ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗಿ ಆಗುತ್ತಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯದ ಎಲ್ಲಾ224 ವಿಧಾನಸಭಾ ಕ್ಷೇತ್ರಗಳ ಪೆಟ್ರೋಲ್ ಬಂಕ್ ಗಳ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಚಿಕ್ಕಪೇಟೆ, ಉಲ್ಲಾಳದ ಪೆಟ್ರೋಲ್ ಬಂಕ್ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರದ ಪೆಟ್ರೋಲ್ ಬಂಕ್‌ಗಳು ಸೇರಿದಂತೆ ರಾಜ್ಯಾದ್ಯಂತ ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆ ವಿರುದ್ಧ ಘೋಷಣೆ ಕೂಗಿದರು.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೆ ಏರಿದ್ದು ಈಗಾಗಲೇ ಆರ್ಥಿಕವಾಗಿ ಕಂಗಾಲಾಗಿರುವ ದೇಶದ ಜನತೆಯ ಮೇಲೆ ಕೇಂದ್ರ ಸರ್ಕಾರ ಬರೆ ಹಾಕುತ್ತಿದೆ. ಇದರಿಂದ ನಿತ್ಯ ಜನಸಾಮಾನ್ಯರು ಬಳಸುವ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಗಗನಕ್ಕೇರಿಸಿರುವ ಸರ್ಕಾರ, ಬೆಲೆ ನಿಯಂತ್ರಣಕ್ಕೆ ತರುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ಮಾಧ್ಯಮ ಸಂಚಾಲಕಿ ಉಷಾ ಮೋಹನ್ ಮಾತನಾಡಿ, ಕೂಡಲೇ ಪೆಟ್ರೋಲ್ ದರ ಇಳಿಸಬೇಕು ಪೆಟ್ರೋಲ್ ದರ ಏರಿಕೆಯಿಂದಾಗಿ ಸಾರ್ವಜನಿಕರು ಹಲವು ಸಮಸ್ಯೆಗೆ ಸಿಲಿಕಿದ್ದಾರೆ. ಭಾರತದಲ್ಲಿ ಇಂಧನ ದರ 100ರ ಗಡಿ ದಾಟಿದೆ. ಹೀಗಾಗಿ ಇಂಧನ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಹಣದುಬ್ಬರ ವಿರುದ್ಧ ಎಎಪಿ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದೆ. ಮುಂದಿನ ದಿನಗಳಲ್ಲಿಯೂ ಬೆಲೆ ಏರಿಕೆ ಮಾಡುತ್ತಿದ್ದರೆ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಇಂದು ಪೆಟ್ರೋಲ್ ಬೆಲೆ 100 ರೂ. ಗಡಿದಾಟಿದೆ. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚ ಇಂಧನ ದರ ಕಡಿಮೆ ಇದ್ದು, ನಮಗೆ ಕೇವಲ 40-50 ರೂ.ಗಳಲ್ಲೇ ಪೆಟ್ರೋಲ್ ಮಾರಾಟ ಮಾಡಬೇಕು ಅದನ್ನು ಬಿಟ್ಟು ಕೇಂದ್ರ ಸರ್ಕಾರ 101 ರೂ. ಸುಲಿಗೆ ಮಾಡುವ ಮೂಲಕ ಜನರ ಜೇಬಿಗೆ ನೇರವಾಗಿ ಕತ್ತರಿಹಾಕುತ್ತಿದೆ ಎಂದು ಕಿಡಿಕಾರಿದರು.
ಇಂಧನ ತೈಲ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದನ್ನು ಖಂಡಿಸಿ ಸಾವಿರಾರು ಎಎಪಿ ಕಾರ್ಯಕರ್ತರು ಬೆಂಗಳೂರು, ಮೈಸೂರು ನಗರ ಸೇರಿಂದತೆ ರಾಜ್ಯದ ಎಲ್ಲೆಡೆ ಪೆಟ್ರೋಲ್ ಬ್ಯಾಂಗ್‌ಗಳ ಮುಂದೆ ಜಮಾವಣೆಗೊಂಡ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ಮಾಡಿದರು.