ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆಯನ್ನು ಮೇ1 ರಿಂದ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿಕೊಳ್ಳುತ್ತಿದ್ದು, ಲಸಿಕೆ ತಯಾರಿಕೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿದೆ. ಹೀಗಾಗಿ ಲಸಿಕೆ ತಯಾರಿಕೆ ಮಾಡುವ ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಒಟ್ಟು 4,500 ಕೋಟಿ ಬಿಡುಗಡೆಗೆ ಅನುಮೋದನೆ ನೀಡಿದೆ.
ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಹಾಗೂ ಭಾರತ್ ಬಯೋಟೆಕ್ ಸಂಸ್ಥೆಗಳಿಗೆ ಮುಂದಿನ ಪೂರೈಕೆಗಾಗಿ ಮುಂಗಡ ಹಣದ ರೂಪದಲ್ಲಿ ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿದೆ.
ಭಾರತ್ ಬಯೋಟೆಕ್ ಸಂಸ್ಥೆ 90 ಮಿಲಿಯನ್ ಡೋಶ್ ಗಳಷ್ಟು ಲಸಿಕೆಯನ್ನು ಮತ್ತು ಎಸ್ಐಐ 200 ಮಿಲಿಯನ್ ಡೋಸ್ ಗಳಷ್ಟು ಲಸಿಕೆಯನ್ನು ಸರ್ಕಾರಕ್ಕೆ ಈ ಹಿಂದಿನ 150 ರೂ.ಗಳ ದರದಲ್ಲಿ ಜುಲೈ ವೇಳೆಗೆ ಪೂರೈಕೆ ಮಾಡಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸರ್ಕಾರದಿಂದ ಲಸಿಕೆ ತಯಾರಿಕೆ ಸಂಸ್ಥೆಗಳಿಗೆ ಹೆಚ್ಚುವರಿ ಲಸಿಕೆ ತಯಾರಿಸುವುದಕ್ಕೆ ಅನುವು ಮಾಡಿಕೊಡುವುದಕ್ಕಾಗಿ ಹಲವು ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ಬ್ಯಾಂಕ್ ಗ್ಯಾರಂಟಿ ಇಲ್ಲದೇ ಮುಂಗಡ ಪಾವತಿಗೆ ಅನುಮತಿ ನೀಡಲಾಗಿದೆ.
ಸರ್ಕಾರದ ಯೋಜನೆಯ ಭಾಗವಾಗಿ ಎಸ್ಐಐಗೆ 3,000 ಕೋಟಿ ಮುಂಗಡವಾಗಿ ಸಿಗಲಿದ್ದರೆ, ಭಾರತ್ ಬಯೋಟೆಕ್ ಗೆ 1,500 ಕೋಟಿ ರೂಪಾಯಿ ಸಿಗಲಿದೆ.