ವಿಜಯಪಥ ಸಮಗ್ರ ಸುದ್ದಿ
ತುಮಕೂರು: ಕೊರೊನಾ ಪರಿಶೀಲನೆ ನೆಪದಲ್ಲಿ ತುಮಕೂರಿಗೆ ಶುಕ್ರವಾರ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿದ್ದಗಂಗಾ ಮಠಕ್ಕೆ ತೆರಳಿ ಅಧ್ಯಕ್ಷರಾದ ಸಿದ್ದಗಂಗಾ ಶ್ರೀಗಳ ಜತೆ ಅರ್ಧಗಂಟೆಗೂ ಹೆಚ್ಚು ಕಾಲ ಗೌಪ್ಯವಾಗಿ ಚರ್ಚೆ ನಡೆಸಿದ್ದಾರೆ.
ಪಕ್ಷದೊಳಗೆ ಬಂಡಾಯದ ಹೊಗೆಯಾಡುತ್ತಿರುವ ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಈ ಭೇಟಿ ಈಗ ರಾಜಕೀಯ ವಲಯದಲ್ಲಿ ಭಾರಿ ಮಹತ್ವ ಪಡೆದುಕೊಂಡಿದೆ.
ಶ್ರೀಮಠದ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದ ಬಳಿಕ ಡಿಸಿಎಂ ಅಶ್ವಥ್ ನಾರಾಯಣ ಅವರ ಜತೆ ಮಠಕ್ಕೆ ನೇರವಾಗಿ ತೆರಳಿದ ಬಿಎಸ್‌ವೈ ಶ್ರೀಗಳ ಜತೆ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಯಾರೊಬ್ಬರಿಗೂ ಶ್ರೀಮಠಕ್ಕೆ ಪ್ರವೇಶವಿರಲಿಲ್ಲ. ಅಷ್ಟ ಅಲ್ಲ ಜಿಲ್ಲೆಯ ಯಾವೊಬ್ಬ ಪ್ರತಿನಿಧಿಯೂ ಇರಲಿಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ಕಳೆದ ಮೂರು ದಿನಗಳಿಂದ ಆಡಳಿತರೂಢ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದ್ದು, ಭಾರಿ ಸಂಚಲನವನ್ನೇ ಸೃಷ್ಟಿಸಿದೆ.
ಈ ವಿಚಾರದ ಬೆನ್ನಹಿಂದೆಯೇ ಬಿಎಸ್ವೈ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಹಿಂದೆ ಹಲವು ಬಾರಿ ಪ್ರಮುಖ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಮುನ್ನ ಬಿಎಸ್ವೈ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿರುವುದು ಇತಿಹಾಸ ಪುಟಗಳನ್ನು ತಿರುವಿಹಾಕಿದರೆ ಗೊತ್ತಾಗುತ್ತದೆ. ಹೀಗಾಗಿ ಇಂದಿನ ಭೇಟಿ ಇನ್ನಷ್ಟ ಕೂತುಹಲಕಾರಿಯಾಗಿದೆ.