11ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಅರ್ನಿದಿಷ್ಟಾವಧಿ ಮುಷ್ಕರ: ಇನ್ನೂ ಹಠ ಬಿಡದ ಸರ್ಕಾರ
ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರ 11ನೇ ದಿನವೂ ಮುಂದುವರಿದಿದ್ದು, ಇಂದು ಕಾರ್ಮಿಕ ಆಯುಕ್ತರಿಗೆ ಮಾರ್ಚ್ ತಿಂಗಳ ವೇತನ ನೀಡದಿರುವ ಸಾರಿಗೆ ಇಲಾಖೆ ವಿರುದ್ಧ ಏನು ಕ್ರಮ ಜರುಗಿಸಿದ್ದೀರಿ ಎಂಬ ಬಗ್ಗೆ ಮಾಹಿತಿ ಪಡೆದು ಮತ್ತೊಮ್ಮೆ ಮನವಿ ಸಲ್ಲಿಸಲಿದ್ದಾರೆ.
ಇಂದು ಕಾರ್ಮಿಕ ಭವನಕ್ಕೆ ಸಾರಿಗೆ ನೌಕರರೊಂದಿಗೆ ನೌಕರರ ಒಕ್ಕೂಟದ ಪದಾಧಿಕಾರಿಗಳು ತೆರಳಿ ನಮಗೆ ಈ ಕಳೆದ ತಿಂಗಳ ವೇತನ ಬಿಡುಗಡೆ ಮಾಡದೆ ತಡೆ ಹಿಡಿದಿರುವ ಸಾರಿಗೆ ನಿಗಮಗಳ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಪತ್ರ ಸಲ್ಲಿಸಿದ್ದೆವು. ಆದರೂ ಇದುವರೆಗೂ ವೇತನ ಬಿಡುಗಡೆ ಆಗಿಲ್ಲ. ಹೀಗಾಗಿ ನೀವು ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬ ಮಾಹಿತಿ ನೀಡಬೇಕು ಎಂದು ಕಾರ್ಮಿಕ ಆಯುಕ್ತರನ್ನು ಕೇಳುವ ಮತ್ತು ಮುಂದಿನ ಹೋರಾಟದ ಬಗ್ಗೆ ನಿರ್ಧಾರದ ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಲಿದ್ದಾರೆ.
ಈ ನಡುವೆ ಮುಷ್ಕರದ 10ನೇ ಇನವಾದ ನಿನ್ನೆ (ಶುಕ್ರವಾರ) ರಾಜ್ಯದ 224 ಶಾಸಕರ ಮನೆ ಮುಂದೆ ಧರಣಿ ನಡೆಸಿ ಮನವಿ ಪತ್ರ ಸಲ್ಲಿಸುವ ಚಳವಳಿ ಬೆಳಗ್ಗೆ 8ಗಂಟೆಯಿಂದಲೇ ಶುರುವಾಗಿ ಮಧ್ಯಾಹ್ನದ ವರೆಗೆ ನಡೆಯಿತು.
ಈ ವೇಳೆ ಹಲವು ಶಾಸಕರಿಗೆ ಸಾರಿಗೆ ನೌಕರರು ಮನವಿ ಸಲ್ಲಿಸುವ ಮೂಲಕ ಸರ್ಕಾರವೇ ಭರವಸೆ ಕೊಟ್ಟಿರುವ 6ನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಸಹಕರಿಸುವ ಮೂಲಕ ನಮ್ಮನ್ನು ಬೆಂಬಲಿಸಿ ಎಂದು ಕೇಳಿಕೊಂಡರು.
ಮುಷ್ಕರದ 6ನೇ ದಿನದಂದು ತಟ್ಟೆ ಲೋಟ ಬಡಿಯುವ ಚಳವಳಿ ಮಾಡಿದ್ದರು. ಈ ವೇಳೆ ಹಲವರನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆ ಮಾಡಿದ್ದರು. ಮುಷ್ಕರದ 7ನೇ ದಿನವಾದ ಚಂದ್ರಮಾನ ಯುಗಾದಿಯ ದಿನದಂದು ತಟ್ಟಿ ಹಿಡಿದು ಭಿಕ್ಷೆ ಬೇಡುವ ಚಳವಳಿ ಮಾಡಲಾಯಿತು.
ಮುಷ್ಕರದ 8ನೇ ದಿನದಂದು ಅಂದರೆ ಏ.14ರಂದು ಅಂಬೇಡ್ಕರ್ ಪುತ್ಥಳಿ, ಪ್ರತಿಮೆ ಮತ್ತು ಫೋಟೋಗಳಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ವಿನೂತನ ಚಳವಳಿ ನಡೆಸಿದ್ದು, ಮುಷ್ಕರದ 9ನೇ ದಿನದಂದು ಮೇಣದ ಬತ್ತಿ ಹಚ್ಚುವ ಮೂಲಕ ನಮ್ಮ ಬದುಕನ್ನು ಕತ್ತಲೆಗೆ ದೂಡುತ್ತಿರುವ ಸರ್ಕಾರ ಮತ್ತು ಸಾರಿಗೆ ಸಚಿವರು ಮತ್ತು ಅಧಿಕಾರಿಗಳ ಕಣ್ತೆರೆಸುವ ಚಳವಳಿಯನ್ನು ಮಾಡಿ ಯಶಸ್ವಿಯಾಗಿದೆ.
ನೌಕರರ ಮುಷ್ಕರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಆದರೂ ಸರ್ಕಾರ ತನ್ನ ಮೊಂಡು ತನವನ್ನು ಪ್ರದರ್ಶಿಸುತ್ತಿದೆ. ಈ ನಡುವೆ ಈಗಾಗಲೇ ಸರ್ಕಾರದ ನಡೆಯಿಂದ ನೊಂದ ನೌಕರರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಇನ್ನಾದರೂ ಈ ಹಠಮಾರಿ ಧೋರಣೆ ಬಿಟ್ಟು ನೌಕರರ ಮನವಿಯನ್ನು ಪುರಸ್ಕರಿಸಬೇಕಿದೆ.