Please assign a menu to the primary menu location under menu

CrimeNEWSನಮ್ಮರಾಜ್ಯ

ಜಗದೀಶನ ಈ ಸಿನಿಮಾ ನಿಮಗಾಗಿ: ಬಲಾಢ್ಯ ಶಕ್ತಿಗಳ ವಿರುದ್ಧ ಸೆಣೆಸಾಡಿದ ವಕೀಲ್ ಸಾಬ್ – ಈಗ ಸಂತ್ರಸ್ತೆ ಪರ

ಸೊನ್ನೆಯಿಂದ ಬದುಕು‌ ಕಟ್ಟಿಕೊಂಡ ರೀತಿ ಯಾವ ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲ

ವಿಜಯಪಥ ಸಮಗ್ರ ಸುದ್ದಿ

ಪವನ್ ಕಲ್ಯಾಣ್ ಅಭಿನಯದ ‘ವಕೀಲ್ ಸಾಬ್’ ಸಿನಿಮಾ ಇನ್ನೇನು ಬಿಡುಗಡೆಯಾಗಲಿದೆ. ಅದು ಅಮಿತಾಬ್ ಬಚ್ಚನ್ ಅಭಿನಯಿಸಿದ ‘ಪಿಂಕ್’ ಸಿನಿಮಾದ ರೀಮೇಕ್. ಇಲ್ಲಿ ಕರ್ನಾಟಕದಲ್ಲಿ ಒಬ್ಬ ‘ವಕೀಲ್ ಸಾಬ್’ ಹುಟ್ಟಿದ್ದಾರೆ. ಈ ಕೂಸಿಗೆ (ಸಂತ್ರಸ್ಥೆಗೆ) ನ್ಯಾಯ ಕೊಡಿಸುತ್ತೇನೆ ಎಂದು ಆರ್ಭಟಿಸುತ್ತಿದ್ದಾರೆ. ಕರ್ನಾಟಕದಾದ್ಯಂತ‌ ಅವರಿಗೆ ಸಾವಿರಾರು ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. ಅವರ ಹೇಳಿಕೆಗಳು ಸಣ್ಣಸಣ್ಣ ವಿಡಿಯೋ ಕ್ಲಿಪ್ ಗಳಾಗಿ ವೈರಲ್ ಆಗುತ್ತಿವೆ.

ಅವರು ಕೆ.ಎನ್.ಜಗದೀಶ್ ಕುಮಾರ್. ಅವರ ಫೇಸ್ ಬುಕ್ ಲೈವ್ ಗಳನ್ನು ತೆರೆದುನೋಡಿ. ಅಕ್ಷರಶಃ ಅವರು ಆರ್ಭಟಿಸುತ್ತಾರೆ, ಗರ್ಜಿಸುತ್ತಾರೆ. ಒಬ್ಬ ಅಡ್ವೊಕೇಟ್ ಇಷ್ಟು ಅಗ್ರೆಸಿವ್ ಆಗಿ ಮಾತಾಡಬೇಕಾ? ಕೋರ್ಟ್ ರೂಂ ನಲ್ಲೇ ತಮ್ಮ ಸಾಮರ್ಥ್ಯ ತೋರಿದರೆ ಸಾಲದಾ ಎಂದು ನಿಮಗೆ ಅನಿಸಬಹುದು. ನನಗೂ ಹಾಗೇ ಅನಿಸಿತ್ತು ಕೂಡ. ಜಗದೀಶ್ ಗಾಯಗೊಂಡ ಹುಲಿ. ಅದಕ್ಕಾಗಿಯೇ ಈ ಅಬ್ಬರ ಅನ್ನೋದು ನಿಧಾನವಾಗಿ ಅರ್ಥವಾಯಿತು.

2010ರ ಸಮಯದಲ್ಲಿ ಕರ್ನಾಟಕದಲ್ಲಿ ಹಲವು ಹಂತಗಳಲ್ಲಿ, ಹಲವು ಏಜೆನ್ಸಿಗಳ ತನಿಖೆಗಳಲ್ಲಿ ಭ್ರಷ್ಟಾಚಾರ ಪ್ರಕರಣಗಳು ಹಬೆಯಾಡುತ್ತಿದ್ದ ಸಮಯ. ಆಗ ಈ ವಕೀಲ್ ಸಾಬ್ ವಕೀಲರಾಗಿರಲಿಲ್ಲ, ಒಬ್ಬ ಸಾಮಾನ್ಯ ಮನುಷ್ಯರಷ್ಟೆ. ಮಾಹಿತಿ ಹಕ್ಕು ಕಾಯ್ದೆ ಬಳಸಿ ಅಂದಿನ ಡಿಸಿಎಂ ಆರ್. ಅಶೋಕ್ ಸಂಬಂಧಿಗೆ ಕುರಿತಾದ ಭೂಹಗರಣವೊಂದನ್ನು ಲೋಕಾಯುಕ್ತ ಕಟಕಟೆಗೆ ತಂದು ನಿಲ್ಲಿಸಿದರು.‌ ನಂತರ ಆಸ್ತಿ ವಿವರ ಘೋಷಣೆ ಮಾಡಿಕೊಳ್ಳದ ಸುಮಾರು 80 ಐಪಿಎಸ್ ಅಧಿಕಾರಿಗಳು ಬ್ಲಾಕ್ ಲಿಸ್ಟ್ ಆಗಲು ಕಾರಣರಾದರು.

ಕೊಡಿಗೆಹಳ್ಳಿಯಲ್ಲಿ ಬಲಾಢ್ಯ ಶಕ್ತಿಗಳನ್ನು ಎದುರು ಹಾಕಿಕೊಂಡರು. ಇದರಿಂದಾಗಿ ಜಗದೀಶ್ ಮೇಲೆ ಹದಿಮೂರು ಕ್ರಿಮಿನಲ್ ಕೇಸುಗಳು ಮತ್ತು ಅದಕ್ಕೆ ಕಿರೀಟವಿಟ್ಟಂತೆ ರೌಡಿಶೀಟ್ ತೆರೆಯಲಾಯಿತು. ಒಬ್ಬ ಸಾಮಾನ್ಯ ಮನುಷ್ಯ ಇಡಿಯ ವ್ಯವಸ್ಥೆಯನ್ನೇ ಎದುರು ಹಾಕಿಕೊಂಡರೆ ಏನೇನು ಆಗುತ್ತದೋ ಅದೆಲ್ಲವೂ ಆದವು. ಜಗದೀಶ್ ಅವರ ಮೇಲೆ ಹಲ್ಲೆ ನಡೆಯಿತು. ಎರಡು ಬಾರಿ ಜೈಲಿಗೆ ಕಳಿಸಲಾಯಿತು. ಅವರ ಕೌಟುಂಬಿಕ ಬದುಕೂ‌ ಕೂಡ ನಾಶವಾಯಿತು. ಒಂದು ಹಂತದಲ್ಲಿ‌ ಅವರು‌ ಡಿಪ್ರೆಷನ್ ಗೆ ಗುರಿಯಾಗಿ ಯಾರೊಂದಿಗೂ ಮಾತಾಡದೆ ಮೌನವಾಗಿದ್ದರು.

ಇದಿಷ್ಟು ಅವರ ಬದುಕಿನ ಫಸ್ಟ್ ಹಾಫ್. ಇದೆಲ್ಲ ನೀವು ಜಗದೀಶ್ ಅವರ ಮಾತುಗಳಿಂದಲೇ ಕೇಳಿರುತ್ತೀರಿ. ನಂತರ ಅವರು ಸೊನ್ನೆಯಿಂದ ಬದುಕು‌ ಕಟ್ಟಿಕೊಂಡ ರೀತಿ ಇದೆಯಲ್ಲ, ಅದು ಯಾವ ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲ. ತನ್ನ‌ ವಿರುದ್ಧದ ಪ್ರಕರಣಗಳ‌ನ್ನು ತಾನೇ ವಾದಿಸಿ, ಎಲ್ಲ ಪ್ರಕರಣಗಳಿಂದ ಅಕ್ವಿಟ್ ಆಗುವುದು ಅಪ್ಪಟ ಸಿನಿಮೀಯ ತಾನೇ? ಕೇಸು ಮಾತ್ರವಲ್ಲ, ತಮ್ಮ ಮೇಲಿದ್ದ ರೌಡಿಶೀಟನ್ನೂ ತೆಗೆಸಿ ಹಾಕಿದರು ಜಗದೀಶ್. ಈ ನಡುವೆ ಕಾನೂನು ಓದಿಕೊಂಡು ತಾನೇ ವಕೀಲರಾದರು.

ಇಷ್ಟೆಲ್ಲ ಆದ ಮೇಲೂ ಜಗದೀಶ್ ತನ್ನ ಮೇಲಾದ ದಾಳಿ, ದೌರ್ಜನ್ಯಗಳನ್ನು ಮರೆಯಲಿಲ್ಲ. ಒಳಗೆ ಆ ಬೆಂಕಿ‌ ಉರಿಯುತ್ತಲೇ ಇತ್ತು. ಲಾಕ್ ಡೌನ್ ಸಂದರ್ಭದಲ್ಲಿ ಅವರು ಪದೇಪದೇ ಫೇಸ್ ಬುಕ್ ಲೈವ್ ಬರುವ ಮೂಲಕ ತನ್ನದೇ ಆದ ಆಡಿಯನ್ಸ್ ಸೃಷ್ಟಿಸಿಕೊಂಡರು. ಜನಸಾಮಾನ್ಯರಿಗೆ ಕಾನೂನು ತಿಳಿವಳಿಕೆಗಳನ್ನು ನೀಡುವುದು, ಸರ್ಕಾರಿ ಸಂಸ್ಥೆ, ಏಜೆನ್ಸಿಗಳಿಂದ ಆಗಬಹುದಾದ ಅನ್ಯಾಯಗಳಿಂದ ಹೇಗೆ ಪಾರಾಗುವುದು, ಅನ್ಯಾಯವಾದಾಗ ಹೇಗೆ ಹೋರಾಡುವುದು ಎಂಬುದೇ ಅವರ ಮಾತಿನ‌ ವಿಷಯಗಳಾಗಿರುತ್ತಿದ್ದವು. ಜನರಿಗೆ ಸಮಸ್ಯೆಗಳಾದ ಅವರು ಒರಟೊರಟಾಗಿಯೇ ಸರ್ಕಾರವನ್ನು ಗದರುತ್ತಿದ್ದರು.

ನಮ್ಮದು ಭೀತಿಗ್ರಸ್ಥ ಸಮಾಜ.‌ ಜನಸಾಮಾನ್ಯರಲ್ಲಿ ಸಾಮಾಜಿಕ, ರಾಜಕೀಯ ಅನ್ಯಾಯಗಳನ್ನು ಪ್ರಶ್ನಿಸುವ, ಪ್ರತಿಭಟಿಸುವ ಶಕ್ತಿ ಕುಂದುತ್ತಲೇ ಇದೆ. “ಎಲ್ಲರಿಗೂ ಆಗಿದ್ದೇ ನಮಗೇ ಆಗುತ್ತೆ ಬಿಡು” ಎಂದು ಜನರು ತಣ್ಣಗಿರುವ ಕಾಲವಿದು. ಇಂಥ ಸಂದರ್ಭದಲ್ಲಿ ಯಾರೋ ಒಬ್ಬ ತನ್ನ ಪರವಾಗಿ ಮಾತಾಡಲೆಂದು ಜನರು ಬಯಸುವುದು ಸಹಜ. ಜಗದೀಶ್ ಅವರು ಜನರ ಧ್ವನಿಯನ್ನು ಗುರುತಿಸಿದರು, ಅದನ್ನೇ ನಿರ್ಭೀತಿಯಿಂದ ಮಾತಾಡಿದರು. ಹೀಗಾಗಿಯೇ ಪಾಪ್ಯುಲರ್ ಆದರು.

