ಬೆಂಗಳೂರು: ಅತಿ ಶೀಘ್ರದಲ್ಲಿ ನಾನು ತಂದೆ ಆಗುತ್ತಿದ್ದೇನೆ ಎಂದು ಜೆಡಿಎಸ್ ಯುವರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಂತಸ ಹಂಚಿಕೊಂಡಿದ್ದಾರೆ.
ಸುದ್ದಿಗೋಷ್ಠಿ ವೇಳೆ ಸುದ್ದಿಗಾರರು ಕೇಳಿದಕ್ಕೆ ಪ್ರತಿಕ್ರಿಸಿದ ಅವರು, ಇದು ವೈಯಕ್ತಿಕ ವಿಚಾರ. ಕೆಲವೊಂದು ವೈಯಕ್ತಿಕ ವಿಚಾರವನ್ನು ನಾನು ಹೊರಗೆ ಹೇಳೋಕೆ ಇಷ್ಟ ಪಡುವುದಿಲ್ಲ. ಆದರೆ, ನಾವು ಸಾರ್ವಜನಿಕ ಬದುಕಲ್ಲಿ ಇದ್ದಮೇಲೆ ಕೆಲವೊಂದಷ್ಟು ವಿಚಾರಗಳು ಹರಿದು ಬರುತ್ತವೆ. ನೀವು ಕೇಳಿರುವ ವಿಚಾರ ನಿಜ ಎಂದು ಹೇಳಿದರು.
ಇನ್ನು ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಜೋರಾಗಿ ಹರಡಿತ್ತು. ಆದರೆ, ಈ ಬಗ್ಗೆ ಅವರ ಕಡೆಯಿಂದ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಹೀಗಾಗಿ, ಈ ಸುದ್ದಿ ನಿಜವೋ ಅಥವಾ ಸುಳ್ಳೋ ಎನ್ನುವ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟತೆ ಇರಲಿಲ್ಲ. ಈಗ ತಾವು ತಂದೆ ಆಗುತ್ತಿರುವುದು ಹೌದು ಎಂದು ಹೇಳಿದ್ದು, ಅಭಿಮಾನಿಗಳಲ್ಲಿ ಸ್ಪಷ್ಟತೆ ಸಿಕಂತ್ತಾಗಿದೆ.
ನಿಖಿಲ್ ಹಾಗೂ ರೇವತಿ ಕಳೆದ ವರ್ಷ ಅದ್ದೂರಿಯಾಗಿ ಮದುವೆ ಆಗಲು ನಿರ್ಧರಿಸಿದ್ದರು. ಮಂಡ್ಯದಲ್ಲಿ ಸಾವಿರಾರು ಜನರಿಗೆ ಊಟ ಹಾಕೋಕೆ ಸಿದ್ಧತೆ ನಡೆದಿತ್ತು. ಆದರೆ, ಆಗ ಕೊರೊನಾ ಸೋಂಕು ಹರಡುತ್ತಿದ್ದರಿಂದ ಮದುವೆ ಕುಟುಂಬದವರ ಸಮ್ಮುಖದಲ್ಲಿ ಸಿಂಪಲ್ ಆಗಿ ನಡೆದಿತ್ತು. ಈಗ ನಿಖಿಲ್ ತಂದೆ ಆಗುತ್ತಿರುವ ವಿಚಾರ ಅವರ ಅಭಿಮಾನಿ ಬಳಗಕ್ಕೆ ಖುಷಿ ನೀಡಿದೆ.
ಸದ್ಯ ನಿಖಿಲ್ ‘ರೈಡರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ‘ಸೀತಾರಾಮ ಕಲ್ಯಾಣ’ ಚಿತ್ರದ ನಂತರ ಅವರ ನಟನೆಯ ಬೇರೆ ಯಾವುದೇ ಸಿನಿಮಾಗಳು ತೆರೆಕಂಡಿಲ್ಲ. ರೈಡರ್ ಸಿನಿಮಾದ ಶೂಟಿಂಗ್ಗಾಗಿ ಕೆಲ ತಿಂಗಳ ಹಿಂದೆ ಲೇಹ್-ಲಡಾಕ್ಗೆ ತೆರಳಿದ್ದರು. ಆಗ ಅವರು ಕೊವಿಡ್ ಪರೀಕ್ಷೆಗೆ ಒಳಗಾಗಿದ್ದು ಕೊರೊನಾ ಪಾಸಿಟಿವ್ ಆಗಿತ್ತು.