Breaking NewsNEWSನಮ್ಮರಾಜ್ಯ

ಕೊರೊನಾ ಅಬ್ಬರಕ್ಕೆ ಕೊಡಗಹಳ್ಳಿಯಲ್ಲಿ ಸ್ಮಶಾನ ಮೌನ: ಗ್ರಾಮಸ್ಥರ ಆರೋಗ್ಯವನ್ನೇ ಮರೆತ ಜನಪ್ರತಿನಿಧಿಗಳು, ಅಧಿಕಾರಿಗಳು

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ಕೊರೊನಾ ಎರಡನೇ ಅಲೆಯ ಸೋಂಕಿನಿಂದ ಬಳಲಿ ಹೈರಾಣಾಗುತ್ತಿರುವ ತಾಲೂಕಿನ ಕೊಡಗಹಳ್ಳಿ ಗ್ರಾಮವನ್ನು ಜಿಲ್ಲಾ ಹಾಗೂ ತಾಲೂಕು ಆಡಳಿತ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ. ಆರೇಳು ಮಂದಿ ಕೊರೊನಾ ಸೋಂಕಿತರ ಸಾವಿನಿಂದ ಕಂಗೆಟ್ಟಿರುವ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಸೋಂಕಿನಿಂದ ಬಳಲುತ್ತಿರುವ ಗ್ರಾಮಸ್ಥರ ಆರೋಗ್ಯವನ್ನು ಕಾಪಾಡುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮರೆತು ಬಿಟ್ಟಿದ್ದಾರೆ.

ತಾಲೂಕಿನ ಗಡಿ ಭಾಗದಲ್ಲಿರುವ ಬನ್ನೂರು ಹೋಬಳಿಯ ಕೊಡಗಹಳ್ಳಿ ಗ್ರಾಮ ಕಾಶಿಯಾತ್ರೆಯ ಲಿಂಕ್ ನಿಂದಾಗಿ ಕೋವಿಡ್ ಎರಡನೇ ಅಲೆ ಸಿಲುಕಿ ತತ್ತರಿಸಿ ಹೋಗಿದೆ. ಗ್ರಾಮವೊಂದರಲ್ಲಿಯೇ ಸೊಂಕಿತರ ಸಂಖ್ಯೆ 100ರ ಗಡಿಯನ್ನು ದಾಟಿದೆ. ಇದುವರೆವಿಗೂ ಆರು ಮಂದಿ ಸಾವನ್ನಪ್ಪಿದ್ದು, 10 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿದ್ದಾರೆ.

ಬಹುತೇಕ ಕುಟುಂಬಗಳಲ್ಲಿ 1 ರಿಂದ 3 ಮಂದಿ ಸೋಂಕಿನಿಂದ ಬಳಲುತ್ತಿರುವ ಪರಿಣಾಮ ಗ್ರಾಮದಲ್ಲಿ ಸಾವಿನ ಭಯದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರು ಹಾಗೂ ಗ್ರಾಪಂ ಪ್ರತಿನಿಧಿಗಳು ಹಲವು ಭಾರಿ ಜಿಲ್ಲಾಡಳಿತಕ್ಕೆ ನೆರವಿಗೆ ಧಾವಿಸುವಂತೆ ಮನವಿ ಮಾಡಿಕೊಂಡಿದ್ದರೂ ಜಿಲ್ಲಾಡಳಿತವಾಗಲಿ ಅಥವಾ ತಾಲೂಕು ಆಡಳಿತವಾಗಲಿ ಸಾವಿನ ದವಡೆಯಲ್ಲಿರುವ ಜನರ ಕೂಗಿಗೆ ಕಿವಿಗೊಟ್ಟಿಲ್ಲ. ಜೀವ ಭಯಕ್ಕೆ ಬೆದರಿರುವ ಅಧಿಕಾರಿಗಳು ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಕೊಡಗಹಳ್ಳಿ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಅರವಟ್ಟಿಗೆಕೊಪ್ಪಲು ಗ್ರಾಮದಲ್ಲಿ 13 ಸೊಂಕಿತರ ಸಕ್ರಿಯ ಪ್ರಕರಣದಲ್ಲಿ ಓರ್ವ ಸಾವನ್ನಪ್ಪಿದ್ದರೆ, ಮಾದಿಗಹಳ್ಳಿ 3 ಸೊಂಕಿತರಿದ್ದಾರೆ. ಕೊಡಗಹಳ್ಳಿ ಗ್ರಾಮದಲ್ಲಿ ಕೊರೊನಾ ಭೀತಿಗೆ ಹೆದರಿ ಕಂಟೋನ್ಮೆಂಟ್ ಜೋನ್ ಹಾಸುಪಾಸಿನ ನಿವಾಸಿಗಳು ಜೀವ ಭಯದಿಂದ ಮನೆಗಳಿಗೆ ಬೀಗ ಜಡಿದು ಊರನ್ನೇ ತೊರೆದಿದ್ದಾರೆ.

ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿದ್ದ ಮೂವರು ಆಶಾ ಕಾರ್ಯಕರ್ತೆಯರಲ್ಲಿ ಒಬ್ಬರು ಅನಾರೋಗ್ಯಕ್ಕೆ ತುತ್ತಾಗಿ ವಿಶ್ರಾಂತಿಯಲ್ಲಿದ್ದಾರೆ. ಪರಿಸ್ಥಿತಿ ಇಷ್ಟೊಂದು ಪ್ರಮಾಣದಲ್ಲಿ ಭೀಕರವಾಗುತ್ತಿದ್ದರೂ ಶಾಸಕರು ಸೇರಿದಂತೆ ಯಾವೊಬ್ಬ ಅಧಿಕಾರಿಯೂ ಬಾರದಿರುವುದು ಗ್ರಾಮಸ್ಥರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲಾಡಳಿತ, ತಾಲೂಕು ಆಡಳಿತದಿಂದ ಯಾವುದೇ ಸ್ಪಂದನೆಯಾಗಲಿ ಅಥವಾ ನೆರವಾಗಲಿ ಸಿಗದಿದ್ದರೂ ಗ್ರಾಮ ಪಂಚಾಯಿತಿ ವತಿಯಿಂದ ಸಾಧ್ಯವಾದಷ್ಟು ಕ್ವಾರಂಟೈನ್ ಆಗಿರುವ ಸೋಂಕಿತರಿಗೆ ನೀಡಲಾಗಿದೆ.  ಪಂಚಾಯಿತಿಗೆ ನಿಯೋಜನೆಗೊಂಡಿರುವ ನೊಡೆಲ್ ಅಧಿಕಾರಿ ಯಾರೆಂಬುದು ಇದುವರೆಗೂ ಮಾಹಿತಿ ಇಲ್ಲ.

ತಾಲೂಕು ಮಟ್ಟದಲ್ಲಿ ಸಭೆ ನಡೆಸುವ ಶಾಸಕರು ನೀಡುವ ಭರವಸೆ ಕಾರ್ಯ ರೂಪಕ್ಕೆ ಇನ್ನೂ ಬಂದಿಲ್ಲ. ಮಕ್ಕಳಿಲ್ಲದ ವೃದ್ಧರೊಬ್ಬರು ಕೊರೊನಾದಿಂದ ಸಾವನ್ನಪ್ಪಿ ದಿನವಾದರೂ ಆತನ ಮೃತ ದೇಹವನ್ನು ವಿಲೇವಾರಿ ಮಾಡಲಿಕ್ಕೆ ತಹಸೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯನ್ನು ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಪರಿಪರಿಯಾಗಿ ಪಿಡಿಸಬೇಕಾಯಿತು. ಆರೋಗ್ಯ ಇಲಾಖೆ ಅಧಿಕಾರಿಗಳು ಆಶಾ ಕಾರ್ಯಕರ್ತೆಯರಿಗೆ ಜವಾಬ್ದಾರಿ ಹೊರಿಸಿ ತಮ್ಮ ಹೊಣೆಗಾರಿಯಿಂದ ನುಣುಚಿಕೊಂಡಿದ್ದಾರೆ.

ಊರು ಹೆಸರೇಳಿದರೆ ಬರ್ಬೇಡಿ ಅಂತಾರೆ
ತಾಲೂಕಿನಲ್ಲಿ ಕೊಡಗಹಳ್ಳಿ ಗ್ರಾಮ ಕೊರೊನಾ ಎರಡನೇ ಅಲೆಯ ಹಾಟ್ ಸ್ಪಾಟ್ ಆಗಿರೋದರಿಂದ ಬನ್ನೂರು ಟೌನ್ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗ್ರಾಮದ ಹೆಸರೇಳಿದರೆ ಇಲ್ಲಿಗೆ ಬರಬೇಡಿ ಅಂತ ಹೇಳುವ ಪರಿಪಾಠ ರೂಢಿಯಾಗಿರುವುದರಿಂದ ನಾವೆಲ್ಲರೂ ಮಾನಸಿಕವಾಗಿ ಖಿನ್ನತೆಗೊಳಗಾಗಿ ಯಾತನೆ ಅನುಭವಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಅಳಲನ್ನು ವ್ಯಕ್ತಪಡಿಸುತ್ತಾರೆ.

ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಶುದ್ಧ ಕುಡಿಯುವ ನೀರನ್ನೂ ಪಡೆಯಲಿಕ್ಕೆ ಅಕ್ಕಪಕ್ಕದ ಊರಿನವರು ಹಿಂದೇಟು ಹಾಕುತ್ತಿದ್ದಾರೆ. ಹಾಲು ಹಣ್ಣು ಹಾಗೂ ತರಕಾರಿ ವ್ಯಾಪಾರಕ್ಕೆ ಯಾವೊಬ್ಬ ವ್ಯಕ್ತಿಯೂ ಊರಿಗೆ ಬಾರದ್ದರಿಂದ ಅಗತ್ಯ ವಸ್ತುಗಳಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ನಗರ-ಪಟ್ಟಣಕ್ಕಷ್ಟೇ ಡಿಸಿ, ತಹಸೀಲ್ದಾರ್ ಸಿಮಿತ

ಜಿಲ್ಲೆಯೆಂದರೆ ಮೈಸೂರು, ತಾಲೂಕು ಅಂದರೆ ನರಸೀಪುರ ಎಂದು ನಗರ ಮತ್ತು ಪಟ್ಟಣಕ್ಕೆ ಜಿಲ್ಲಾಧಿಕಾರಿ, ತಹಸೀಲ್ದಾರ್ ಸೀಮಿತ ಆಗಿರೋದ್ರಿಂದ ನಮ್ಮೂರಿನ ಕಷ್ಟವನ್ನು ಬಗೆಹರಿಸುವುದಿರಲಿ, ಕೇಳುವವರೇ ಇಲ್ಲದಂತಾಗಿದೆ. ಕೊರೊನಾದಿಂದ ಜನ ಸಾಯ್ತಾ ಇಂದ್ರೂ ಕೇಳೋರ ಕಿವಿಗಳು ಕಿವುಡಾಗಿವೆ.
l ಕೆ.ಎಸ್.ಧನಂಜಯಗೌಡ, ಅಧ್ಯಕ್ಷ, ಕೊಡಗಹಳ್ಳಿ ಗ್ರಾಮ ಪಂಚಾಯಿತಿ

 

‘ತಾಲೂಕೇ ನಮಗೆ ಬೇಡ, ಬಹಿಷ್ಕರಿಬಿಡೋಣ

ಕೊರೊನಾ ಸೋಂಕಿಗೆ ಸಿಲುಕಿ ಜೀವ ಮತ್ತು ಜೀವನ ಕಳೆದುಕೊಳ್ಳುತ್ತಿರುವ ಸಂಕಷ್ಟದ ಲ್ಲಿರುವಾಗ ಜನಪ್ರತಿನಿಧಿಗಳು ಮತ್ತು ತಾಲೂಕು ಆಡಳಿತ ನಮ್ಮ ನೆರವಿಗೆ ಧಾವಿಸಿ ಪಾರುಮಾಡದಿದ್ದ ಮೇಲೆ ತಾಲೂಕು ಮತ್ತು ಅಧಿಕಾರಿಗಳ ಅಗತ್ಯವಾದರೂ ಏನಿದೆ. ನಿರ್ಲಕ್ಷ್ಯ ಹೀಗೆ ಮುಂದುವರಿದರೆ ತಾಲೂಕನ್ನ ಬಹಿಷ್ಕರಿಸುತ್ತೇವೆ.
l ಎಂ.ಎಂ.ರಮೇಶ್, ಗ್ರಾಪಂ ಸದಸ್ಯ

 

ಶಾಸಕರು ಬರೀ ಭರವಸೆ ಕೊಟ್ಟರೆ ಸಾಲದು

ಕೊಡಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊroನಾ ಸೋಂಕಿನ ನಿಯಂತ್ರಣ ಹಾಗೂ ನಿವಾರಣೆ ಬಗ್ಗೆ ಬರೀ ಭರವಸೆ ನೀಡುತ್ತಿರುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಬದುಕಿನ ಬಗ್ಗೆ ಭರವಸೆ ಕಳೆದುಕೊಂಡಿರುವ ಸೋಂಕಿತರ ಜೀವ ಉಳಿಸುವ ಕಡೆ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು.
l ಪಾಪಣ್ಣ, ಗ್ರಾಪಂ ಸದಸ್ಯ

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು