ಬೆಳಗಾವಿ: ಕಳೆದ ಮಾರ್ಚ್‌ನಿಂದ ಈವರೆಗೆ ಸುಮಾರು 4 ಸಾವಿರ ಕೋಟಿ ರೂ. ಸಾರಿಗೆಯ ನಾಲ್ಕೂ ನಿಗಮಗಳಿಗೆ ನಷ್ಟವಾಗಿದೆ. ಅದಕ್ಕೆ ಮುಖ್ಯ ಕಾರಣ, 20 ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಕೋವಿಡ್ ಪ್ರಕರಣಗಳು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೆಳಗಾವಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾರಿಗೆ ಬಸ್‌ಗಳ ಕಾರ್ಯಚರಣೆ ಕುಂಟಿತ ಆಗಿದೆ, ಅತಿವೃಷ್ಟಿ ಬಳಿಕ ಕೊರೊನಾ ಸಮಸ್ಯೆ, ಬಳಿಕ ಇಲಾಖೆ ಸಿಬ್ಬಂದಿ ಪ್ರತಿಭಟನೆ, ಬಳಿಕ ಮತ್ತೆ ಕೊರೊನಾ ಎರಡನೇ ಅಲೆ ಬಂದಿದ್ದರಿಂದ, ಸರ್ಕಾರದಲ್ಲಿ ಹೆಚ್ಚು ನಷ್ಟ ಸಾರಿಗೆ ಇಲಾಖೆಗೆ ಆಗಿದೆ ಎಂದರು.
ಸಾರಿಗೆ ಇಲಾಖೆ ನಷ್ಟ ಅನುಭವಿಸುತ್ತಿದ್ದರೂ 2600 ಕೋಟಿ ರೂ. ಸಂಬಳವನ್ನು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಿದ್ದೇವೆ. 50 ಪ್ರತಿಶತ ಈಗ ಸಾರಿಗೆಯಲ್ಲಿ ಜನ ಪ್ರಯಾಣಿಸಲು ಅವಕಾಶ ಇರುವುದರಿಂದ ಬರುವ ಆದಾಯ ಅಧಿಕಾರಿಗಳು ಮತ್ತು ನೌಕರರ ಸಂಬಳ, ಇಂಧನಕ್ಕೆ ಸಾಲದಾಗಿದೆ.
ಈ ನಡುವೆ ಇನ್ನೂ ಮೂರು ನಾಲ್ಕು ತಿಂಗಳು ಹೆಚ್ಚು ಜನರ ಪ್ರಯಾಣಕ್ಕೆ ಅವಕಾಶ ಇಲ್ಲ. ನಮ್ಮ ಸರ್ಕಾರಕ್ಕೆ ನಷ್ಟ ಆದರೂ ಪರವಾಗಿಲ್ಲ, ಜನರ ಆರೋಗ್ಯ ಮುಖ್ಯ. ಈ ದೃಷ್ಟಿಯಿಂದ ಬಸ್‌ಗಳಲ್ಲಿ ಕೋವಿಡ್ ನಿಯಮ ಪಾಲಿಸಲಾಗುತ್ತಿದೆ ಎಂದು ಹೇಳಿದರು.
ಇನ್ನು ಜುಲೈ 5ರ ಬಳಿಕ ಸಾರಿಗೆ ಇಲಾಖೆ ಸಿಬ್ಬಂದಿ ಮತ್ತೆ ಮುಷ್ಕರ ನಡೆಸಲಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಸವದಿ, ಹಿಂದೆ ಸಾರಿಗೆ ಸಿಬ್ಬಂದಿ ಬಳಸಿಕೊಂಡು ಯಾರು ಕುತಂತ್ರ ಮಾಡಿದ್ದಾರೆ ಎಂಬುವುದು ತಿಳಿದಿದೆ. ನೌಕರರಿಗೂ ಯಾರು ಹುನ್ನಾರ ಮಾಡಿದ್ದು ಎಂಬುವುದು ಗೊತ್ತಿದೆ.
ಇನ್ನು ಅವರ ಹುನ್ನಾರಕ್ಕೆ ನಾವು ಒಳಗಾಗಾಗಿದ್ದೇವೆ ಎಂದು ಸಾರಿಗೆ ಸಿಬ್ಬಂದಿಗೆ ಈಗ ಅರ್ಥವಾಗಿದೆ. ನೌಕರರ ಏಳಿಗೆ ಸಹಿಸಲಾಗದ ಪಟ್ಟಭದ್ರ ಹಿತಾಸಕ್ತಿಗಳು ಹುನ್ನಾರ ಮಾಡಿವೆ. ಆ ಹುನ್ನಾರ ಮಾಡಿದ್ದು, ಯಾರು ಎಂದು ನಾ ಹೇಳಲ್ಲ ಅದು ನಿಮಗೆ ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ತಿಳಿಸಿದರು.