ದೇಶದ್ರೋಹದ ಆರೋಪದಲ್ಲಿ ಸಿಲುಕಿದ ಮೈಸೂರಿನ ನಳಿನಾ ಪರವಾಗಿ ವಕಾಲತು ವಹಿಸದಿರಲು ಅಲ್ಲಿನ‌ ವಕೀಲರ ಸಂಘ ನಿರ್ಧರಿಸಿದಾಗ, ಈ ವಕೀಲ್ ಸಾಬ್ ಒಂದು ದಂಡು ವಕೀಲರನ್ನು ಕರೆದುಕೊಂಡುಹೋಗಿ ಜಾಮೀನು ಕೊಡಿಸಿದರು. ಆಗ ಅವರು ಸಾರ್ವಜನಿಕವಾಗಿ ಹೆಚ್ಚು ಪರಿಚಿತರಾದರು.

ಇನ್ನು ರಮೇಶ್ ಜಾರಕಿಹೊಳಿ‌ ಪ್ರಕರಣ ಹೊರಬಂದ ನಂತರ ಇದ್ದಕ್ಕಿದ್ದಂತೆ ವಕೀಲ್ ಸಾಬ್ ಮುನ್ನೆಲೆಗೆ ಬಂದುನಿಂತರು. ಅದು ಕೂಡ ಕ್ಲೈಮ್ಯಾಕ್ಸ್ ಹಂತದಲ್ಲಿ.‌ ಇಡೀ‌ ತನಿಖೆ ರಮೇಶನನ್ನೇ ಸಂತ್ರಸ್ಥನನ್ನಾಗಿಸಿಕೊಂಡು ಏಕಮುಖವಾಗಿ‌ ಸಾಗುತ್ತಿದ್ದಾಗ ಜಗದೀಶ್ ಅಖಾಡಕ್ಕೆ ಇಳಿದು, ಚಿತ್ರಣವನ್ನೇ ಬದಲಿಸಿಬಿಟ್ಟರು.‌

ಮೊದಲು ಯುವತಿಯ ಪರವಾಗಿ ತಾವೇ ದೂರು ದಾಖಲಿಸಿ, ಎಫ್ ಐ ಆರ್ ದಾಖಲಾಗುವಂತೆ ಮಾಡಿದರು. ನಂತರ ಯುವತಿಯನ್ನು ಕರೆಯಿಸಿ, ನ್ಯಾಯಾಧೀಶರ ಮುಂದೆ ಸ್ವ ಇಚ್ಛಾ ಹೇಳಿಕೆಯನ್ನು (164) ದಾಖಲಿಸುವಂತೆ ಮಾಡಿದರು. ಯುವತಿ ಮೀಡಿಯಾಗಳ ಕೈಗೆ ಸಿಗದಂತೆ ಕಾಪಾಡಿ, ಇನ್ನಷ್ಟು ರಗಳೆಗಳಾಗುವುದನ್ನು ತಪ್ಪಿಸಿದರು. ರಮೇಶನ‌ ವಿರುದ್ಧ ಪ್ರಕರಣವನ್ನು ಸಂಪೂರ್ಣವಾಗಿ ಭದ್ರಗೊಳಿಸಿ ಸರ್ಕಾರ ಮತ್ತು ಎಸ್ ಐಟಿಯನ್ನು ಇಕ್ಕಟ್ಟಿಗೆ ಸಿಲುಕಿಸಿದರು.‌

ನೋಡನೋಡುತ್ತಿದ್ದಂತೆ ಜಗದೀಶ್ ‘ವಕೀಲ್ ಸಾಬ್’ ಆಗಿ ಬದಲಾದರು. ಜಗದೀಶ್ ವಾಚಾಳಿಯೂ ಹೌದು, out spoken ಕೂಡ ಹೌದು. ಮನಸಿಗೆ ಬಂದಿದ್ದನ್ನು ಆಡಿಯೇ ಬಿಡುತ್ತಾರೆ. ರಮೇಶನ ಪ್ರಕರಣ ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ಅವರು ಬಹಿರಂಗವಾಗಿ ತೊಡೆತಟ್ಟುತ್ತಿದ್ದಾರೆ.

