ಕೊಪ್ಪಳ: ಇಂದಿರಾ ಕ್ಯಾಂಟೀನ್‌ಗಳಲ್ಲಿ ಈಗ ನೀಡುತ್ತಿರುವ ಉಚಿತ ಆಹಾರವನ್ನು ಮುಂದಿನ ಆರು ತಿಂಗಳವರೆಗೆ ಮುಂದುವರಿಸಿಕೊಂಡು ಹೋಗಬೇಕು ಮತ್ತು ಹೆಚ್ಚಿನ ಬೇಡಿಕೆಯಿರುವ ಕಡೆ ಹೆಚ್ಚುವರಿ ಸಂಚಾರಿ ಇಂದಿರಾ ಕ್ಯಾಂಟೀನ್ ಮೂಲಕ ಆಹಾರ ಪೂರೈಕೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಂಯ್ಯ ಒತ್ತಾಯಿಸಿದ್ದಾರೆ.
ಸೋಮವಾರ ಕೊಪ್ಪಳದ ಇಂದಿರಾ ಕ್ಯಾಂಟೀನ್ ಗೆ ಭೇಟಿನೀಡಿದೆ ವೇಳೆ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಾರ್ಡಿಗೊಂದರಂತೆ 198 ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳು ಸೇರಿದಂತೆ ಒಟ್ಟು 461 ಇಂದಿರಾ ಕ್ಯಾಂಟೀನ್ ಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿತ್ತು. ಈಗ ಅದು ಜನರ ಹಸುನೀಗಿಸಲು ಸಮರ್ಪಕವಾಗಿ ಸೇವೆ ಒದಗಿಸಬೇಕು ಎಂದರು.
ಈಗ ಲಾಕ್ ಡೌನ್ ತೆರವಾಗಿರುವ ಕಾರಣ ರಾಜ್ಯ ಸರ್ಕಾರ ಹಿಂದಿನಂತೆ ಕ್ಯಾಂಟೀನ್ ನಿರ್ವಹಣೆಗೆ ಅನುದಾನ ನೀಡದೆ, ಬೀಗ ಹಾಕಬೇಕಾದ ಸ್ಥಿತಿಗೆ ತಳ್ಳಲಿದೆ. ಈ ಬಗ್ಗೆ ಜನ ಜಾಗೃತರಾಗಬೇಕು. ಇಂಥದ್ದೊಂದು ಜನಪರವಾದ ಯೋಜನೆ ನಿಲ್ಲದಂತೆ ಜನರೇ ಸರ್ಕಾರದ ಕಿವಿಹಿಂಡುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕಳೆದೆರಡು ತಿಂಗಳುಗಳ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಬಡಜನರ ಹಸಿವು ನೀಗಿಸಲು ನೆರವಾದದ್ದು ನಮ್ಮ ಸರ್ಕಾರದ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆ. ಲಾಕ್ ಡೌನ್ ಇರುವ ಕಾರಣ ಸರ್ಕಾರ ಇಂದಿರಾ ಕ್ಯಾಂಟೀನ್ ಗಳಲ್ಲಿ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡುತ್ತಿತ್ತು.
ಆದರೆ ಈಗಿನ ಸರ್ಕಾರ ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಈ ಕ್ಯಾಂಟೀನ್ ಗಳಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರು ಇಡಲಾಗಿದೆ ಎಂಬ ಏಕೈಕ ಕಾರಣಕ್ಕೆ ಅನುದಾನ ಬಿಡುಗಡೆ ಮಾಡದೆ, ಮುಚ್ಚಲು ಹೊರಟಿತ್ತು ಎಂದು ಹೇಳಿದರು.