ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಸೋಮವಾರ ಮಹತ್ವದ ಮೈಲಿಗಲ್ಲು ನಿರ್ಮಿಸಿದೆ. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ತಂತ್ರಜ್ಞಾನದ ಸದುಪಯೋಗ ಪಡಿಸಿಕೊಂಡು ಪ್ರಾಯೋಗಿಕವಾಗಿ ವಿಚಾರಣೆಯನ್ನು ನೇರ ಪ್ರಸಾರ ಮಾಡುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ.
ಈ ಮೂಲಕ ದೇಶದಲ್ಲಿ ಗುಜರಾತ್ ಹೈಕೋರ್ಟ್ ಬಳಿಕ ವಿಚಾರಣೆಯನ್ನು ಲೈವ್ ಸ್ಟ್ರೀಮಿಂಗ್ ಮಾಡಿದ ಎರಡನೇ ಉಚ್ಚ ನ್ಯಾಯಾಲಯವಾಗಿ ಕರ್ನಾಟಕ ಹೈಕೋರ್ಟ್ ಗುರುತಿಸಿಕೊಳ್ಳಲಿದೆ. ಕರ್ನಾಟಕದ ಹೈಕೋರ್ಟ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಇಂದು (ಮೇ 31, 2021) ಮಧ್ಯಾಹ್ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ನಡೆಸಿದ ವಿಚಾರಣೆಯನ್ನು ಪ್ರಾಯೋಗಿಕ ಲೈವ್ ಸ್ಟ್ರೀಮಿಂಗ್ ಮಾಡಲಾಯಿತು.
ನೇರ ಪ್ರಸಾರದ ಸಾಧಕ ಬಾಧಕಗಳನ್ನು ನೋಡಿಕೊಂಡು, ಪ್ರತಿಕ್ರಿಯೆಗೆ ಅನುಗುಣವಾಗಿ ಈ ಪ್ರಯೋಗ ಯಶಸ್ವಿಯಾದರೆ ಇನ್ಮುಂದೆ ಹೈಕೋರ್ಟ್ ವಿಚಾರಣೆಗಳನ್ನು ಲೈವ್ ನೋಡಬಹುದಾಗಿದೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಬೈತಕೊಲ್ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ ಮತ್ತು ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘ ಸಲ್ಲಿಸಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಇಂದು ಲೈವ್ ಪ್ರಸಾರವಾಗಿದೆ.
ಬೈತಕೊಲ್ ವಾಣಿಜ್ಯ ಬಂದರು ಎರಡನೇ ಹಂತದ ಪ್ರಸ್ತಾವಿತ ಅಭಿವೃದ್ಧಿ ಯೋಜನೆಗೆ ಅನುಮೋದನೆ ಸಿಕ್ಕರೆ ಸುತ್ತಮುತ್ತಲಿನ ಪರಿಸರ ಹಾನಿಯಾಗುವುದಲ್ಲದೆ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ಉಲ್ಲಂಘನೆಯಾಗಿದೆ ಎಂದು ಪಿಐಎಲ್ ಸಲ್ಲಿಸಲಾಗಿತ್ತು.
ವಿಚಾರಣೆಯನ್ನು ಕೈಗೆತ್ತಿಕೊಂಡ ವಿಭಾಗೀಯ ಪೀಠ, “ಎರಡು ಅರ್ಜಿಗಳ ನೇರ ವಿಚಾರಣೆ ನಡೆಸಿದೆ. ಪ್ರಾಯೋಗಿಕವಾಗಿ ಇದನ್ನು ಕೈಗೆತ್ತಿಕೊಂಡಿದ್ದೇವೆ. ಇದನ್ನು ವಕೀಲ ಸಮುದಾಯದ ಗಮನಕ್ಕೆ ತರುವುದು ನಮ್ಮ ಕರ್ತವ್ಯ.” ಎಂದು ತಿಳಿಸಿದ್ದು ಉಲ್ಲೇಖಾರ್ಹ. ಈ ವಿಚಾರಣೆಯ ಪೂರ್ಣ ವಿಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿದೆ.. ಆಸಕ್ತರು ಈ ಮೊಟ್ಟ ಮೊದಲ ನೇರ ಪ್ರಸಾರವನ್ನು ವೀಕ್ಷಿಸಬಹುದು.