊಡ್ಡಿ ಬಿಎಂಟಿಸಿ ಖಾಸಗೀಕರಣಕ್ಕೆ ಸರ್ಕಾರದ ಹುನ್ನಾರ : ಎಎಪಿ ಆರೋಪ
ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಏಪ್ರಿಲ್ 7ರಂದು ಸಾರಿಗೆ ನೌಕರರು ತಮ್ಮ 9 ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರವನ್ನು ನಡೆಸಲು ಕರೆ ನೀಡಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಆಗುವ ಅನಾನುಕೂಲಗಳನ್ನು ತಡೆಗಟ್ಟುವ ನೆಪವೊಡ್ಡಿ ಸರ್ಕಾರವು ಬಿಎಂಟಿಸಿಯ ಅನೇಕ ಲಾಭದಾಯಕ ಮಾರ್ಗಗಳನ್ನು ಖಾಸಗಿಯವರಿಗೆ ಹಂಚಲು ಈಗಾಗಲೇ ರಹದಾರಿ ಅರ್ಜಿಗಳನ್ನು ಆಹ್ವಾನಿಸಿದೆ. ಇದು ನಿಜಕ್ಕೂ ಅತ್ಯಂತ ಕಳವಳಕಾರಿ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರ ಬಳಿ ಚರ್ಚಿಸದೇ ಸರ್ಕಾರವು ಏಕಪಕ್ಷೀಯವಾಗಿ ನಿರ್ಣಯಗಳನ್ನು ತೆಗೆದುಕೊಂಡಿದೆ ಎಂಬುದು ಸಾರಿಗೆ ಕಾರ್ಮಿಕರ ಆರೋಪವಾಗಿದೆ ಎಂದು ತಿಳಿಸಿದರು.
ಸಾರಿಗೆ ಕಾರ್ಮಿಕ ಸಂಘಗಳು ಈಗಾಗಲೇ ಸರ್ಕಾರಕ್ಕೆ ಪೂರ್ವಾನ್ವಯ ಮುಷ್ಕರ ನೋಟಿಸ್ ನೀಡಿದ್ದರೂ ಈಗಾಗಲೇ ಸಾಕಷ್ಟು ಸಮಯಾವಕಾಶವಿದ್ದರೂ ಸಹ ಅವರನ್ನು ಕರೆಸಿ ಮಾತನಾಡದೆ ಸರ್ಕಾರವು ಬೆಂಗಳೂರು ಮಹಾನಗರ ಸಾರಿಗೆಯ ಲಾಭದಾಯಕ ಮಾರ್ಗಗಳನ್ನು ಖಾಸಗಿಯವರಿಗೆ ಮಾರಲು ತಾತ್ಕಾಲಿಕ ರಹದಾರಿ ಅರ್ಜಿಗಳನ್ನು ಕರೆದಿರುವುದು ಸಂಸ್ಥೆಯನ್ನು ಖಾಸಗೀಕರಣವನ್ನು ಮಾಡುವ ಉದ್ದೇಶವೇ ಹೊರತು ಮತ್ತೇನಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳ ಆದಿಯಾಗಿ ಪ್ರಭಾವಿ ಮಂತ್ರಿಗಳು ಈ ಹುನ್ನಾರಕ್ಕೆ ಕೈ ಹಾಕಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ನಾಗಣ್ಣ ಆರೋಪಿಸಿದರು.
ಜನಸಾಮಾನ್ಯರಿಗೆ ಸಾರಿಗೆ ಅವಶ್ಯಕತೆಗಾಗಿ ಸರ್ಕಾರಗಳು ರಿಯಾಯಿತಿ ನೀಡುವ ಮೂಲಕ ಉತ್ತೇಜನ ನೀಡ ಬೇಕಿರುವುದು ಸಂವಿಧಾನದ ಪ್ರಮುಖ ಆಶಯವಾಗಿದೆ. ಆದರೆ, ವ್ಯತಿರಿಕ್ತವಾಗಿ ಕರ್ನಾಟಕ ರಾಜ್ಯ ಸರ್ಕಾರವು ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಲಾಭವನ್ನು ಮಾಡುವ ಉದ್ದೇಶದಿಂದ ಖಾಸಗಿಯವರಿಗೆ ಒಪ್ಪಿಸುತ್ತಿರುವುದು ನಿಜಕ್ಕೂ ಸಂವಿಧಾನ – ಪ್ರಜಾಪ್ರಭುತ್ವ ವಿರೋಧಿ ನಡೆ. ಸರ್ಕಾರದ ಈ ರೀತಿಯ ನಿಲುವುಗಳಿಂದಾಗಿ ಪರಿಸರ ಮಾಲಿನ್ಯ, ಸಂಚಾರಿ ನಿರ್ವಹಣೆ ಇನ್ನಿತರ ಯಾವುದೇ ಸಾರ್ಥಕ ಉದ್ದೇಶಗಳು ಈಡೇರುವುದಿಲ್ಲ ಎಂದರು.
