ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮೊಬೈಲ್ ಸಂಭಾಷಣೆಯಲ್ಲಿ ಪಡಿತರ ಅಕ್ಕಿ ವಿತರಣೆಯಲ್ಲಿ ಆಗುತ್ತಿರುವ ಕಡಿತದ ಬಗ್ಗೆ ರೈತರೊಬ್ಬರ ಜೊತೆ ಮಾತನಾಡುತ್ತಾ “ಸತ್ತರೆ ಒಳ್ಳೆಯದು” ಎಂದು ದಾರ್ಷ್ಟ್ಯತನ ಮತ್ತು ದುರುಳ ವಾಗಿ ಮಾತನಾಡಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಮಹತ್ವದ ಜವಾಬ್ದಾರಿ ಹೊತ್ತಿರುವ ಉಮೇಶ್ ಕತ್ತಿ ಯನ್ನು ಈ ಕೂಡಲೇ ಸಂಪುಟದಿಂದ ವಜಾಗೊಳಿಸಬೇಕೆಂದು ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆಗ್ರಹಿಸಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಮಹಾಮಾರಿಯ ಎರಡನೇ ಅಲೆ ಇಡೀ ರಾಜ್ಯವನ್ನೇ ನಜ್ಜುಗುಜ್ಜಾಗಿ ಅಂಧಕಾರದತ್ತ ಕರೆದೊಯ್ಯುತ್ತಿರುವ ಈ ದುರ್ದಿನಗಳಲ್ಲಿ ರೈತರೊಬ್ಬರು ತಮ್ಮ ಅಳಲನ್ನು ತೋಡಿಕೊಳ್ಳಲು ಮಂತ್ರಿಗಳ ಜೊತೆ ಮಾತನಾಡಿದಾಗ ಸಮಾಧಾನ ಪಡಿಸುವಂತಹ ಮಾತನಾಡುವುದನ್ನು ಬಿಟ್ಟು ಈ ರೀತಿಯ ದುರುಳತನವನ್ನು ತೋರಿಸಿರುವ ಮಂತ್ರಿ ಯಾವುದೇ ನಾಗರಿಕ ಸಮಾಜದಲ್ಲಿ ಆಹಾರ ಪೂರೈಕೆ ಯಂತಹ ಮಹತ್ವದ ಜವಾಬ್ದಾರಿ ಮತ್ತು ಅಧಿಕಾರವನ್ನು ಹೊಂದಿರಲು ನಾಲಾಯಕ್ಕು ಎಂದು ಜಗದೀಶ್ ಕಿಡಿಕಾರಿದರು.
ಸಂಪುಟದಿಂದ ಕಿತ್ತು ಹಾಕದಿದ್ದಲ್ಲಿ ಸಚಿವರ ಮನೆ ಮುಂದೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದೆಂದು ಸಿಎಂ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದರು.