ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜಧಾನಿಯ ಚಾಮಪರಾಜಪೇಟೆ ಬಿಬಿಎಂಪಿ ಆಸ್ಪತ್ರೆಯಲ್ಲಿ ನಡೆದಿದ್ದ ನವಜಾತ ಶಿಶು ಅಪಹರಣ ಪ್ರಕರಣ ಭೇದಿಸುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ವೈದ್ಯೆಯನ್ನು ಬಂಧಿಸಿದ್ದಾರೆ.
ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಮನೋವೈದ್ಯೆ ಡಾ.ರಶ್ಮಿ (34) ಬಂಧಿತ ಆರೋಪಿ. ವಿಚಾರಣೆ ವೇಳೆ ನವಜಾತ ಶಿಶು ಅಪಹರಿಸಿದ್ದ ವೈದ್ಯೆ, ಮಗುವನ್ನು 15 ಲಕ್ಷ ರೂ.ಗಳಿಗೆ ಕೊಪ್ಪಳದ ದಂಪತಿಗೆ ಮಾರಾಟ ಮಾಡಿದ್ದರು ಎಂದು ತಿಳಿದುಬಂದಿದೆ.
ಇದೀಗ ಆರೋಪಿ ವೈದ್ಯೆಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಮಾರಾಟ ಮಾಡಲಾಗಿದ್ದ ಮಗುವನ್ನು ರಕ್ಷಣೆ ಮಾಡಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಹೇಳಿದ್ದಾರೆ.
ಮಗುವನ್ನು ಖರೀದಿಸಿದ್ದ ಕೊಪ್ಪಳ ಮೂಲದ ದಂಪತಿಗೆ ಬುದ್ದಮಾಂದ್ಯ ಮಗುವಿತ್ತು. ಅದರ ಚಿಕಿತ್ಸೆಗೆ ಅವರು 2014ರಲ್ಲಿ ಹುಬ್ಬಳ್ಳಿಯ ಸುತ್ತೂರಿನಲ್ಲಿರುವ ಆಸ್ಪತ್ರೆಗೆ ತೆರಳಿದ್ದಾಗ, ಅಲ್ಲಿ ಅವರಿಗೆ ಡಾ.ರಶ್ಮಿ ಪರಿಚಯವಾಗಿತ್ತು. ಹೀಗೆ ಒಡನಾಟ ಬೆಳೆದ ಬಳಿಕ ರಶ್ಮಿ, ದಂಪತಿಗೆ ನೀವು ಭಯಪಡುವ ಅಗತ್ಯವಿಲ್ಲ. ಮತ್ತೊಂದು ಮಗು ನೀವು ಪಡೆಯಬಹುದು. ವೀರ್ಯಾಣು ಮತ್ತು ಅಂಡಾಣು ತೆಗೆದುಕೊಂಡು ಬಾಡಿಗೆ ತಾಯಿ ಹೊಟ್ಟೆಯಲ್ಲಿ ನಿಮ್ಮದೇ ಮಗು ಬೆಳಸಬಹುದು. ಅದಕ್ಕಾಗಿ 15 ಲಕ್ಷ ರೂ. ಖರ್ಚಾಗುತ್ತದೆ. ಮಗು ಜನಿಸಿದ ಬಳಿಕ ನಿಮಗೆ ತಂದುಕೊಡುತ್ತೇನೆಂದು ತಿಳಿಸಿದ್ದರು.
ಈ ಮಾತು ನಂಬಿದ್ದ ದಂಪತಿ, ವೈದ್ಯಗೆ ಹಣ ಕೊಡಲು ಸಮ್ಮತಿಸಿದ್ದಾರೆ. ಬಳಿಕ ಬಾಡಿಗೆ ತಾಯಿ ಹೊಟ್ಟೆಯಲ್ಲಿ ಮಗು ಗರ್ಭದರಿಸಿದೆ ಎಂದು ಆ ಪೋಷಕರಿಗೆ ವೈದ್ಯೆ ಸುಳ್ಳು ಹೇಳಿದ್ದಳು. ಹೀಗಿರುವಾಗ ಹುಬ್ಬಳ್ಳಿಯ ಆಸ್ಪತ್ರೆ ಕೆಲಸಕ್ಕೆ ರಾಜೀನಾಮೆ ನೀಡಿದ್ದ ರಶ್ಮಿ, ಬೆಂಗಳೂರಿನ ಖಾಸಗಿ ಆಸ್ಪತ್ರೆ ಸೇರಿದ್ದರು.
ಆಗ ಅದೇ ಸಮಯದಲ್ಲಿಯೇ ಚಾಮರಾಜಪೇಟೆ ಬಿಬಿಎಂಪಿ ಆಸ್ಪತ್ರೆಯಲ್ಲಿ ಹುಸ್ನಾ ಬಾನು ಎಂಬುವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಸ್ಪತ್ರೆಗೆ ವೈದ್ಯೆಯಂತೆ ಬಂದಿದ್ದ ರಶ್ಮೀ ಮಗುವನ್ನು ಅಪಹರಿಸಿಕೊಂಡು ಹೋಗಿ ದಂಪತಿಗೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ 15 ಲಕ್ಷ ರೂ. ಪಡೆದಿದ್ದರು ಎನ್ನಲಾಗಿದೆ.
ಇತ್ತ ಮಗು ಕಳವಾದ ಹಿನ್ನೆಲೆಯಲ್ಲಿ ಮಗುವಿಗಾಗಿ ಕುಟುಂಬಸ್ಥರು ಆಸ್ಪತ್ರೆಯಲ್ಲಿ ತೀವ್ರವಾಗಿ ಹುಡುಕಾಡಿದ್ದಾರೆ. ಬಳಿಕ ಹತಾಶರಾಗಿ ಚಾಮರಾಜಪೇಟೆ ಠಾಣೆಗೆ ದೂರು ನೀಡಿದ್ದಾರೆ.
ವರ್ಷವಾದರೂ ಮಗು ಪತ್ತೆಯಾಗದ ಹಿನ್ನೆಲೆಯಲ್ಲಿ ಬೇಸರಗೊಂಡು ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಶೀಘ್ರವೇ ಮಗು ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚಿಸಿತ್ತು.
ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ್ದ ಪೊಲೀಸರು, ಘಟನಾ ಸ್ಥಳದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಸತತ ಪರಿಶೀಲನೆ ಹಾಗೂ ಒಂದು ಸಾವಿರಕ್ಕೂ ಹೆಚ್ಚು ದೂರುವಾಣಿ ಕರೆಗಳ ವಿವರ ಕಲೆಹಾಕಿ, ಅನುಮಾನ ಬಂದವರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ಕಾರ್ಯಾಚರಣೆ ಅಂತಿಮವಾಗಿ ಫಲ ನೀಡಿ, ಅವರನ್ನು ವೈದ್ಯೆಯ ಬಳಿ ಕರೆದೊಯ್ದಿದೆ.
ವಿಚಾರಣೆ ವೇಳೆ ವೈದ್ಯೆ ತಪ್ಪೊಪ್ಪಿಕೊಂಡಿದ್ದು, ಸಾಲ ಮರುಪಾವತಿ ಮಾಡುವ ಸಲುವಾಗಿ ಅಪರಾಧ ಎಸಗಿರುವುದಾಗಿ ವೈದ್ಯೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.