ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬ್ಲಾಕ್ನಲ್ಲಿ ರೆಮ್‌ಡಿಸಿವರ್ ಮಾರಾಟ ಮಾಡುತ್ತಿದ್ದ ವೈದ್ಯ ಮತ್ತು ಐವರು ನರ್ಸ್ಗಳನ್ನು ಬೆಂಗಳೂರು ಅಪರಾಧ ವಿಭಾಗದ ( ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಆಯುರ್ವೇದಿಕ್ ವೈದ್ಯರಿಗೆ ಸಾಥ್ ನೀಡಿದ್ದ ಐವರು ನರ್ಸ್‌ಗಳು ಈಗ ಪೊಲೀಸರ ಅತಿಥಿಯಾಗಿದ್ದು ಕಂಬಿ ಎಣಿಸುತ್ತಿದ್ದಾರೆ. ಯಲಹಂಕ ಬಳಿ ರೆಮ್‌ಡಿಸಿವರ್ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಃಇತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಡಾಕ್ಟರ್ಸ್ ಮತ್ತು ನರ್ಸ್ಗಳನ್ನು ಬಂಧಿಸಿದ್ದಾರೆ.
ದಾಳಿ ವೇಳೆ 18 ರೆಮ್‌ಡಿಸಿವರ್ ಲಸಿಕೆಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.
15,000ಕ್ಕೆ 1 ರೆಮ್‌ಡಿಸಿವರ್ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ಆರೋಪಿಗಳು ಅದಕ್ಕಾಗಿ ರೋಗಿಗಳ ಕುಟುಂಬದವರ ಜತೆ ಚೌಕಾಶಿ ಮಾಡುತ್ತಿದ್ದರು. ವಾರದಿಂದ ರೆಮ್‌ಡಿಸಿವರ್ ಕಾಳಸಂತೆ ಮಾರಾಟದ ಮೇಲೆ ಸಿಸಿಬಿ ಕಣ್ಣು ಇಟ್ಟಿದ್ದು ಕೊನೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಳೆದ ಒಂದು ವಾರದಲ್ಲಿ 80ಕ್ಕೂ ಹೆಚ್ಚು ರೆಮ್‌ಡಿಸಿವರ್ ಇಂಜೆಕ್ಷನ್ಗಳನ್ನು ಸಿಸಿಬಿ ವಶಪಡಿಸಿಕೊಂಡಿದೆ. ಈವರೆಗೆ ನಡೆಸಿರುವ ದಾಳಿಯಲ್ಲಿ 40 ಆರೋಪಿಗಳನ್ನು ಬಂಧಿಸಿದ್ದು, ರೆಮ್‌ಡಿಸಿವರ್ ಅಕ್ರಮ ಮಾರಾಟ ಕಂಡು ಬಂದಲ್ಲಿ ಕಂಟ್ರೋಲ್ ರೂಂಗೆ ದೂರು ನೀಡಿ ಎಂದು ಸಾರ್ವಜನಿಕರಲ್ಲಿ ಸಂದೀಪ್ ಪಾಟೀಲ್ ಮನವಿ ಮಾಡಿದ್ದಾರೆ.