NEWSನಮ್ಮರಾಜ್ಯ

ಕೋವಿಡ್‌ನಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಕ್ಕೆ ಇನ್ನೂ ಸಿಕ್ಕಿಲ್ಲ 30 ಲಕ್ಷ ರೂ. ಪರಿಹಾರ: ಬೀದಿಗೆ ಬಿದ್ದ ಫ್ಯಾಮಿಲಿ

ಸರ್ಕಾರದ ತಾರತಮ್ಯ ಧೋರಣೆಗೆ ಕಣ್ಣೀರಿನಲ್ಲೇ ಕೈ ತೊಳೆಯುತ್ತಿವೆ ನೌಕರರ ಕುಟುಂಬಗಳು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾ ವಾರಿಯರ್ಸ್‌ಗಳಾದ ಸಾರಿಗೆ ನೌಕರರು ಕೊರೊನಾ ಸೋಂಕಿನಿಂದ ಮೃತಪಟ್ಟರೆ ರಾಜ್ಯ ಸರ್ಕಾರ 30 ಲಕ್ಷ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಇನ್ನೂ ಸಾರಿಗೆ ನೌಕರರಿಗೆ ಪರಿಹಾರ ಸಿಕ್ಕಿಲ್ಲ. ಇದನ್ನು ಗಮನಿಸಿದಾಗ ನೌಕರರನ್ನು ರಾಜ್ಯ ಸರ್ಕಾರ ಕಡೆಗಾಣುತ್ತಿದ್ದು, ಕೊಟ್ಟ ಮಾತು ತಪ್ಪಿದೆ ಎಂದು ತಿಳಿದುಬಂದಿದೆ.

ಕೆಎಸ್ಆರ್​ಟಿಸಿ, ಬಿಎಂಟಿಸಿ, ಎನ್ಇಕೆಆರ್​ಟಿಸಿ ಮತ್ತು ಎನ್​ಡಬ್ಲ್ಯುಕೆಆರ್​ಟಿಸಿಯ 213ಕ್ಕೂ ಹೆಚ್ಚು ನೌಕರರು ಈವರೆಗೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಆದರೆ ಈ ಪೈಕಿ ಕೇವಲ ಏಳು ಜನರಿಗೆ ಮಾತ್ರ ಪರಿಹಾರ ಬಿಡುಗಡೆ ಮಾಡಿದೆ. ಅದನ್ನು ಬಿಟ್ಟರೆ ಮೃತರು ಕುಟುಂಬದವರಿಗೆ ಮಾನವೀಯತೆ ದೃಷ್ಟಿಯಿಂದ ಒಂದು ಸಾಂತ್ವನದ ಮಾತನ್ನು ಆಡಿಲ್ಲ ಎಂದು ತಿಳಿದು ಬಂದಿದೆ.

ಬಿಎಂಟಿಸಿ ಒಂದರಲ್ಲೇ ಮೊದಲ ಅಲೆಯಲ್ಲಿ 30 ನೌಕರರು, ಎರಡನೇ ಅಲೆಯಲ್ಲಿ 60 ನೌಕರರು ಸೇರಿ ಒಟ್ಟು 90 ನೌಕರರು ಕೊರನಾಗೆ ಬಲಿಯಾಗಿದ್ದರು. ಕೆಎಸ್ಆರ್​ಟಿಸಿಯಲ್ಲಿ ಎರಡು ಅಲೆಯಲ್ಲಿ 70 ನೌಕರರು ಸಾವನ್ನಪ್ಪಿದ್ದರು. ವಾಯುವ್ಯ ಮತ್ತು ಈಶಾನ್ಯ ಸಾರಿಗೆಯಲ್ಲಿ 60 ನೌಕರರು ಕೊನೆಯುಸಿರೆಳೆದಿದ್ದರು. ಆದರೆ ಏಳು ಜನರಿಗೆ ಮಾತ್ರ ಪರಿಹಾರ ಬಿಡುಗಡೆಯಾಗಿದೆ.

