ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈಗಾಗಲೇ ಸಾರಿಗೆ ನೌಕರರು ಅನೇಕ ಬಾರಿ ಮುಷ್ಕರ ಮಾಡಿದ್ದಾರೆ. ಆದರೆ, ಇದುವರೆಗೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಹೀಗಾಗಿ ಏಪ್ರಿಲ್ 7ರಿಂದ ಬೇಡಿಕೆ ಈಡೇರುವವರೆಗೂ ಮುಷ್ಕರ ನಡೆಸುವುದು ಖಚಿತ ಎಂದು ನೌಕರರ ಕೂಟ ಹೇಳಿದೆ.
ಈ ಕುರಿತು ಸಾರಿಗೆ ನೌಕರರ ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಏಪ್ರಿಲ್ 1ರಂದು ಮತ್ತೊಂದು ಸುತ್ತಿನ ಮಾತುಕತೆಗೆ ಸಾರಿಗೆ ಇಲಾಖೆ ನಮ್ಮನ್ನು ಕರೆದಿದೆ. ನಮ್ಮ ಬೇಡಿಕೆಗಳು ಈಡೇರಿದರೆ ನಾವು ಮುಷ್ಕರ ಕೈ ಬಿಡಲು ಸಿದ್ಧ ಎಂದು ಹೇಳಿದರು.
ಸಾರಿಗೆ ನೌಕರರನ್ನು 6ನೇ ವೇತನ ಆಯೋಗದಡಿ ತರಬೇಕು ಎನ್ನುವ ಪ್ರಮುಖ ಬೇಡಿಕೆ ಆಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾರಿಗೆ ಸಚಿವರು ಪದೇಪದೆ ಹಳೇ ಮಾತುಗಳನ್ನೇ ಹೇಳುತ್ತಿದ್ದಾರೆ. ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ತೀರ್ಮಾನ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಏ.7ರಿಂದ ಬಸ್‌ಬಂದ್ ಮಾಡಿ ನಮ್ಮ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಹೇಳಿದರು.
ಏಪ್ರಿಲ್ 1ರಿಂದ 7ರವರೆಗೆ ವಿವಿಧ ರೀತಿಯ ಪ್ರತಿಭಟನೆ
ಏ.1ರಂದು ಎಲ್ಲಾ 4 ನಿಗಮಗಳ ಸಾರಿಗೆ ನೌಕರರು ಕೈಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಜರಾಗುವರು. 2ರಂದು ಬೆಂಗಳೂರು ಹೊರತು ಪಡಿಸಿ ರಸ್ತೆ ಬದಿಯಲ್ಲಿ, ಬಸ್ ನಿಲ್ದಾಣಗಳಲ್ಲಿ ವಡೆ, ಬೋಂಡ ಹಾಕಿ ವಿಭಿನ್ನರೀತಿಯಲ್ಲಿ ಹೋರಾಟ.
ಹೀಗೆ ಏ.1ರಿಂದ6ವರೆಗೂ ಒಂದೊಂದು ರೀತಿಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಸರ್ಕಾರ ಮತ್ತು ಸಾರಿಗೆ ಸಚಿವರಿಗೆ ಎಚ್ಚರಿಕೆ ನೀಡಲಾಗುವುದು. ನಂತರ ಏ.7ರಿಂದ ಎಲ್ಲಾ ಸರ್ಕಾರಿ ಸಾರಿಗೆ ಬಸ್‌ಬಂದ್ ಮಾಡಿ ಬೇಡಿಕೆ ಈಡೇರುವವರೆಗೂ ಪ್ರತಿಭಟನಾ ಸತ್ಯಾಗ್ರಹ ಮಾಡಲಾಗುವುದು ಎಂದು ವಿವರಿಸಿದರು.
ಇನ್ನು ಈ ಹಿಂದೆ ಮಾರ್ಚ್ 16ರಿಂದ ಬಹುತೇಕ ಸಾರಿಗೆ ನೌಕರರು ಮುಷ್ಕರ ನಡೆಸುವುದು ಖಚಿತವಾಗಿತ್ತು.
ಕಾರಣ ಬಜೆಟ್ನಲ್ಲಿ ಸಾರಿಗೆ ನೌಕರರ ಬೇಡಿಕೆಗಳಿಗೆ ಯಾವುದೇ ಮಹತ್ವ ಸಿಗದಿರುವುದು. ಆದರೆ, ಮಾರ್ಚ್ 16ರಂದು ಸರ್ಕಾರಕ್ಕೆ ಮತ್ತೆ ಈ ಬಗ್ಗೆ ಎಚ್ಚರಿಕೆ ನೀಡಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಮುಷ್ಕರ ಮಾಡುವ ದಿನಾಂಕವನ್ನು ಘೊಷಣೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೂ ಸರ್ಕಾರ ಈವರೆಗೂ ಸ್ಪಂದಿಸಿಲ್ಲ ಎಂದು ಹೇಳಿದರು.
ಕಳೆದ ಡಿಸೆಂಬರ್ ನಲ್ಲಿ ನಾಲ್ಕು ದಿನಗಳ ಕಾಲ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಸಾರಿಗೆ ನೌಕರರು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಗಳನ್ನು ಇಟ್ಟಿದ್ದರು. ಈ ವೇಳೆ ರಾಜ್ಯ ಸರ್ಕಾರ ಸರ್ಕಾರಿ ನೌಕರನಾಗಿ ಮಾಡುವ ಬೇಡಿಕೆ ಬಿಟ್ಟು ಉಳಿದ ಒಂಬತ್ತು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು.
ಜೊತೆಗೆ 6ನೇ ವೇತನ ಆಯೋಗ ಜಾರಿ ಭರವಸೆ ನೀಡಲಾಗಿತ್ತು. ಆದರೆ, ತಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಮನವಿ ಕೊಟ್ಟರು ಸ್ಪಂದಿಸದಿರುವ ಕಾರಣ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು.