ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಎಲ್‌ಪಿಜಿ ಸಬ್ಸಿಡಿಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದ್ದು, ಕೇಂದ್ರ ಸರ್ಕಾರವು ಇದರಲ್ಲಿ ಶಾಮೀಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು 2020ತ ಮೇ ತಿಂಗಳಿಂದ ಗ್ರಾಹಕರಿಗೆ ಎಲ್‌ಪಿಜಿ ಸಬ್ಸಿಡಿ ಸಿಕ್ಕಿಲ್ಲ. ಸರ್ಕಾರವು ಲಾಕ್‌ಡೌನ್ ನಡುವೆಯೂ ಸಬ್ಸಿಡಿಯನ್ನು ನೀಡದೆ ಗ್ರಾಹಕರನ್ನು ವಂಚಿಸಿದೆ ಎಂದು ಅವರು ಆರೋಪಿಸಿದ್ದು ಈ ಸಂಬಂಧ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪರೇಷನ್ ಲಿಮಿಟೆಡ್ ನೀಡಿರುವ ಪ್ರತಿಕ್ರಿಯೆಯನ್ನೂ ಹಂಚಿಕೊಂಡಿದ್ದಾರೆ.
ಯುಪಿಎ ಸರ್ಕಾರವು ಗ್ರಾಹಕರ ಖಾತೆಗೆ ನೇರವಾಗಿ ಸಬ್ಸಿಡಿ ಹೋಗುವ ಯೋಜನೆಯನ್ನು ಜಾರಿಗೆ ತಂದಿತ್ತು. ನಂತರ ಬಂದ ಮೋದಿ ಸರ್ಕಾರವು ಸಬ್ಸಿಡಿ ಯೋಜನೆ ಮುಂದುವರಿಸುವುದಾಗಿ ಹೇಳಿತ್ತು. ಆದರೆ, ಕಳೆದ ಒಂದು ವರ್ಷದಿಂದ ಕೇಂದ್ರ ಸರ್ಕಾರವು ಈ ವಿಷಯದ ಬಗ್ಗೆ ತುಟಿಕ್ ಪಿಟಿಕ್ ಎಂದಿಲ್ಲ.
ಕಳೆದ ಒಂದು ವರ್ಷದಿಂದ ಏಳು ಸಾರಿ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಸಿಲಿಂಡರ್ ಬೆಲೆ 594 ರೂಪಾಯಿ ಇದ್ದಾಗಲೂ ಸಬ್ಸಿಡಿ ನೀಡುತ್ತಿದ್ದ ಕೇಂದ್ರವು ಈಗ ಹತ್ತತ್ತಿರ ಸಾವಿರ ರೂಪಾಯಿ ತಲುಪಿದರೂ ಸಬ್ಸಿಡಿ ನೀಡುತ್ತಿಲ್ಲ.
ಉಜ್ವಲ್ ಯೋಜನೆಯಡಿ ಸಿಲಿಂಡರ್ ನೀಡಿದ್ದ ಕೇಂದ್ರವು ಈಗ ಅದರ ಫಲಾನುಭವಿಗಳು ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರೂ ಅದರ ಬಗ್ಗೆ ಜಾಣ ಮೌನವಹಿಸಿದೆ ಎಂದು ಆರೋಪಿಸಿದ್ದಾರೆ.