ಸಾರಿಗೆ ನೌಕರರು ಪ್ರಾಣವನ್ನು ಲೆಕ್ಕಿಸದೆ ಕೆಲಸದಲ್ಲಿ ನಿರತರಾಗಿ ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ಆದರೆ ಈಗ ನಾಲ್ಕು ಸಾರಿಗೆ ನಿಗಮಗಳು ನಮ್ಮ ಬಳಿ ಕೋವಿಡ್​ನಿಂದ ಮೃತಪಟ್ಟ ನೌಕರರ ಮಾಹಿತಿಯೇ ಇಲ್ಲ ಎನ್ನುತ್ತಿವೆ. ನೌಕರರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಅಂತ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ. ಕೆಲವರು ರಜೆಯ ಮೇಲಿದ್ದರು. ಮತ್ತೆ ಕೆಲವರಿಗೆ ಮೊದಲೇ ಅರೋಗ್ಯ ಸಮಸ್ಯೆಗಳಿತ್ತು. ಆಸ್ಪತ್ರೆಯ ವೈದ್ಯರಿಂದ ಯಾವುದೇ ಸರ್ಟಿಫಿಕೇಟ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಯಾವುದೇ ಪರಿಹಾರ ಕೊಡಲು ಸಾಧ್ಯವಿಲ್ಲ ಅಂತ ಜಾರಿಕೊಳ್ಳುತ್ತಿದ್ದಾರಂತೆ.

ಇತ್ತ ಮನೆಯ ಯಜಮಾನನು ಇಲ್ಲ. ಸಂಸ್ಥೆಯಿಂದ ಸಂಬಳವು ಬರುತ್ತಿಲ್ಲ. ಅತ್ತ ಪರಿಹಾರವು ಇಲ್ಲದೆ ಕುಟುಂಬ ನಡು ಬೀದಿಯಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಸೆಂಬರ್‌ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ ಸಂದರ್ಭದಲ್ಲಿ ಕೋವಿಡ್​ನಿಂದ ಮೃತಪಟ್ಟ ನೌಕರರಿಗೆ 30 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಅಂತ ಬೇಡಿಕೆ ಇಟ್ಟಿದ್ದರು. ಸರ್ಕಾರ ಕೂಡ ನೌಕರರಿಗೆ 30 ಲಕ್ಷ ರೂಪಾಯಿ ಪರಿಹಾರ ನೀಡುವ ಭರವಸೆ ನೀಡಿತ್ತು.

ಅಗತ್ಯ ಸೇವೆ ಹೆಸರಲ್ಲಿ ಕೊರೊನಾ ಸಂಕಷ್ಟ ಸಮಯದಲ್ಲೂ ಸರ್ಕಾರ ನಾಲ್ಕೂ ನಿಗಮದ ಬಸ್‌ಳನ್ನು ರೋಡಿಗಿಳಿಸಿತ್ತು. ನೌಕರರು ಬೇಡವೆಂದರೂ ಕೆಲಸಕ್ಕೆ ಬರುವಂತೆ ಒತ್ತಡ ಹೇರಿ ಹಾಜರಾಗುವಂತೆ ಮಾಡಿದ್ದರು. ಕಳೆದ ವರ್ಷ ಈ ಬಗ್ಗೆ ವಿಜಯಪಥ ಸಮಗ್ರವಾಗಿ ವರದಿ ಮಾಡಿತ್ತು.

ಕೆಲ ದೃಶ್ಯ ಮಾಧ್ಯಮಗಳು ವರಮಾಡಿದ್ದವು. ಈ ಎಲ್ಲದರಿಂದ ಎಚ್ಚೆತ್ತ ಸಾರಿಗೆ ಸಚಿವ ಲಕ್ಷ್ಮಣ ಸವದಿ ಒಂದು ಸಮಾರಂಭವನ್ನೇ ಆಯೋಜನೆ ಮಾಡಿ ಕೋವಿಡ್‌ನಿಂದ ಮೃತಪಟ್ಟಿದ್ದ ಏಳು ನೌಕರರ ಕುಟುಂಬಗಳಿಗಷ್ಟೇ ತಲಾ ಮೂವತ್ತು ಲಕ್ಷ ರೂಪಾಯಿ ಪರಿಹಾರ ನೀಡಿದ್ದರು.

ಬಳಿಕ ಉಳಿದವವರಿಗೆ ಅವರ ಮನೆಗೆ ಹೋಗಿ ಪರಿಹಾರದ ಚೆಕ್‌ ವಿತರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಕೊರೊನಾ ಮೊದಲನೇ ಅಲೆಯಲ್ಲಿ ಮೃತಪಟ್ಟವರೂ ಸೇರಿದಂತೆ 2ನೇ ಅಲೆಯಿಂದ ಮೃತಪಟ್ಟಿರುವ ಸಾರಿಗೆ ನೌಕರರ ಕುಟುಂಬಕ್ಕೆ ಈವರೆಗೂ ಪರಿಹಾರ ನೀಡುವಲ್ಲಿ ಮುಂದಾಗಿಲ್ಲ. ಸರ್ಕಾರ ಏಕೆ ಈ ಮೀನಾಮೇಷ ಎಣಿಸುತ್ತಿದೆ ಎಂಬುವುದು ಈವರೆಗೂ ನಿಗೂಢವಾಗಿಯೇ ಇದೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