ಬೆಂಗಳೂರು: ರಾಜ್ಯದಲ್ಲಿ ಅನ್ ಲಾಕ್ ಆರಂಭವಾದ ಬೆನ್ನಲೆ ಕೆಎಸ್ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಸೋಮವಾರ ಬೆಳಗ್ಗೆಯಿಂದ ಆರಂಭವಾಗಿದ್ದು, ಸ್ವಲ್ಪಪಟ್ಟಿಗೆ ಗೊಂದವಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು. ಆದರೆ, ಇಂದು ಆ ರೀತಿಯ ಸಮಸ್ಯೆ ಇಲ್ಲದೆ ಸಂಚಾರ ಸುಗಮವಾಗಿದ್ದು ನಡೆಯುತ್ತಿದೆ.
ಬಿಎಂಟಿಸಿಯು ಸೋಮವಾರ ಮಧ್ಯಾಹ್ನದ ವೇಳೆಗೆ 3154 ಬಸ್‌ಗಳು ಸಂಚರಿಸಿದವು. ಮಂಗಳವಾರ ಬೆಳಗ್ಗೆಯಿಂದ ಅಷ್ಟೇ ಪ್ರಮಾಣದ ಬಸ್‌ಗಳು ರಸ್ತೆಗಿಳಿದಿವೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿ ಶೇ. 50ರಷ್ಟು ಪ್ರಯಾಣಿಕರೊಂದಿಗೆ ಬಸ್ ಸೇವೆಗೆ ಅವಕಾಶ ಮಾಡಿಕೊಟ್ಟಿದೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.ಕರ್ತವ್ಯಕ್ಕೆ ಹಾಜರಾದ ಸಾರಿಗೆ ಸಿಬ್ಬಂದಿಗೆ ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು ಹಾಗೂ ಕೋವಿಡ್ ಲಕ್ಷಣಗಳನ್ನು ಹೊಂದಿರಬಾರದು ಎಂದು ಈಗಾಗಲೇ ನಿರ್ದೇಶನ ನೀಡಲಾಗಿದೆ.
ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕೆಎಸ್ಆರ್‌ಟಿಸಿಯ 3ಸಾವಿರಕ್ಕೂ ಹೆಚ್ಚು ಬಸ್ ಸಂಚರಿಸುತ್ತಿವೆ. ಆದರೆ, ಮೈಸೂರಿನಲ್ಲಿ ನಿರ್ಬಂಧ ಸಡಿಲಿಕೆ ಇಲ್ಲದ ಕಾರಣ ಬಸ್ ಸಂಚಾರ ಆರಂಭವಾಗಿಲ್ಲ. ಕೆಎಸ್ಆರ್‌ಟಿಸಿಯು ಅಂತರ ಜಿಲ್ಲಾ ಬಸ್ ಸಂಚಾರ ಆರಂಭಿಸಿದೆ.
ಇನ್ನು ಎನ್‌ಇಕೆಆರ್‌ಟಿಸಿ ಮತ್ತು ಎಸ್‌ಡಬ್ಲ್ಯುಕೆಆರ್‌ಟಿಸಿ ಎರಡೂ ನಿಗಮಗಳಿಂದ 2500 ಹೆಚ್ಚು ಬಸ್‌ಗಳು ಸಂಚರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲೆಗಳಲ್ಲಿ ಪ್ರಯಾಣಿಕರ ಜನದಟ್ಟಣೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಸ್ಥಳೀಯ ಮತ್ತು ದೂರ ಮಾರ್ಗದ ಅಂತರ ಜಿಲ್ಲಾ ಸಾರಿಗೆಗಳ ಕಾರ್ಯಾಚರಣೆಯನ್ನು ಪಾರಂಭಿಸಲಾಗಿದೆ. ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕೋಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೋರಲಾಗಿದೆ.