ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವುದರಿಂದ 6 ರಿಂದ 9ನೇ ತರಗತಿ ಮಕ್ಕಳು ಶಾಲೆಗಳಿಗೆ ಬಂದು ವಿದ್ಯಾಗಮ ಹಾಗೂ ಭೌತಿಕ ತರಗತಿಗಳ ನಡೆಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸುವುವಂತೆ ಸಚಿವ ಸುರೇಶ್ ಕುಮಾರ್ ಎಲ್ಲ ಶಾಲೆಗಳಿಗೂ ಸೂಚಿಸಿದ್ದಾರೆ.
ರಾಜ್ಯಧಾನಿಯ ಶಾಲೆಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗಿದ್ದು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗುರುವಾರ ತಿಳಿಸಿದ್ದಾರೆ.
ಇದು ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದೆ. ಇನ್ನು 10ನೇ ತರಗತಿ ಮಕ್ಕಳಿಗೆ ಎಂದಿನಂತೆ ಭೌತಿಕ ತರಗತಿ ಮುಂದುವರಿಯಲಿವೆ. ಆದರೆ, ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಉಳಿದ ಕಡೆ ಹಾಲಿ ಇರುವಂತೆ 6 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಭೌತಿಕ ತರಗತಿ ವರೆಗಿನ ಮಕ್ಕಳಿಗೆ ಭೌತಿಕ ತರಗತಿಗಳು ಮುಂದುವರೆಯಲಿವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅನುಗುಣವಾಗಿ ಇತರೆ ಜಿಲ್ಲೆಗಳಲ್ಲೂ ಭೌತಿಕ ತರಗತಿ ಸ್ಥಗಿತಗೊಳಿಸಬೇಕಾಗಿ ಬಂದರೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಶಿಕ್ಷಣ ಕಾಯ್ದೆಯ ಅನುಸಾರ 6-9ನೇ ತರಗತಿಗೆ ಸಂಬಂಧಿಸಿದಂತೆ ಶಾಲೆಗಳು ನಡೆಸಬೇಕಾದ ಮೌಲ್ಯಾಂಕನ ಪರೀಕ್ಷೆಗಳ ಕುರಿತು ಮುಂದಿನ ದಿನಗಳಲ್ಲಿ ನಿರ್ದೇಶನಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.