ಬೆಂಗಳೂರು: ನಗರದಲ್ಲಿ ಮುಖ್ಯ ಶಾಖೆಯನ್ನು ಹೊಂದಿರುವ ವಶಿಷ್ಟ ಕೋ- ಆಪರೆಟಿವ್ ಬ್ಯಾಂಕ್ ಬಾಗಿಲು ಮುಚ್ಚಿರುವ ಸುದ್ದಿ ಕೇಳಿಬರುತ್ತಿದ್ದು, ಕೆಲವು ದಿನಗಳ ಹಿಂದೆ ಇದೇ ರೀತಿ ರಾಘವೇಂದ್ರ ಕೋ -ಆಪರೆಟಿವ್ ತನ್ನ ಗ್ರಾಹಕರಿಗೆ ಉಂಡೆ ನಾಮ ತಿಕ್ಕಿ ಅವರ ಭವಿಷ್ಯಕ್ಕೆ ಕೊಡಲಿ ಪೆಟ್ಟುಕೊಟ್ಟಿದೆ.
ಈ ಹಗರಣದಲ್ಲಿಯೂ ಹಿಂದಿನ ರಾಘವೇಂದ್ರ ಕೋ ಆಪರೆಟಿವ್ ಬ್ಯಾಂಕ್ ಹಗರಣದಲ್ಲಿ ಭಾಗಿಯಾಗಿದ್ದ ಬಸವನಗುಡಿ ಶಾಸಕ, ಬಿಜೆಪಿ ಪ್ರಭಾವಿ ಮುಖಂಡ ರವಿ ಸುಬ್ರಹ್ಮಣ್ಯ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮುಖ್ಯ ವಕ್ತಾರ ಶರತ್ ಖಾದ್ರಿ ಆರೋಪಿಸಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೃತ್ತ ಜೀವನವನ್ನು ನೆಮ್ಮದಿಯಿಂದ ಕಳೆಯಲು ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರಿಗೆ ಜೀವನವೇ ಈಗ ಆಯೋಮಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮನೆಯಲ್ಲಿ ಜೀವನ ಕಳೆಯಬೇಕಾಗಿದ್ದವರು ಇಂದು ತಮ್ಮದೇ ಹಣಕ್ಕಾಗಿ ರಸ್ತೆಯಲ್ಲಿ ನಿಂತು ಬ್ಯಾಂಕ್ ನ ಎದುರು ಅಂಗಾಲಚುವ ಪರಿಸ್ಥಿತಿ ಉಂಟಾಗಿದೆ. ಈ ಎಲ್ಲ ಬ್ಯಾಂಕ್ ಗ್ರಾಹಕರ ಹಣವನ್ನು ವಾಪಸ್ ಕೊಡಬೇಕು ಮತ್ತು ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣದ ಕುರಿತಾಗಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು. ಆರೋಪಿಗಳ ಜೊತೆಗೆ ಬಿಜೆಪಿ ನಾಯಕರ ನಂಟಿನ ಬಗ್ಗೆಯೂ ಆಮೂಲಾಗ್ರ ತನಿಖೆ ನಡೆಸಿ ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡ ಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸುತ್ತದೆ ಎಂದರು.
ಪಾರದರ್ಶಕವಾಗಿ ನ್ಯಾಯಾಂಗ ತನಿಖೆ ನಡೆದರೆ ಜನರ ಹಣ ಲೂಟಿ ಮಾಡುತ್ತಿರುವ ಬಿಜೆಪಿಯ ಪಾಪದ ಕೊಡ ತುಂಬಿದ್ದು ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.
ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಮಾತನಾಡಿ, ವಶಿಷ್ಟ ಕೋ ಆಪರೆಟಿವ್ ಬ್ಯಾಂಕಿನ ಪ್ರಮುಖ ನಿರ್ದೇಶಕ ಕೆ.ಎನ್. ವೆಂಕಟನಾರಾಯಣ ಅನೇಕ ಬಿಜೆಪಿ ಪುಡಾರಿಗಳ ಗಳಸ್ಯ ಕಂಠಸ್ಯನಾಗಿದ್ದು ಆತನು ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಅನೇಕ ಬಿಜೆಪಿಗರಿಗೆ ಆಪ್ತವಾಗಿರುವು ಮತ್ತು ಒಟ್ಟಿಗೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಯಥೇಚ್ಚವಾಗಿ ದೊರಕುತ್ತವೆ.
ಮೇಲ್ನೋಟಕ್ಕೇ ಆತನಿಗೆ ಬಿಜೆಪಿ ಪ್ರಭಾವಿ ಮುಖಂಡರ ಕೃಪಾಕಟಾಕ್ಷ ಕಂಡುಬರುತ್ತದೆ. ಹೀಗಿರುವಾಗ ಪೊಲೀಸ್ ಅಥವಾ ಸಿಬಿಐ ತನಿಖೆಯಲ್ಲಿ ಬ್ಯಾಂಕ್ ನ ಸಹಸ್ರಾರು ಗ್ರಾಹಕರಿಗೆ ನ್ಯಾಯ ಸಿಗುವುದು ಅಸಂಭವ ಎಂದರು.