ಆರೋಪಿ ಗೂಳಿ ಥರ ಓಡಾಡ್ಕೊಂಡಿದ್ದಾನಲ್ಲ, ಇನ್ನೂ ಯಾಕೆ ಅರೆಸ್ಟ್ ಮಾಡಿಲ್ಲ ಎಂದು ಮೀಡಿಯಾ ಮೈಕುಗಳ ಮುಂದೆಯೇ ಎಸ್ ಐಟಿಯನ್ನು ಗದರುತ್ತಿದ್ದಾರೆ. ವಕೀಲರುಗಳು ಸಾಮಾನ್ಯವಾಗಿ ಕೋರ್ಟಿನ ಒಳಗೆ ತಮ್ಮ ಪಾಂಡಿತ್ಯ ಪ್ರದರ್ಶಿಸಿ ಹೊರಗೆ ಬಂದು ಬಹಳ ಸೌಜನ್ಯದಿಂದ ಸಣ್ಣದಾಗಿ ಮೀಡಿಯಾ‌ ಎದುರು ಬ್ರೀಫ್ ಮಾಡುವುದು ಸಹಜ. ಆದರೆ ಈ ವಕೀಲ್ ಸಾಬ್ ತನ್ನ ತಂಡವನ್ನು ಕೋರ್ಟಿನ ಒಳಗೆ ಬಿಟ್ಟು, ತಾನು ಹೊರಗೆ ನಿಂತು ಎಲ್ಲ ನಿಭಾಯಿಸುತ್ತಿದ್ದಾರೆ.

ನಿಜ, ಯುವತಿ ಪರವಾದ ಕಾನೂನು ಹೋರಾಟದಲ್ಲಿ ಕೇವಲ ಜಗದೀಶ್ ಮಾತ್ರವೇ ಇಲ್ಲ. ಅದೊಂದು ಸಂಘಟಿತ ತಂಡ. ಅದಕ್ಕೆ ರಾಜಕೀಯ ಬೆಂಬಲವೂ ಇದ್ದಂತೆ ಕಾಣುತ್ತಿದೆ. ಸರ್ಕಾರದ ಒಳಗಿನ ಕೆಲ ಶಕ್ತಿಗಳೂ ಬೆಂಬಲಕ್ಕೆ ನಿಂತಿದ್ದರೂ ಆಶ್ವರ್ಯವೇನಿಲ್ಲ. ಆದರೆ ಆ ಹೋರಾಟದ ಮುಖ ಜಗದೀಶ್ ಅವರೇ ಆಗಿದ್ದಾರೆ.

ಮೀಡಿಯಾಗಳ ಮುಂದೆ ಅತ್ಯಂತ ಗಂಭೀರವಾಗಿ ಬೈಟ್ ಕೊಡುವ ವಕೀಲ್ ಸಾಬ್ ಫೇಸ್ ಬುಕ್ ಲೈವ್ ನಲ್ಲಿ ತಮ್ಮ ಸಹೋದ್ಯೋಗಿ ಮಂಜುನಾಥ್ ಜತೆ ಕುಳಿತರೆ ರೊಚ್ಚಿಗೇಳುತ್ತಾರೆ. ಏಯ್, ನಾನು ಯಾವನಿಗೂ ಹೆದರೋದಿಲ್ಲ‌. ನಾನು ನಂದಿ ಅಲ್ಲ, ಜ…ಗ…ದೀ…ಶ ಎಂದು ಅಬ್ಬರಿಸುತ್ತಾರೆ. ಎಂದಿನಂತೆ ಅವರ ಪಕ್ಕ ಇರುವ ಮಂಜುನಾಥ್ ‘ಮೂರನೇ ಕಣ್ಣು ಬಿಟ್ರೆ ಅಷ್ಟೇ’ ಎಂದು ತಾಳ ಸೇರಿಸುತ್ತಾರೆ. ಇದೆಲ್ಲವನ್ನು ಜಗದೀಶ್ ಅವರು ಒಮ್ಮೊಮ್ಮೆ ತೀರಾ ಡ್ರಾಮಟೈಜ್ ಮಾಡಿಬಿಡುತ್ತಾರೆ.

