ರಾಯಚೂರು: ಕಳೆದ ಏಪ್ರಿಲ್‌ನಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರದಲ್ಲಿ ಭಾಗವಹಿಸಿದ್ದರು ಎಂದು ಆರೋಪಿಸಿ ವರ್ಗಾವಣೆ ಮಾಡಿರುವುದಕ್ಕೆ ಮನನೊಂದ ಎನ್‍ಇಕೆಆರ್ಟಿಸಿ ನೌಕರನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಮುಂದೆ ನಡೆದಿದೆ.
ವರ್ಗಾವಣೆ ವಿರೋಧಿಸಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದ ಬಸ್ ಚಾಲಕ ಸೈಯದ್ ಯೂನಸ್ ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳದಲ್ಲಿದ್ದವರು ವಿಷ ಬಾಟಲಿಯನ್ನು ಕಸಿದು ಎಸೆದಿದ್ದಾರೆ.
ಈ ಹಿಂದೆ ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡಿದ್ದರು ಎಂದು ಆರೋಪಿಸಿ ಇಲಾಖೆಯಿಂದ ಕಿರುಕುಳ ನೀಡಲಾಗುತ್ತಿದೆ. ಅಲ್ಲದೆ ರಾಯಚೂರಿನಿಂದ ಬೀದರ್ ಜಿಲ್ಲೆಯ ಬಾಲ್ಕಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಏಳು ಮಕ್ಕಳನ್ನು ಕಟ್ಟಿಕೊಂಡು ಬಾಲ್ಕಿಗೆ ಹೇಗೆ ಹೋಗಲಿ ಅಂತ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾನೆ. ಅಲ್ಲದೆ ಏಕಾಏಕಿ ವರ್ಗಾವಣೆ ಶಿಕ್ಷೆಗೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಏಪ್ರಿಲ್ ತಿಂಗಳಿನಿಂದ ವೇತನವನ್ನು ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಅಂತ ಚಾಲಕ ಯೂನಸ್ ಆರೋಪಿಸಿದ್ದಾರೆ. ವಿಷಯ ತಿಳಿದು ಕಚೇರಿಗೆ ಬಂದ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ ಸಿಬ್ಬಂದಿಯನ್ನು ಸಮಾಧಾನ ಪಡಿಸಲು ಯತ್ನಿಸಿದರು. ಕೇಂದ್ರ ಕಚೇರಿಯಿಂದ ಆದೇಶ ಬಂದಿದೆ ನಮ್ಮಿಂದ ಕಿರುಕುಳ ಆಗಿಲ್ಲ ಅಂತ ವೆಂಕಟೇಶ್ ಹೇಳಿದ್ದಾರೆ.