ಪ್ರತಿದಿನ 4.5 ಕೋಟಿಗೂ ಹೆಚ್ಚು ರೂಪಾಯಿಗಳ ಲಾಭ ತರುತ್ತಿರುವ 335,378, 500,600 ರಂತಹ 2500 ಕ್ಕೂ ಹೆಚ್ಚು ಮಾರ್ಗಗಳಿಗೆ ತಾತ್ಕಾಲಿಕ ರಹದಾರಿಗಳನ್ನು ನೀಡುವ ಮೂಲಕ ಖಾಸಗಿಯವರಿಗೆ ಒಪ್ಪಿಸುತ್ತಿರುವುದನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡನೆ ವ್ಯಕ್ತ ಪಡಿಸುತ್ತದೆ. ನೂರಾರು ಕೋಟಿ ರೂಪಾಯಿಗಳ ವ್ಯವಸ್ಥಿತ , ಬೃಹತ್ ಭ್ರಷ್ಟಾಚಾರ ಇದಾಗಿದೆ ಎಂಬುದು ನಾಗಣ್ಣ ಹೇಳಿದರು.
ಮುಖ್ಯವಕ್ತಾರ ಶರತ್ ಖಾದ್ರಿ ಮಾತನಾಡಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಇತ್ತೀಚೆಗೆ ನೀಡಿದ ಬಿಎಂಟಿಸಿಯನ್ನು ಖಾಸಗೀಕರಣಗೊಳಿಸಿ ಮುಚ್ಚಿ ಹಾಕುವಂತಹ ಹೇಳಿಕೆಗೆ ಸರ್ಕಾರದ ಈ ನಡೆ ಮತ್ತಷ್ಟು ಪುಷ್ಟಿ ನೀಡುವಂತಿದೆ ಎಂದರು.
ಸಾರಿಗೆ ಇಲಾಖೆಗೆ ಬಿಎಂಟಿಸಿ ನಿರ್ವಹಣೆಯನ್ನು ಮಾಡಲಾಗದಿದ್ದಲ್ಲಿ ಥಾಣೆ ,ನವಿ ಮುಂಬೈ , ಬಾಂಬೆ ಮುನ್ಸಿಪಲ್ ಕಾರ್ಪೊರೇಶನ್ ಗಳು ಈಗಾಗಲೇ ಆ ನಗರಗಳ ಸಾರಿಗೆ ವ್ಯವಸ್ಥೆಯನ್ನು ನಿರ್ವಹಿಸುತ್ತಿವೆ. ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಬಿಬಿಎಂಪಿಗೆ ಸಾರಿಗೆ ನಿರ್ವಹಣೆ ಜವಾಬ್ದಾರಿಯನ್ನು ಒಪ್ಪಿಸುವುದು ಸೂಕ್ತ ಎಂದು ಹೇಳಿದರು .
ಸರ್ಕಾರದ ಭವಿಷ್ಯದ ಈ ನಡೆ ಲಕ್ಷಾಂತರ ಸಾರಿಗೆ ಕಾರ್ಮಿಕರು ಹಾಗೂ ಅವರ ಕುಟುಂಬದವರನ್ನು ಬೀದಿಗೆ ತಳ್ಳುವ ಅಮಾನವೀಯ ನಡೆಯಾಗಿದ್ದು ಆಮ್ ಆದ್ಮಿ ಪಕ್ಷವು ತೀವ್ರ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೆಂಗಳೂರು ನಗರ ಮಹಿಳಾ ವಿಭಾಗದ ಅಧ್ಯಕ್ಷೆ ಕುಶಲಾ ಸ್ವಾಮಿಯವರು ಇದ್ದರು.