ಇದೆಲ್ಲದರ ನಡುವೆ ಜಗದೀಶ್ ಅವರಿಗೆ ಕೊಲೆಬೆದರಿಕೆಗಳು ಹೆಚ್ಚಾಗಿವೆ. ಅವರ ಮೇಲೆ ಹಿಂದೆ ಇದ್ದ ಕೇಸುಗಳನ್ನು ಇಟ್ಟುಕೊಂಡು ಸೋಷಿಯಲ್‌ಮೀಡಿಯಾದಲ್ಲಿ ಕೆಸರು ಎರಚಲಾಗುತ್ತಿದೆ. ಕೊನೆಗೆ ಜಗದೀಶ್ ಒಬ್ಬ ವಕೀಲರೇ ಅಲ್ಲ ಎಂಬ ವಾದಗಳೂ ಶುರುವಾಗಿದೆ.

ಇದೆಲ್ಲವೂ ನಿರೀಕ್ಷಿತವೇ. ಇದಕ್ಕೆಲ್ಲ ಹೇಗೆ ಪ್ರತಿಕ್ರಿಯಿಸಬೇಕು? ಕೂಗಿ ಅಬ್ಬರಿಸಿದರೆ ಅದು ಹೆಚ್ಚು‌ ಜನರ ಗಮನ ಸೆಳೆಯಬಹುದು.‌ ಜಗದೀಶ್ ಹಿಂದೆ ತಮ್ಮ ಮೇಲಾದ ದೌರ್ಜನ್ಯಗಳಿಗೆಲ್ಲ ಒಂದೇ ಕಂತಿನಲ್ಲಿ ಉತ್ತರ ನೀಡಬೇಕಾಗೂ ಇಲ್ಲ. ಹಾಗೆಯೇ ಈಗ ನಡೆಯುತ್ತಿರುವ ಕೆಸರು ಎರಚಾಟಕ್ಕೆ ಪ್ರತಿಕ್ರಿಯಿಸಬೇಕಾಗೂ ಇಲ್ಲ.

ಅವರು ತಮ್ಮ ಆವೇಶವನ್ನು‌ ಹಿಡಿದಿಟ್ಟುಕೊಂಡು, ಅವರೇ ಹೇಳುವಂತೆ ಭ್ರಷ್ಟ ವ್ಯವಸ್ಥೆಯ ವಿರುದ್ಧದ ಸುದೀರ್ಘ ಹೋರಾಟಕ್ಕೆ ಕಾಯ್ದಿರಿಸಿಕೊಳ್ಳುವುದು ಒಳ್ಳೆಯದು.‌ ಜಗದೀಶ್ ವಕೀಲರಾಗುವುದಕ್ಕೆ ಮುನ್ನ ಹೋರಾಟಗಾರರು. ಈಗ ‘ವಕೀಲ್ ಸಾಬ್’ ಆಗಿದ್ದಾರೆ. ಜನರ ನಿರೀಕ್ಷೆಗಳ ಭಾರವೂ ಅವರ ಮೇಲೆ ಹೆಚ್ಚಾಗಿಯೇ ಇದೆ. ಆ ನಿಟ್ಟಿನಲ್ಲಿ ಅವರು ಒಂಚೂರು ಯೋಚಿಸಲಿ ಎಂಬುದು ನನ್ನ ಪ್ರಾಮಾಣಿಕ ಸಲಹೆ.‌

l ದಿನೇಶ್ ಕುಮಾರ್ ಎಸ್.ಸಿ.

Leave a Reply

error: Content is protected !!
LATEST
KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್