ಚಿತ್ರದುರ್ಗ: ಬೈಕ್ ಲಾರಿ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ನೋಟ್ಬುಕ್ ತರಲು ಪಟ್ಟಣದ ಬುಕ್ ಸ್ಟೋರ್ಗೆ ಬಂದಿದ್ದ ವಿದ್ಯಾರ್ಥಿ ಸ್ಥಳದಲ್ಲೇ ಸಾವಿಗೀಡಾಗಿರುವುದು ಜಿಲ್ಲೆಯ ಚಳ್ಳಕೆರೆ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ನಡೆದಿದೆ.
ನಗರಂಗೆರೆ ಗ್ರಾಮದ ಲಕ್ಷ್ಮೀನಾರಾಯಣ(12) ಮೃತ ಬಾಲಕ. ಆದರೆ ಅದೃಷ್ಟವಶಾತ್ ಬೈಕ್ ಸವಾರ ರಮೇಶ್(28) ಗೆ ಕಾಲು ಹಾಗೂ ಎದೆ ಭಾಗಕ್ಕೆ ತೀವ್ರ ಗಾಯವಾಗಿದ್ದು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಪಘಾತದ ಬಳಿಕ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಮುಂದಾಗಬೇಕಿದ್ದ ಕೆಲ ಜನರು ನರಳಾಡುವ ವ್ಯಕ್ತಿಯ ವಿಡಿಯೋ ಮಾಡುತ್ತಾ ಗಾಯಾಳುವಿನ ಆಕ್ರಂದನ ನೋಡುತ್ತ ನಿಂತು ಮಾನವೀಯತೆ ಮರೆತರು.
ಈ ನಡುವೆ ಸ್ಥಳೀಯರು ತಕ್ಷಣ ಗಾಯಾಳು ರಮೇಶನನ್ನು ಆಸ್ಪತ್ರೆಗೆ ದಾಖಲು ಮಾಡಿ, ಅಪಘಾತದ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೇ ಮೃತನ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಗಾಯಾಳುವಿನ ಮೊಬೈಲ್ಗೆ ಬಂದ ಫೋನ್ ಕರೆ ಮೂಲಕ ವಿಳಾಸ ಹಾಗೂ ಹೆಸರು ಪತ್ತೆಯಾಗಿದ್ದೂ, ತಕ್ಷಣ ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿದರು.
ಬಳಿಕ ಸ್ಥಳಕ್ಕೆ ಧಾವಿಸಿದ ಚಳ್ಳಕೆರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದೂ,ಲಾರಿ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ದುರ್ವಿಧಿ ಎಂಬಂತೆ ಕಳೆದ ಎರಡು ತಿಂಗಳುಗಳಿಂದ ಮನೆಯಲ್ಲಿಯೇ ಉಳಿದಿದ್ದ ಲಕ್ಷ್ಮೀನಾರಾಯಣ ತನ್ನ ಸಂಬಂಧಿ ಜೊತೆ ನೋಟ್ಬುಕ್ ತರಲು ಚಳ್ಳಕೆರೆಗೆ ಧಾವಿಸಿ ವಾಪಸ್ ಮನೆಗೆ ಬರಲಿಲ್ಲ.